ಬೆಂಗಳೂರು: ಜಾತಿ ಸಮೀಕ್ಷೆಯನ್ನು ರಾಜ್ಯ ಸರ್ಕಾರ ತರಾತುರಿಯಲ್ಲಿ ನಡೆಸುತ್ತಿದೆ. ಜೊತೆಗೆ ಈ ಸಮೀಕ್ಷೆಯಲ್ಲಿ ಅನಗತ್ಯವಾದ ಪ್ರಶ್ನೆಗಳೇ ತುಂಬಿವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸುತ್ತಿರುವ ಜಾತಿ ಗಣತಿ ಹಳ್ಳ ಹಿಡಿದಿದೆ. ಸಮೀಕ್ಷೆಯನ್ನು ನಿಗದಿತ ಅವಧಿಯಲ್ಲಿ ತರಾತರಿಯಲ್ಲಿ ಮುಗಿಸಲು ಹೋಗಿ, ಈಗ ಮತ್ತೆ ಅವಧಿ ವಿಸ್ತರಣೆ ಮಾಡಲಾಗಿದೆ. ಸಮೀಕ್ಷೆ ಮಾಡುವವರು ಒತ್ತಡದಿಂದಾಗಿ ಬೇಕಾಬಿಟ್ಟಿ ಸಮೀಕ್ಷೆ ಮಾಡಿ ಮನೆ ಮುಂದೆ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ. ನವೆಂಬರ್‌ನಲ್ಲಿ ಕ್ರಾಂತಿ ನಡೆದು ಸಿಎಂ ಬದಲಾವಣೆಯಾಗಲಿದೆ. ಅದಕ್ಕಾಗಿ ತರಾತುರಿಯಲ್ಲಿ ಸಮೀಕ್ಷೆ ಮಾಡಲಾಗುತ್ತಿದೆ. ಇದು ಜನರಿಗೆ ಗೊತ್ತಾಗಿರುವುದರಿಂದಲೇ ಸಮೀಕ್ಷೆಯನ್ನು ಜನರು ತಿರಸ್ಕರಿಸುತ್ತಿದ್ದಾರೆ ಎಂದರು.
ಜಾತಿ ಸಮೀಕ್ಷೆಯಲ್ಲಿನ ಪ್ರಶ್ನೆಗಳಲ್ಲಿ ಬಹಳ ಲೋಪಗಳಿವೆ. ಮದುವೆಯಾಗುವಾಗ ಎಷ್ಟು ವಯಸ್ಸಾಗಿತ್ತು ಎಂಬ ಪ್ರಶ್ನೆ ಇದೆ. ಇಂತಹ ಬಾಲಿಶ ಪ್ರಶ್ನೆಗಳ ಅಗತ್ಯ ಇರಲಿಲ್ಲ. ಶಾಲೆ ವ್ಯಾಸಂಗಕ್ಕೆ ಸಂಬಂಧಿಸಿದಂತೆ ಕೆಲವು ಅನಗತ್ಯ ಪ್ರಶ್ನೆಗಳಿವೆ. ಇಂತಹ ಪ್ರಶ್ನೆಗಳನ್ನು ಕೇಳಲು ಸರಿಯಾದ ಕಾರಣವೇ ಇಲ್ಲ. ಅನಕ್ಷರಸ್ಥರಾಗಲು ಕಾರಣ ಏನು ಎಂದು ತಿಳಿದುಕೊಳ್ಳುವ ಪ್ರಯತ್ನ ನಡೆದಿದೆ. ಆದರೆ ಇದರಿಂದ ಏನೂ ಪ್ರಯೋಜನವಿಲ್ಲ. 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ನಿಂದಲೇ ಜನರು ಅನಕ್ಷರಸ್ಥರಾಗಿದ್ದು ಎಂದು ಉತ್ತರ ನೀಡಿದರೆ ಅದನ್ನು ಸಿಎಂ ಸಿದ್ದರಾಮಯ್ಯ ಒಪ್ಪಿಕೊಳ್ಳುತ್ತಾರೆಯೇ? ಎಂದು ಪ್ರಶ್ನಿಸಿದರು.
ಎಷ್ಟು ಸಾಲ ಪಡೆದಿದ್ದೀರಿ? ಸಾಲದ ಮೂಲ ಯಾವುದು? ಮೊದಲಾದ ಪ್ರಶ್ನೆಗಳಿವೆ. ಇಂತಹ ಪ್ರಶ್ನೆಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಅರ್ಧ ಗಂಟೆ ಬೇಕಾಗುತ್ತದೆ. ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಇಂತಹ ಪ್ರಶ್ನೆಗಳ ಅಗತ್ಯವಿಲ್ಲ. ನೀವು ನೆಲೆಸಿರುವ ಭೂಮಿ ಯಾವ ರೀತಿಯದ್ದು ಎಂದು ಪ್ರಶ್ನೆ ಕೇಳಲಾಗಿದೆ. ಇದರ ಅರ್ಥ ಏನೆಂದು ತಿಳಿದಿಲ್ಲ. ಎಷ್ಟು ಆಭರಣ ಇದೆ ಎಂದು ಕೇಳಿದ್ದು, ಇದನ್ನು ತೂಕ ಹಾಕಿ ನೋಡಬೇಕಾಗುತ್ತದೆ. ಇಂತಹ ಪ್ರಶ್ನೆಗಳನ್ನು ಕೇಳಿ ನೂರಾರು ಕೋಟಿ ರೂಪಾಯಿ ವ್ಯರ್ಥ ಮಾಡಲಾಗುತ್ತಿದೆ ಎಂದು ದೂರಿದರು.
ಸಮೀಕ್ಷೆಯ ಮೂಲಕ ಜನರ ಮಾಹಿತಿಗಳನ್ನು ಸಂಗ್ರಹಿಸಿ ಯೋಜನೆಗಳನ್ನು ಕಡಿತಗೊಳಿಸುವ ಯೋಜನೆ ರೂಪಿಸಲಾಗಿದೆ. ಗ್ಯಾರಂಟಿಗಳಿಂದಾಗಿ ಸರ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲ. ಎಲ್ಲ ನಿಗಮಗಳಿಗೆ ಅನುದಾನ ನೀಡಲು ಆಗಿಲ್ಲ. ಪ್ರವಾಹ ಹಾನಿ ಪರಿಹಾರಕ್ಕೆ ಹಣವಿಲ್ಲ. ಇದಕ್ಕಾಗಿ ಯೋಜನೆಗಳಲ್ಲಿ ಫಲಾನುಭವಿಗಳನ್ನು ತೆಗೆದುಹಾಕಲು ಈ ಕುತಂತ್ರ ಮಾಡಲಾಗಿದೆ. ಜನರು ಮಾಹಿತಿ ನೀಡಿದರೆ ಎಲ್ಲ ಬಗೆಯ ಸೌಲಭ್ಯಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಬೆಂಗಳೂರಿನಲ್ಲೂ ಅಭಿವೃದ್ಧಿ ಆಗುತ್ತಿಲ್ಲ. ಜನರನ್ನು ಯಾಮಾರಿಸಲು ಹೊಸ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ ಎಂದರು.
ಸೌಜನ್ಯ ಪ್ರಕರಣದಲ್ಲಿ ಕುಟುಂಬದವರು ಕೋರ್ಟ್‌ಗೆ ಹೋದರೆ ನ್ಯಾಯ ಸಿಗುತ್ತದೆ. ಸೌಜನ್ಯಗೆ ನ್ಯಾಯ ದೊರೆಯಬೇಕೆಂಬುದು ನನ್ನ ಆಶಯ ಎಂದರು.