ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರೆ ಮಹೋತ್ಸವ ನೆರವೇರಿತು. ಈ ಮೂಲಕ ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನ ಅಧಿದೇವತೆ ಹಾಸನಾಂಬೆ ದೇವಿಯ ಗರ್ಭಗುಡಿಗೆ ಬಾಗಿಲು ಮುಚ್ಚಲಾಯಿತು.
ಅಕ್ಟೋಬರ್ 9ರಿಂದ ನಡೆದ ಹಾಸನಾಂಬೆ ದೇವಿಯ ದರ್ಶನ ಒಂದು ತಿಂಗಳ ಕಾಲ ಸುಗಮನವಾಗಿ ನೆರವೇರಿದ್ದು, ದಾಖಲೆ ಪ್ರಮಾಣದಲ್ಲಿ 26 ಲಕ್ಷ ಭಕ್ತರು ದರ್ಶನ ಪಡೆದಿದ್ದು, 25 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.
ಬುಧವಾರ ರಾತ್ರಿ ಸಿದ್ದೇಶ್ವರ ಸ್ವಾಮಿ ಜಾತ್ರೆ ನೆರವೇರಿತು. ವಿಶೇಷ ಪೂಜೆಯ ನಂತರ ಗುರುವಾರ ಬೆಳಿಗ್ಗೆ ಅರ್ಚಕರು ಹಾಸನಾಂಬೆ ದೇವಿಯ ವರ್ಷಪೂರ್ತಿ ಬೆಳಗುವ ದೀಪ ಬೆಳಗಿಸಿ ಬಾಗಿಲು ಮುಚ್ಚಿದರು.
ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದ ನಂತರ ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದಲ್ಲಿ ಪಂಜಿನ ಮೂಲಕ ಪೂಜೆ ನೆರವೇರಿಸಲಾಯಿತು. ದೇವಿಗೆ ಹಾಕಿದ್ದ ಆಭರಣಗಳನ್ನು ತೆಗೆದು ಎಲ್ಲರೂ ಗರ್ಭಗುಡಿಯಿಂದ ಹೊರಗೆ ಬಂದರು. ನಂತರ ಅರ್ಚಕರು ಮಧ್ಯಾಹ್ನ 1.20ಕ್ಕೆ ಗರ್ಭಗುಡಿಯ ಬಾಗಿಲು ಮುಚ್ಚಿ ಬೀಗ ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವ ಕೃಷ್ಣ ಭೈರೇಗೌಡ, ಮುಂದಿನ ವರ್ಷ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಹಾಸನಾಂಬೆ ದೇವಿಯ ಬಾಗಿಲು ತೆರೆಯಲಿದೆ ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು.
ಕಳೆದ ವರ್ಷ ಸಾಕಷ್ಟು ಗೊಂದಲ ಮತ್ತು ಟೀಕೆಗಳ ನಡುವೆ 17.47 ಲಕ್ಷ ಜನರು ದೇವಿಯ ದರ್ಶನ ಪಡೆದಿದ್ದರು. ಆದರೆ ಈ ಬಾರಿ ಅತ್ಯಂತ ಸುವ್ಯವಸ್ಥಿತವಾಗಿ ದರ್ಶನ ವ್ಯವಸ್ಥೆ ಮಾಡಿದ್ದರಿಂದ 26 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಎಂದರು.
ಈ ವರ್ಷ ಟಿಕೆಟ್ ಮಾರಾಟ ಸೇರಿದಂತೆ ವಿವಿಧ ಮೂಲಗಳಿಂದ 22.80 ಕೋಟಿ ಆದಾಯ ಬಂದಿದೆ. ಹುಂಡಿಯ ಹಣದ ಲೆಕ್ಕ ನಡೆಯಬೇಕಿದೆ. ಹುಂಡಿಯಲ್ಲಿ 2 ಕೋಟಿ ನಿರೀಕ್ಷಿಸಲಾಗಿದ್ದು, ಒಟ್ಟಾರೆ 25 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಕಳೆದ ವರ್ಷ ಹಾಸನಾಂಬೆಗೆ 9 ಕೋಟಿ 66 ಲಕ್ಷ ರೂ. ಆದಾಯ ಬಂದಿತ್ತು. ಈ ಬಾರಿ ಟಿಕೆಟ್ ಮಾರಾಟದಿಂದಲೇ 3.40 ಕೋಟಿ ರೂ. ಆದಾಯವಾಗಿದೆ. ಕಳೆದ ಬಾರಿ 1.40 ಲಕ್ಷ ಟಿಕೆಟ್ ಮಾರಾಟವಾಗಿತ್ತು. ಈ ಬಾರಿ 3.60 ಲಕ್ಷ ಟಿಕೆಟ್ ಮಾರಾಟವಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ವಿವರಿಸಿದರು.
ಅಕ್ಟೋಬರ್ 9ರಂದು ಮೊದಲ ದಿನ 58 ಸಾವಿರ ಭಕ್ತರು ದರ್ಶನ ಪಡೆದಿದ್ದರೆ, ಎರಡನೇ ದಿನ 2.07 ಲಕ್ಷ ಜನ, ಮೂರನೇ ದಿನ 1.45 ಲಕ್ಷ, ನಾಲ್ಕನೇ ದಿನ 2.29 ಲಕ್ಷ, 5ನೇ ದಿನ 2.43 ಲಕ್ಷ, 6ನೇ ದಿನ 2.46 ಲಕ್ಷ, 7ನೇ ದಿನ 2.58 ಲಕ್ಷ, 8ನೇ ದಿನ ಗರಿಷ್ಠ 3.61 ಲಕ್ಷ, 9ನೇ ದಿನ 2.16 ಲಕ್ಷ, 10ನೇ ದಿನ 1.26 ಲಕ್ಷ, 11ನೇ ದಿನ 2.02 ಲಕ್ಷ, 12ನೇ ದಿನ 1.50 ಲಕ್ಷ ಹಾಗೂ 13 ಹಾಗೂ ಅಂತಿಮ ದಿನವಾದ ಬುಧವಾರ 1.59 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ.
ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಿ ಸಾರ್ವಜನಿಕ ದರ್ಶನಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಗಮನ ಸೆಳೆದಿದ್ದಾರೆ. ಅಲ್ಲದೇ ಇಡೀ 14 ದಿನಗಳ ಕಾಲ ಹಾಸನಾಂಬೆ ದೇವಿಯ ದರ್ಶನಕ್ಕೆ ತಾವೇ ಖುದ್ದು ನಿಂತು ಉಸ್ತುವಾರಿ ನೋಡಿಕೊಂಡು ಸುಗಮ ವ್ಯವಸ್ಥೆ ಕಲ್ಪಿಸಿದ್ದಾರೆ.
ಕಳೆದ ವರ್ಷ ವಿಶೇಷ ದರ್ಶನಕ್ಕೆ 3 ಸಾವಿರ ರೂ. ನಿಗದಿಪಡಿಸಲಾಗಿತ್ತು. ಆದರೂ ಸಾಕಷ್ಟು ಅವ್ಯವಸ್ಥೆಯಿಂದ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಆದರೆ ಈ ಬಾರಿ 300 ರೂ. ಹಾಗೂ 1000 ಮುಖಬೆಲೆಯ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಹಾಸನಾಂಬೆ ದರ್ಶನದಿಂದ 6 ಕೋಟಿಗೂ ಅಧಿಕ ಆದಾಯ ನಿರೀಕ್ಷಿಸಲಾಗಿದೆ.