ಶಿವಮೊಗ್ಗದ ಹರ್ಷನ ಕೊಲೆ ಆರೋಪಿ ಧಾರವಾಡ ಜೈಲಿನಲ್ಲಿದ್ದುಕೊಂಡು ಅಲ್ಲಿಂದಲೇ ಕರೆ ಮಾಡಿ ಉದ್ಯಮಿಗೆ ಧಮ್ಕಿ ಹಾಕುತ್ತಿರುವುದು ಬಯಲಾಗಿದೆ. ಹರ್ಷ ಕೊಲೆ ಪ್ರಕರಣದ ಆರೋಪಿ ರಿಯಾನ್ ಶರೀಫ್ ಶಿವಮೊಗ್ಗದ ಗುಜರಿ ಉದ್ಯಮಿ ಎ.ಎಸ್.ಅಶ್ವಕ್ ಉಲ್ಲಾ ಮತ್ತು ಅವರ ಅಳಿಯ ಅಸಾದುಲ್ಲಾರಿಗೆ ಕರೆ ಮಾಡಿ 50 ಲಕ್ಷ ರೂ. ನೀಡುವಂತೆ ಧಮ್ಕಿ ಹಾಕಿದ್ದಾನೆ.
ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಹರ್ಷ ಕೊಲೆ ಆರೋಪಿ ರಿಯಾನ್ ಶರೀಫ್ ಮತ್ತು ಸಾದಿಕ್ ಅಲಿಯಾಸ್ ಕೂದ್ಲು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಜುಲೈ 27 ರ ರಾತ್ರಿ ಕರೆ ಮಾಡಿ, ಹಣಕ್ಕಾಗಿ ಉದ್ಯಮಿ ಅಶ್ವಕ್ ಉಲ್ಲಾಗೆ ಧಮ್ಕಿ ಹಾಕಿದ್ದು, ಅವರು ರಾತ್ರಿ ಅಂಗಡಿ ಕ್ಲೋಸ್ ಮಾಡಿ ಮನೆಗೆ ಹೊರಟಿದ್ದಾಗ ಆರ್ ಎಂಎಲ್ ನಗರದ ಶಾಫಿ ಮಸೀದಿ ಬಳಿ ಅಡ್ಡಗಟ್ಟಿದ ಮೂವರು ಯುವಕರು ರಿಯಾನ್ ಷರೀಫ್ ಮಾತನಾಡ್ತಾರೆ ಎಂದು ಮೊಬೈಲ್ ಕೊಟ್ಟಿದ್ದಾರೆ. ಮಾತನಾಡುವಾಗ 50 ಲಕ್ಷ ರೂ. ನೀಡುವಂತೆ ರಿಯಾನ್ ಷರೀಫ್ ಬೆದರಿಕೆ ಹಾಕಿದ್ದ. ಮರು ದಿನವೇ ಮನೆಯ ಬಳಿ ಬಂದು ಸಾದಿಕ್ ಹಾಗೂ ಇತರರು ಬೆದರಿಸಿದ್ದಾರೆ. ಅಶ್ವಕ್ ಉಲ್ಲಾರ ಅಳಿಯ ಅಸಾದುಲ್ಲಾ ಮನೆ ಬಳಿಯೂ ಹೋಗಿ ಗಲಾಟೆ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಅಶ್ವಕ್ ಉಲ್ಲಾರ ಮನೆಯ ಬಾಗಿಲು, ಕಿಟಕಿಯ ಗ್ಲಾಸ್ ಒಡೆದು ದಾಂಧಲೆ, ಅಸಾದುಲ್ಲಾ ರ ಅಂಗಡಿ ಬಳಿಯೂ ತೆರಳಿ ಗಲಾಟೆ ಮಾಡಿ ಅಂಗಡಿಯಲ್ಲಿ ಸಿಸಿ ಕ್ಯಾಮರಾ, ಡಿವಿಆರ್, ಸಿಸ್ಟಮ್, ಯುಪಿಎಸ್ ಹಾಗೂ ಇತರ ವಸ್ತುಗಳನ್ನು ಹಾನಿಗೊಳಿಸಿದ್ದಾರೆ. ಆರೋಪಿಗಳ ಪತ್ತೆಗೆ ದೊಡ್ಡಪೇಟೆ ಪೊಲೀಸರು ಬಲೆ ಬೀಸಿದ್ದಾರೆ.