Sunday, September 14, 2025
Menu

ಹಾಸನ ಗಣೇಶೋತ್ಸವ ದುರಂತ: ಸಂತ್ರಸ್ತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರಕ್ಕೆ ಆರ್‌.ಅಶೋಕ ಆಗ್ರಹ

ಹಾಸನ  ಗಣೇಶ ವಿಸರ್ಜನೆಯ ಮೆರವಣಿಗೆ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.

ಮೃತದ ಕುಟುಂಬಗಳಿಗೆ ಭೇಟಿ ನೀಡಿ ಹಾಗೂ ಗಾಯಾಳುಗಳನ್ನು ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 9 ಜನರು ಮೃತಪಟ್ಟಿರುವುದು ದೊಡ್ಡ ದುರಂತ. ಈ ಘಟನೆಯಿಂದಾಗಿ ಇಡೀ ರಾಜ್ಯ ಜನರು ದುಃಖಕ್ಕೊಳಗಾಗಿದ್ದಾರೆ. ಲಾರಿಯ ಚಾಲಕ ಏಕೆ ಹೀಗೆ ಚಾಲನೆ ಮಾಡಿದ ಎಂದು ತಿಳಿದುಬರಬೇಕಿದೆ.  ಮೃತರಾದವರಿಗೆ ದೇವರು ಚಿರಶಾಂತಿ ನೀಡಲಿ ಎಂದು ಹೇಳಿದರು.

ಈ ಘಟನೆಯಲ್ಲಿ ನಾನು ರಾಜಕಾರಣ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಕೇರಳಕ್ಕೂ ಕೆಲವು ದುರ್ಘಟನೆಯ ವೇಳೆ ಪರಿಹಾರ ನೀಡಿದೆ. ಆದ್ದರಿಂದ ತಲಾ ಕನಿಷ್ಠ 25 ಲಕ್ಷ ರೂ. ಪರಿಹಾರ ನೀಡಿದರೆ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಈ ಕುರಿತು ಜಿಲ್ಲಾಧಿಕಾರಿ ಜೊತೆ ಚರ್ಚಿಸುತ್ತೇನೆ ಎಂದರು.

ಈ ಘಟನೆಯ ಸಂದರ್ಭದಲ್ಲಿ ಟ್ರಾಫಿಕ್‌ ಪೊಲೀಸರು ಎಚ್ಚರ ವಹಿಸಬೇಕಿತ್ತು. ಇನ್ನು ಮುಂದಾದರೂ ಪೊಲೀಸರು ಗಣೇಶ ಮೆರವಣಿಗೆ ವೇಳೆ ಟ್ರಾಫಿಕ್‌ ಬಗ್ಗೆ ಕ್ರಮ ವಹಿಸಬೇಕು. ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಬೇಕು. ಈ ಭಾಗದ ರಸ್ತೆಯಲ್ಲಿ ಹಂಪ್‌ಗಳನ್ನು ಹಾಕುವ ಬಗ್ಗೆ ಚರ್ಚಿಸುತ್ತೇನೆ  ಎಂದು ತಿಳಿಸಿದರು.

ಮಾನವೀಯತೆ ದೃಷ್ಟಿಯಿಂದ ಹೆಚ್ಚು ಪರಿಹಾರ ನೀಡಬೇಕಾಗುತ್ತದೆ. ಬಡವರೇ ಇರುವುದರಿಂದ ಅಂಥವರಿಗೆ ಹೆಚ್ಚು ಪರಿಹಾರ ನೀಡುವುದು ಉತ್ತಮ. ಈ ದುರಂತದಲ್ಲಿ ಮಡಿದವರೆಲ್ಲರೂ ಯುವಕರೇ ಆಗಿದ್ದಾರೆ ಹಾಗೂ ಬಡವರಾಗಿದ್ದಾರೆ. ಎರಡು ಮನೆಗೆ ಹೋದಾಗ, ಆ ಕುಟುಂಬಕ್ಕೆ ಒಬ್ಬನೇ ಮಗ ಇರುವುದು ತಿಳಿಯಿತು. ಹಾಗೆಯೇ ಗಾಯಾಳುಗಳನ್ನು ಮಾತಾಡಿಸಿದಾಗ ಪರೀಕ್ಷೆ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರು ಗಮನ ಕೊಡಬೇಕು. ಕೆಲವು ಕುಟುಂಬದವರು ಪರಿಹಾರ ಕಡಿಮೆ ಕೊಟ್ಟಿರುವುದರ ಬಗ್ಗೆ ಹೇಳಿದರು ಎಂದರು.

ಇದು ಡಿಜೆಯ ಸಂಗತಿ ಅಲ್ಲ. ಲಾರಿ ಚಾಲಕನ ಅಚಾತುರ್ಯದಿಂದ ಈ ಅನಾಹುತ ನಡೆದಿದೆ. ಕೆಲವು ಮೆರವಣಿಗೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರಿರುತ್ತಾರೆ. ಜನಸಂಖ್ಯೆಯ ಆಧಾರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಪೊಲೀಸರು ವಹಿಸಬೇಕು. ಇಲ್ಲಿ ಡಿಜೆ, ಡೋಲು ಮೊದಲಾದವುಗಳಿಗೆ ಸಂಬಂಧವಿಲ್ಲ ಎಂದಿದ್ದಾರೆ.

Related Posts

Leave a Reply

Your email address will not be published. Required fields are marked *