Wednesday, October 15, 2025
Menu

ಶ್ರಮಿಕ ಭಕ್ತರಿಗೆ ಹಾಸನಾಂಬೆಯ ಸುಗಮ ದರ್ಶನ ವ್ಯವಸ್ಥೆ:  ಸಚಿವ ಕೃಷ್ಣಬೈರೇಗೌಡರ ಪ್ರಯತ್ನಕ್ಕೆ ಸಿಎಂ ಮೆಚ್ಚುಗೆ

ಹಾಸನಾಂಬ ಜಾತ್ರೆಯಲ್ಲಿ ಯಾವುದೇ ರೀತಿಯ VIP ಪ್ರತಿಷ್ಠೆಗೆ ಮಣೆ ಹಾಕದೆ, ಶ್ರೀಸಾಮಾನ್ಯರ ದರ್ಶನಕ್ಕೆ ಆದ್ಯತೆ ನೀಡಿ ಸರ್ಕಾರದ ಪ್ರಯತ್ನದ ಯಶಸ್ಸಿಗೆ ಸಹಕರಿಸಿದ ಜಿಲ್ಲೆಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳಿಗೆ, ಅಧಿಕಾರಿ ವರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಅಭಿನಂದನೆ ಸಲ್ಲಿಸಿದ್ದಾರೆ.

ಹಾಸನಾಂಬದೇವಿ ಮತ್ತು ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು. ನಾನು ಕಳೆದ ವರ್ಷವೂ ದರ್ಶನ ಪಡೆದಿದ್ದೆ. ಈ ವರ್ಷವೂ ದರ್ಶನ‌ ಪಡೆದಿದ್ದೇನೆ. ಇಡೀ ರಾಜ್ಯಕ್ಕೆ ಸುಭಿಕ್ಷೆ, ಶಾಂತಿ, ನೆಮ್ಮದಿಗಾಗಿ, ಮಳೆ- ಬೆಳೆ-ರೈತರ ಸಮೃದ್ಧಿಗಾಗಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

ಈ ಬಾರಿ ಅಗತ್ಯಕ್ಕಿಂತ ಹೆಚ್ವು ಮಳೆ ಬಿದ್ದು ರೈತರಿಗೆ ಆಗಿರುವ ನಷ್ಟ ಭರಿಸಲು NDRF ನಿಧಿ ಜೊತೆಗೆ ರಾಜ್ಯ ಸರ್ಕಾರವೂ ಹೆಚ್ಚುವರಿ ಪರಿಹಾರ ನೀಡುತ್ತಿದ್ದೇವೆ. ಹಿಂದೆಂದೂ ಯಾರೂ ನೀಡದಷ್ಟು ಬೆಳೆ ಹಾನಿ ಪರಿಹಾರವನ್ನು ನಾವು ನೀಡಿದ್ದೇವೆ. ಮುಂದಿನ ವರ್ಷ ಬೆಳೆ ಹಾನಿ ಪರಿಸ್ಥಿತಿ ಬರದಿರಲಿ ಎಂದು ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಸಿಎಂ ಹೇಳಿದರು.

ನಮ್ಮದು ಕುವೆಂಪು ಅವರ ಆಶಯದ “ಸರ್ವ ಜನಾಂಗದ ಶಾಂತಿಯ ತೋಟ” ಆಗಿದೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸೋಣ. ಎಲ್ಲಾ ಧರ್ಮದ ದೇವರ ಆಶಯವೂ ಮನುಷ್ಯ ಪ್ರೀತಿ ಮತ್ತು ಸೌಹಾರ್ದದ ಬದುಕು. ಇದಕ್ಕೆ ತಕ್ಕಂತೆ ನಾವೆಲ್ಲರೂ ಸಹೃದತೆಯಿಂದ ಮನುಷ್ಯ ಧರ್ಮವನ್ನು ಪಾಲಿಸಬೇಕು ಎಂದರು.

ಹಾಸನಾಂಬ ಜಾತ್ರೆಗೆ ಹೆಚ್ಚುವರಿ ಅನುದಾನವನ್ನು ರಾಜ್ಯ ಬಜೆಟ್ ನಲ್ಲಿ ಘೋಷಿಸುತ್ತೀರಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಜಿಲ್ಲಾಳಿತದ ಜೊತೆ ಚರ್ಚಿಸುತ್ತೇನೆ. ಅಗತ್ಯಬಿದ್ದರೆ ಅನುದಾನ, ಹಣಕಾಸಿನ ನೆರವು ನೀಡಲಾಗುವುದು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಶಾಸಕ ಶಿವಲಿಂಗೇಗೌಡರು, ಸಂಸದ ಶ್ರೇಯಸ್ ಪಟೇಲ್, ಹೂಡ ಅಧ್ಯಕ್ಷ ಶಿವಪ್ಪ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *