ಮಗನ ವಿರುದ್ಧ ದೂರು ಕೊಟ್ಟ ಮರುದಿನವೇ ತಂದೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆಯೊಂದು ಕೊಪ್ಪಳದ ಕನಕಗಿರಿ ತಾಲೂಕಿನ ವರಣಖೇಡ ಗ್ರಾಮದಲ್ಲಿ ನಡೆದಿದೆ. ಆಸ್ತಿಗಾಗಿ ಮಗನೇ ತಂದೆಯ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ವೆಂಕೋಬಾ ಹಂಚಿನಾಳ (50) ಮೃತಪಟ್ಟವರು. ಅವರು ತಮ್ಮ ಜಮೀನಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ವೆಂಕೋಬಾ ಅವರು ಮಗನ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನಲ್ಲಿ ಆಸ್ತಿ ವಿಚಾರವಾಗಿ ಮಗ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದರು. ಅದಾದ ಬಳಿಕ ಎರಡೇ ದಿನದಲ್ಲಿ ವೆಂಕೋಬಾ ಮೃತಪಟ್ಟಿರುವುದುಅನುಮಾನಕ್ಕೆ ಕಾರಣವಾಗಿದ್ದು, ಮಗನೇ ಕೊಲೆ ಮಾಡಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಮೃತ ವೆಂಕೋಬಾ ಅವರ ತಾಯಿ ಸೂರಮ್ಮ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಹತ್ತು ಎಕರೆ ಆಸ್ತಿ ವಿಚಾರಕ್ಕೆ ಆಗಾಗ ವೆಂಕೋಬಾ ಮತ್ತು ಮಗನ ನಡುವೆ ಗಲಾಟೆಯಾಗುತ್ತಿತ್ತು. ಹೀಗಾಗಿ ತಂದೆಯನ್ನು ವಿಷ ಹಾಕಿ ಕೊಲೆ ಮಾಡಿದ್ದಾನೆ. ನನ್ನ ಮಗನ ಸಾವಿಗೆ ಸೊಸೆ, ಮೊಮ್ಮಗ ಹಾಗೂ ಮೊಮ್ಮಗನ ಹೆಂಡತಿ ಕಾರಣ ಎಂದು ದೂರು ದಾಖಲಿಸಿದ್ದಾರೆ.


