Menu

ಕಾಲ ಮೇಲೆ ಹರಿದಾಡುವ ಹಾವು Varicose Veins  ಕಂಡಿದ್ದೀರಾ ನೀವು ?

ಮನೆಯ ಮೇಲ್ಗಡೆ ನೀರಿನ ಟ್ಯಾಂಕನ್ನು ಇಡುತ್ತೇವೆ. ಅದು ಎತ್ತರದಲ್ಲಿರುವುದರಿಂದ, ಪೈಪಗಳ ಮೂಲಕ ಕೊಳಾಯಿಗೆ ನೀರು ಹರಿಯುತ್ತದೆ. ಪುನ: ನೀರನ್ನು ಪೈಪ್ ಗಳ ಮೂಲಕ ಟ್ಯಾಂಕಿಗೆ ತುಂಬಬೇಕೆಂದರೆ, ಅದು ಸುಲಭವಾಗಿ ಮೇಲಕ್ಕೆ ಹತ್ತುವುದಿಲ್ಲ. ಅದಕ್ಕೆ ಪಂಪನ್ನು ಬಳಸಬೇಕಾಗುತ್ತದೆ. ನಮ್ಮ ಶರೀರದಲ್ಲಿ ರಕ್ತ ಪ್ರವಾಹವೂ ಹೀಗೆಯೇ ನಡೆಯುತ್ತದೆ. ಹೃದಯವು ಬಲವಾಗಿ ಪಂಪಿಂಗ್ ಮಾಡುವುದರಿಂದ, ರಕ್ತನಾಳಗಳ ಮೂಲಕ, ಸುಲಭವಾಗಿ, ರಕ್ತವು ತಲೆಯಿಂದ ಕಾಲಿನವರೆಗೂ ಪ್ರವಹಿಸುತ್ತದೆ. ಆದರೆ, ಅಶುದ್ಧ ರಕ್ತವು, ಕಾಲಿನಿಂದ ತಲೆಯವರೆಗೂ ಬರಬೇಕೆಂದರೆ, ಕಾಲಿನ ರಕ್ತನಾಳಗಳು ಬಹಳ ಶ್ರಮ ಪಡುತ್ತವೆ. ಮೇಲೆ ಹೋಗುವ ರಕ್ತವು ಕೆಳಗೆ ಜಾರದಂತೆ ನೋಡಿಕೊಳ್ಳಲು, ಈ ರಕ್ತನಾಳಗಳಲ್ಲಿ ಪ್ರತ್ಯೇಕ ವ್ಯವಸ್ಥೆಯೂ ಇದೆ.

ಎಪ್ಟೇ ಏರ್ಪಾಡುಗಳಿದ್ದರೂ ಸಹ, ಈ ರಕ್ತನಾಳಗಳು ಪೆಟ್ಟು ತಿನ್ನುತ್ತವೆ. ಆದ್ದರಿಂದ, ಮೇಲಕ್ಕೆ ಹೋಗಬೇಕಿದ್ದ ರಕ್ತವು, ಹೋಗದೆ ಕಾಲುಗಳಲ್ಲಿಯೇ ನಿಂತು ಬಿಡುತ್ತದೆ. ಹೀಗೆ ರಕ್ತವು ಹೆಚ್ಚಾಗಿ ತುಂಬುವುದರಿಂದ, ಈ ರಕ್ತನಾಳಗಳು ಉಬ್ಬಿಕೊಳ್ಳುತ್ತವೆ. ಎದ್ದುಕಾಣುತ್ತವೆ. ಅಲ್ಲಲ್ಲಿ ತಿರುಚಿಕೊಳ್ಳುತ್ತವೆ. ಎಷ್ಟೋ ಮಂದಿಗೆ, ಮಂಡಿಯ ಕೆಳಗೆ ಮೀನಗಂಡದ ಮೇಲೆ, ತೊಡೆಗಳ ಮೇಲೆ, ಉಬ್ಬಿದಂತೆ, ಗಂಟುಗಂಟಾಗಿ ಕಾಣುವವು. ಇವೇ “ವೆರಿಕೋಜ ವೇನ್ಸ “. ಕಾಲುಗಳ ಮೇಲೆ ಹೀಗೆ ಬಹಳ ಜನಕ್ಕೆ ನರಗಳು ಉಬ್ಬಿದಂತೆ ಕಾಣಬಹುದು.ಇವು ಅಂಕುಡೊಂಕಾಗಿ ಹರಿದಾಡುವ ಹಾವುಗಳಂತೆ ಗೋಚರಿಸುವವು. ಎಲ್ಲರಿಗೂ ಇದರಿಂದ ತೊಂದರೆ ಆಗದಿರಬಹುದು. ಆದರೆ, ಕೆಲವರಿಗೆ ತಹರೇವಾರಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಈ ನರಗಳಲ್ಲಿ ಹೆಚ್ಚು ರಕ್ತವು ಸೇರಿಕೊಳ್ಳುವುದರಿಂದ, ಚರ್ಮವು ನರದ ಸುತ್ತಲೂ ಚೀಲದಂತಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹುಣ್ಣುಗಳಾಗಿ, ಮಾಯದೆ ಬಾಧಿಸುತ್ತವೆ. ನಡೆಯುವಾಗ ಮೀನಖಂಡದ ಹತ್ತಿರ ಸೆಳೆದಂತೆ, ಉರಿಯುತ್ತ ಜಗ್ಗಿದ ಅನುಭವವಾಗುತ್ತದೆ. ಹೇಳಲಾರದ ನೋವು ಉಂಟಾಗುತ್ತದೆ.

ನರಗಳು ( Veins) ಏಕೆ ಉಬ್ಬುತ್ತವೆ ?

ನಮ್ಮ ಶರೀರದಲ್ಲಿ ಮುಖ್ಯವಾಗಿ, ಎರಡು ರೀತಿಯ ರಕ್ತನಾಳಗಳಿವೆ. ಒಂದು- ಹೃದಯದಿಂದ ಶುದ್ಧ ರಕ್ತವನ್ನು ಶರೀರದಾದ್ಯಂತ ತಗೆದುಕೊಂಡು ಹೋಗುವ ರಕ್ತನಾಳಗಳು- ‘ ಅಪಧಮನಿಗಳು ‘.ಎರಡನೆಯದು- ಶರೀರದ ಎಲ್ಲಾ ಭಾಗಗಳಿಂದ ಹೃದಯಕ್ಕೆ ಅಶುದ್ಧ ರಕ್ತವನ್ನು ಕೊಂಡೊಯ್ಯುವ ರಕ್ತನಾಳಗಳು- ‘ಅಭಿದಮನಿಗಳು’ ಹೃದಯವು ಬಲವಾಗಿ ರಕ್ತವನ್ನು ಪಂಪ್ ಮಾಡುವದರಿಂದಾಗಿ ಅಪಧಮನಿಗಳಲ್ಲಿ ಸರಾಗವಾಗಿ ರಕ್ತವು ಪ್ರವಹಿಸುತ್ತದೆ. ಅಶುದ್ಧ ರಕ್ತವನ್ನು ಕೊಂಡೊಯ್ಯುವ ರಕ್ತನಾಳಗಳಲ್ಲಿ ಈ ರೀತಿಯ ಬಲವಾದ ಪಂಪಿಂಗ್ ವ್ಯವಸ್ಥೆಯು ಇಲ್ಲದಿರುವುದರಿಂದ, ಅಲ್ಲಲ್ಲಿ ರಕ್ತವು ಹಿಂದಕ್ಕೆ ತಿರುಗಿ ಹರಿಯುತ್ತದೆ. ಇದು ಶರೀರದಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆ.

ನಮ್ಮ ಕಾಲುಗಳಲ್ಲಿರುವ ರಕ್ತನಾಳಗಳ ಮೇಲೆ ಸಹಜವಾಗಿಯೇ ಒತ್ತಡವು ಹೆಚ್ಚು. ಏಕೆಂದರೆ, ಇವು ಕೆಳಗಿನಿಂದ ಅಶುದ್ಧ ರಕ್ತವನ್ನು ಮೇಲಕ್ಕೆ ಹೃದಯಕ್ಕೆ ತರಬೇಕು. ಹಾಗೆ ಮೇಲಕ್ಕೆ ತರುವಾಗ, ರಕ್ತವು ಕೆಳಕ್ಕೆ ಜಾರಿ ಹೋಗದಂತೆ ತಡೆಯಲು ಅವಕ್ಕೆ ಪ್ರತ್ಯೇಕ ಕವಾಟಗಳಿವೆ. ಬೇರೆ ಬೇರೆ ಕಾರಣಗಳಿಂದ, ಈ ಕವಾಟಗಳು ಪೆಟ್ಟು ತಿಂದು, ರಕ್ತವು ಕೆಳಕ್ಕೆ ಜಾರಿ, ಕಾಲಿನಲ್ಲಿಯ ರಕ್ತನಾಳಗಳಲ್ಲಿ ಶೇಖರಗೊಳ್ಳುತ್ತದೆ. ಇವೆಲ್ಲದರ ಪರಿಣಾಮವಾಗಿ ನರಗಳು ಉಬ್ಬುತ್ತವೆ.

ನಡೆದಾಡುವಾಗ ,ಮಾಂಸಖಂಡಗಳು ಅಲುಗಾಡುತ್ತ ನರಗಳ ಮೇಲೆ ಚೆನ್ನಾಗಿ ಒತ್ತಡವನ್ನು ಹಾಕುತ್ತವೆ. ಈ ಒತ್ತಡದಿಂದ, ನರಗಳು ರಕ್ತವನ್ನು ಮೇಲಕ್ಕೆ ಕಳಿಸುತ್ತವೆ. ಇದು ಮಾಮೂಲಾಗಿ ನಡೆಯುವಂತಹುದು. ಇದಕ್ಕೋಸ್ಕರ, ಕಾಲುಗಳಲ್ಲಿ ಮೂರು ರೀತಿಯ ನರಗಳಿವೆ. ಕೆಲವು ನರಗಳು ಚರ್ಮದ ಕೆಳಗೆ ಇರುತ್ತವೆ. ಇವನ್ನು ”ಸೂಪರ್ ಫಿಷಿಯಲ್ ವೇನ್ಸ್ ‘ ಎನ್ನುತ್ತಾರೆ. ಇನ್ನು ಕೆಲವು, ತುಂಬಾ ಒಳಕ್ಕೆ ಅಂದರೆ, ಮಾಂಸಖಂಡಗಳ ಮಧ್ಯೆ ಇರುತ್ತವೆ. ಇವುಗಳಿಗೆ ‘ ಡೀಪ್ ವೇನ್ಸ್ ‘ ಎನ್ನುತ್ತಾರೆ. ಮತ್ತೆ ಕೆಲವು, ಈ ಎರಡರ ಮಧ್ಯದಲ್ಲಿ, ಎರಡನ್ನೂ ಜೋಡಿಸುವಂತೆ ಇರುವಂತಹವನ್ನು ‘ಪರ್ಪೊರೇಟಿಂಗ್ ವೇನ್ಸ್ ‘ ಅನ್ನುತ್ತಾರೆ. ಈ ಮೂರೂ ರೀತಿಯ ನರಗಳು ಒಂದು ಸಮನ್ವಯದಿಂದ, ಒಂದು ಕ್ರಮವನ್ನನುಸರಿಸಿ ಕೆಲಸಮಾಡಿದಾಗ, ರಕ್ತವು ಮೇಲಕ್ಕೆ ಹೋಗುತ್ತದೆ.

ನಡೆಯುವಾಗ ರಕ್ತವು ಚರ್ಮದ ಕೆಳಗಿನ ನರಗಳಿಂದ, ಮಾಂಸಖಂಡಗಳ ನಡುವಿನ ನರಗಳಿಗೆ ಹೋಗುತ್ತದೆ. ಹೀಗೆ ತಗೆದುಕೊಂಡು ಹೋಗುವ ಕೆಲಸವನ್ನು ಪರ್ಪೊರೇಟಿಂಗ್ ವೇನ್ಸ್ ಮಾಡುತ್ತವೆ. ಇವು ಮೇಲಿನಿಂದ ಒಳಕ್ಕೆ ಹೋಗಲು ಬಿಡುತ್ತವೆಯೇ ಹೊರತು, ವಾಪಸ್ಸಾಗಲು ಬಿಡುವುದಿಲ್ಲ. ಇವು ಸರಿಯಾಗಿ ಕೆಲಸಮಾಡದಿದ್ದಾಗ ರಕ್ತವು ಸರಿಯಾಗಿ ಒಳಗಿನ ನರಗಳಿಗೆ ಸೇರದೇ ಉಬ್ಬು ನರಗಳುಂಟಾಗುತ್ತವೆ.

ಸಮಸ್ಯೆ ಇಂದು ನಿನ್ನೆಯದಲ್ಲ

ಕಾಲುಗಳಲ್ಲಿ ನರಗಳ ಉಬ್ಬುವಿಕೆ ಆಧುನಿಕ ಯುಗದ ಸಮಸ್ಯೆಯೇನಲ್ಲ. ಕಾಡುಪ್ರಾಣಿಯಿಂದ ಮನುಷ್ಯನು ಹುಟ್ಟಿ ಎರಡು ಕಾಲುಗಳ ಮೇಲೆ ನಿಂತಾಗಿನಿಂದಲೂ ಇದೆ. ಪ್ರಾಚೀನ ಕಾಲದ ಗ್ರೀಕ್ ಯೋಧರೂ ಸಹ, ‘ ಉಬ್ಬು ನರದ ಬಾಧೆಯಿಂದ ಪಾರುಮಾಡು ತಾಯೇ….. ‘ ಎಂದು ದೇವರನ್ನು ಪ್ರಾರ್ಥಿಸಿದ್ದರ ಬಗ್ಗೆ ಪುರಾವೆಗಳಿವೆ. 18ನೇ ಶತಮಾನದ ಕೊನೆಯ ದಿನಗಳಲ್ಲಿಯೂ ಸಹ, ಈ ಉಬ್ಬು ನರಗಳ ಸಮಸ್ಯೆಯನ್ನು ಆ ಜಾಗಾದ ನರಗಳಲ್ಲಿ ಉಂಟಾಗಿರುವ ಸಮಸ್ಯೆಯೆಂದು ಭಾವಿಸಿ, ಅವನ್ನು ಚರ್ಮದ ಮೇಲೆಯೇ ಸುಡುತ್ತಿದ್ದರು. ಕ್ರಮೇಣ ಇದು ದೇಹದ ಎಲ್ಲಾ ಪದಗಳಲ್ಲಿ ಪ್ರವಹಿಸುವ ರಕ್ತಕ್ಕೆ ಸಂಬಂಧಿಸಿದ್ದೆಂದು ಅರ್ಥವಾಯಿತು.

ಎರಡನೇ ಮಹಾಯುಧ್ಧದ ನಂತರದ ದಿನಗಳಲ್ಲಿ, ಶಸ್ತ್ರಚಿಕಿತ್ಸಾ ಪದ್ಧತಿಯು ಬಳಕೆಗೆ ಬಂದು, ಇದಕ್ಕೆ ಶಸ್ತ್ರಚಿಕಿತ್ಸೆ ಶುರುವಾಯಿತು. ಹಿಂದಿನ ಶತಮಾನದ ಈ ಉಬ್ಬುನರದ ಸಮಸ್ಯೆಗೆ ಸಂಬಂಧಿಸಿದಂತೆ, ಗಣನೀಯ ಪ್ರಗತಿಯಾಗಿದೆ. ಸಮಸ್ಯೆಯನ್ನು ಸರಿಯಾಗಿ ಗುರುತಿಸುವಂತಹ ಪರೀಕ್ಷೆಗಳು, ನರಗಳನ್ನು ದೊಡ್ಡದಾಗಿ ಸೀಳದೆ ಲೇಸರ್, ರೇಡಿಯೋಫ್ರಿಕ್ವೆನ್ಸಿ ಅಬ್ಲೇಷನ್ ಗಳಿಂದ ಸರಿಪಡಿಸುವಿಕೆ ಇವೆಲ್ಲವೂ ಇತ್ತೀಚಿನ ಪ್ರಗತಿಯಿಂದ ಉಂಟಾದವು.

ಯಾರಿಗೆ ಬರಬಹುದು?

* ಇದು ವಂಶಪಾರಂಪರ್ಯವಾಗಿ ಬರುವ ಸಾಧ್ಯತೆಗಳು ಜಾಸ್ತಿ.  ಈ ಸಮಸ್ಯೆ ಸ್ತ್ರೀಯರಲ್ಲಿ ಹೆಚ್ಚು. ಮುಖ್ಯವಾಗಿ, ಗರ್ಭಿಣಿಯರಲ್ಲಿ ಉಂಟಾಗುವ ಹಾರ್ಮೋನ್ ಗಳ ಬದಲಾವಣೆಯಿಂದ, ಅವರ ನರಗಳ ಮಾಂಸದ ಕವಾಟಗಳು ಬಿಟ್ಟುಕೊಳ್ಳುತ್ತವೆ.ಇದರಿಂದ, ರಕ್ತವು ಕೆಳಕ್ಕೆ ಜಾರಿಕೊಳ್ಳುತ್ತದೆ. ಇವು ಗರ್ಭಾವಧಿಯ ಮೊದಲ ಮೂರು ತಿಂಗಳ ಕಾಲದಲ್ಲಿ ಜಾಸ್ತಿ. ಸಾಮಾನ್ಯವಾಗಿ ಹೆರಿಗೆಯಾದ ಮೂರು ತಿಂಗಳಲ್ಲಿ ಇದು ತಂತಾನೇ ಹೊರಟುಹೋಗುತ್ತದೆ.
* ವಯಸ್ಸಾಗುತ್ತಿದ್ದಂತೆ ವೆರಿಕೋಜ ವೇನ್ಸ್ ಬರುವ ಸಾಧ್ಯತೆಗಳು ಹೆಚ್ಚುತ್ತವೆ.  ಹೆಚ್ಚು ಹೊತ್ತು ನಿಂತು ಕೆಲಸ ಮಾಡುವವರಿಗೆ ಈ ಸಮಸ್ಯೆಯ ಸಾಧ್ಯತೆಗಳು ಹೆಚ್ಚು. ಮುಖ್ಯವಾಗಿ ಪೋಲಿಸರು, ಸೆಕ್ಯುರಿಟಿ ಸಿಬ್ಬಂದಿ, ಕಂಡಕ್ಟರ್, ಸರ್ಜನ್ ಗಳು ಮುಂತಾದವರಿಗೆ, ಈ ಸಮಸ್ಯೆ ಬರುವ ಸಾಧ್ಯತೆಗಳು ಅಧಿಕ. ಸಹಜವಾಗಿಯೇ ಈ ಸಮಸ್ಯೆ ಬರುವ ಸಾಧ್ಯತೆಗಳಿರುವವರು ಇಂತಹ ವೃತ್ತಿಗಳಲ್ಲಿದ್ದರಂತೂ, ಅದು ಇನ್ನೂ ಪೂರಕವಾಗಿ ಪರಿಣಮಿಸುತ್ತದೆ. ಕಾಲು ಮೇಲೆ ಕಾಲು ಹಾಕಿ ಕುಳಿತರೆ ಈ ಸಮಸ್ಯೆ ಬರುತ್ತದೆಂಬುದು ತಪ್ಪು.

ಗುರುತಿಸುವುದು ಹೇಗೆ?

ಸಾಧಾರಣವಾಗಿ ಕಾಲಿನಲ್ಲಿ ನರಗಳು ಉಬ್ಬಿಕೊಂಡಂತೆ ಕಾಣಿಸುತ್ತವೆ. ಇದನ್ನು ನೋಡುತ್ತಲೇ ಗುರುತಿಸಬಹುದು. ಆದರೆ, ಎಲ್ಲರಲ್ಲೂ ಅದು ಹೀಗೆ ಉಬ್ಬಿದಂತೆ ಕಾಣುವುದಿಲ್ಲ. ಚರ್ಮದ ಬಣ್ಣ ಬದಲಾಗುವಿಕೆ, ಹುಣ್ಣಾಗುವಿಕೆ, ಊತಉಂಟಾಗುವಿಕೆ ಮುಂತಾದವು ಮಾತ್ರ ಇರುತ್ತವೆ. ಮತ್ತೆ ಕೆಲವರಲ್ಲಿ ಮುಳ್ಳಿನಂತೆ ಆಗಿ, ನವೆಯುತ್ತಾ, ಒಣ ಗಜಕರ್ಣ (Eczema) ದಂತೆಯೂ ಆಗಬಹುದು. ಇದನ್ನು ಬರೀ ಚರ್ಮದ ಸಮಸ್ಯೆಯೆಂದುಕೊಂಡು, ಸಕಾಲದಲ್ಲಿ ಅದಕ್ಕೆ ಗಮನ ಕೊಡದಿರುವವರೂ ಉಂಟು. ಆದ್ದರಿಂದ, ಕಾಲಿನ ನರಗಳು ಉಬ್ಬಿದಂತೆ ಕಂಡರೂ, ಕಾಣದಿದ್ದರೂ ಸಹ, ಈ ಮೇಲೆ ಹೇಳಿದ ಲಕ್ಷಣಗಳ ಆಧಾರದ ಮೇಲೆ, ಸಮಸ್ಯೆಯು ಮುಖ್ಯವಾದುದೆಂದು ಗುರುತಿಸುವುದು ಅವಶ್ಯಕ.

ವೆರಿಕೋಜ ವೇನ್ಸ್ ಗಳನ್ನು ಗುರುತಿಸಲು ಬಹಳ ಒಳ್ಳೆಯ ಮತ್ತು ಸುಲಭವಾದ ಉಪಾಯವೆಂದರೆ, ‘ ಕಲರ್ ಡ್ರಾಪ್ಲರ್ ‘ ಪರೀಕ್ಷೆ. ಇದರಲ್ಲಿ ರಕ್ತನಾಳಗಳಲ್ಲಿನ ರಕ್ತ ಪ್ರವಾಹವು ಹೇಗಿದೆಯೆಂಬುದು ತಿಳಿಯುತ್ತದೆ. ಈ ಪರೀಕ್ಷೆಯನ್ನು ಮಲಗಿಸಿ ಮಾಡುವುದಕ್ಕಿಂತ, ನಿಲ್ಲಿಸಿ ಮಾಡುವುದು ಮೇಲು. ಇದರಿಂದ ಸಮಸ್ಯೆಯ ನಿರ್ಧಾರ ಮಾತ್ರವಲ್ಲದೆ, ಆಪರೇಷನ್ ಅವಶ್ಯಕತೆಯಿದ್ದಲ್ಲಿ, ಅದನ್ನು ಹೇಗೆ ಮಾಡಬೇಕೆಂಬುದನ್ನೂ ತಿಳಿಸುತ್ತದೆ.

ಸಮಸ್ಯೆಯ ಮೂಲವೆಲ್ಲಿ?

ಕಾಲಿನ ಚರ್ಮದ ಕೆಳಗೆ ಇರುವ ‘ಸೂಪರ್ ಫಿಷಿಯಲ್ ‘ ನರಗಳಲ್ಲಿಯೂ ಸಹ ಮುಖ್ಯವಾಗಿ ಎರಡು ನರಗಳಿರುತ್ತವೆ. ಮಂಡಿಯಿಂದ ತೊಡೆಯ ಮೂಲಕ ,ತೊಡೆಯ ಸಂದಿಯವರೆಗೆ ಹೋಗುವ ನರವನ್ನು ‘ ಲಾಂಗ್ ಸಫೇನಸ್ ವೇನ್ ‘ ಎನ್ನುತ್ತಾರೆ. ಎರಡನೆಯದು, ತೊಡೆಯಿಂದ ಹಿಮ್ಮಡಿಯ ಕೀಲಿನವರಿಗೆ ಹೋಗುವ ‘ಷಾರ್ಟ ಸಫೇನಸ್ ವೇನ್ ‘ .ಸಾಮಾನ್ಯವಾಗಿ ‘ವೆರಿಕೋಜ ವೇನ್ಸ್ ‘ ಈ ಎರಡು ನರಗಳಲ್ಲೇ ಉಂಟಾಗುತ್ತದೆ. ಚರ್ಮದ ಕೆಳಗೆ ಇದ್ದರೂ ಸಹ, ಇದು ಕೆಲವೊಮ್ಮೆ ಹೊರಕ್ಕೆ ಕಾಣಿಸುವುದಿಲ್ಲ. ಕಾಲಿನಲ್ಲಿ ಉಬ್ಬಿ ಕಾಣಿಸುವುದೆಲ್ಲಾ ನಿಜವಾಗಿ, ಆ ನರಗಳಿಗೆ ಕೂಡಿಕೊಳ್ಳುವ ಸಣ್ಣ ಸಣ್ಣ ಶಾಖೆಗಳೇ .

ಒಟ್ಟಿನಲ್ಲಿ ಹೇಳಬೇಕೆಂದರೆ – ನರಗಳ ಉಬ್ಬುವಿಕೆ: ನೋವು ಉಂಟಾಗಬಹುದು, ಆಗದೇ ಇರಬಹುದು. ಬಹಳ ಜನರಿಗೆ ವೆರಿಕೋಜ. ವೇನ್ಸ್ ವರ್ಷಾಂತರದಿಂದ ಇದ್ದರೂ ಸಹ, ನೋವೆ. ಇಲ್ಲದಿರಬಹುದು . ಮೀನಖಂಡಗಳಲ್ಲಿ ನೋವು : ನಿಂತಿರುವಾಗ , ನಡೆದಾಡುವಾಗ, ಮೀನಖಂಡದಲ್ಲಿ ಮತ್ತು. ಮಾಂಸಖಂಡಗಳಲ್ಲಿ ನೋವು ಮತ್ತು ಅಸಖ್ಯ. ಉಂಟಾಗುವಿಕೆ .
ಊತ : ಮಂಡಿಯ ಸುತ್ತಲೂ , ಪಾದಗಳ ಮೇಲೆ ಊತ ಉಂಟಾಗಬಹುದು .  ಬಣ್ಣ ಬದಲಾಗುವಿಕೆ: ಸೂಕ್ಷ್ಮ ಬಿರುಕುಗಳಿಂದ ರಕ್ತವು ಹೊರಬಂದು , ಚರ್ಮದ ಕೆಳಗೆ ಸಂಗ್ರಹವಾಗುವುದರಿಂದ ಹಿಮ್ಮಡಿಯ ಚರ್ಮವು ಕಪ್ಪಾಗುತ್ತದೆ. ಹುಣ್ಣುಗಳು: ಕೆಲವರಿಗೆ ಮಂಡಿಯ ಹತ್ತಿರ ಹುಣ್ಣುಗಳು ಆಗಬಹುದು.

ಈ ಲಕ್ಷಣಗಳು ಒಂದಾದ ಮೇಲೊಂದು ಬರಬೇಕೆಂದೇನೂ ಇಲ್ಲ. ಹತ್ತಿಪ್ಪತ್ತು ವರ್ಷಗಳಿಗಿಂತ ಹೆಚ್ಚು ಕಾಲದಿಂದ ವೆರಿಕೋಜ ವೇನ್ಸ್ ಇದ್ದೂ ಸಹ, ಇಂದಿನವರೆಗೆ, ಯಾವ ತೊಂದರೆಯೂ ಇಲ್ಲದೆ, ನೋವಿಲ್ಲದೆ ಇರುವವರೂ ಇದ್ದಾರೆ. ಕೆಲವರಿಗೆ, ಒಂದು ವರ್ಷದೊಳಗೆ ಹುಣ್ಣಾಗಬಹುದು. ಆದ್ದರಿಂದ, ಒಬ್ಬೊಬ್ಬರಲ್ಲಿ ಈ ತೊಂದರೆ ಒಂದೊಂದು ರೀತಿಯದಾಗಿರುತ್ತದೆ.

ನಮ್ಮ ಮುಂದಿರುವ ಮಾರ್ಗಗಳು

ಕಾಲುಗಳಲ್ಲಿ ‘ಉಬ್ಬು ನರಗಳು ‘ ಇವೆ ಎಂದ ಮಾತ್ರಕ್ಕೆ ಎಲ್ಲರಿಗೂ ಚಿಕಿತ್ಸೆಯ ಅವಶ್ಯಕತೆಯಿದೆಯೆಂದೇನಲ್ಲ .ಆದ್ದರಿಂದ ಚರ್ಮದ ಬಣ್ಣ ಕಪ್ಪಾಗುವಿಕೆ, ಹುಣ್ಣಾಗುವಿಕೆ, ತುರಿಕೆಯುಂಟಾಗುವಿಕೆ, ಒಣ ಗಜಕರ್ಣ ಮುಂತಾದ ತೊಂದರೆಗಳಿರುವವರು ಚಿಕಿತ್ಸೆ ಮಾಡಿಸಿಕೊಳ್ಳಬೇಕಾಗುತ್ತದೆ.

*ಬಿಗಿಯಾದ ಕಾಲುಚೀಲಗಳು : ವೆರಿಕೋಜ ವೇನ್ಸ್ ಇರುವವರು ಬಹಳ ಹೊತ್ತು ನಿಂತಿರಲಾರರು. ನಡೆಯುತ್ತಿರುವಾಗ ನೋವೆನಿಸಿದರೆ, ‘ಕಂಪ್ರೆಷನ್ ಕಾಲುಚೀಲಗಳು ‘ ತುಂಬಾ ಉಪಯುಕ್ತವಾಗುತ್ತವೆ. ಇವುಗಳಿಂದ ನೋವು ಮುಂತಾದ ಬಾಧೆಗಳು ನಿವಾರಣೆಯಾಗುತ್ತವೆ. ಉಬ್ಬಿದ ನರಗಳು ಹಾಗೆಯೇ ಇರುತ್ತವೆ. ಬೇರೆ ಏನೂ ಸಮಸ್ಯೆಗಳಿಲ್ಲದಿದ್ದಾಗ, ಶಸ್ತ್ರ ಚಿಕಿತ್ಸೆ ಬೇಡವೆಂದು ಕೊಳ್ಳುವವರು ಈ ಬಿಗಿಯಾದ ಕಾಲುಚೀಲಗಳನ್ನು ಧರಿಸಿದರೆ, ಸರಿಹೋಗುತ್ತದೆ. ಆದರೆ, ದಿನವೆಲ್ಲಾ ಹಾಕಿಕೊಂಡಿರಬೇಕಾಗುತ್ತದೆ. ಬಿಗಿಯಾಗಿ ಹಿಡಿದುಕೊಂಡಂತೆ ಅನಿಸುವಿಕೆ, ಬೆವರು ಬಂದು, ಕಾಲುಚೀಲಗಳ ಒಳಗೆ ಉರಿ, ತುರಿಕೆ ಮುಂತಾದ ತೊಂದರೆಗಳು ಉಂಟಾಗಬಹುದು.

*ಶಸ್ತ್ರ ಚಿಕಿತ್ಸೆ: ಕೇವಲ ನೋವು, ಬಾಧೆಗಳೇ ಅಲ್ಲದೆ, ಊತ, ಚರ್ಮದ ಬಣ್ಣ ಬದಲಾಗುವಿಕೆ, ಹುಣ್ಣಾಗುವಿಕೆ ಮುಂತಾದ ತೊಂದರೆಗಳಿದ್ದರೆ, ಆಗ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ಕ್ಷೇಮಕರ .

ಡಾ.ಕರವೀರಪ್ರಭು ಕ್ಯಾಲಕೊಂಡ
ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಕ್ಯಾಲಕೊಂಡ ಆಸ್ಪತ್ರೆ
ಬಾದಾಮಿ. 587201, ಬಾಗಲಕೋಟೆ
ಮೊ : 9448036207

Related Posts

Leave a Reply

Your email address will not be published. Required fields are marked *