ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಶಾಲಾ ಶುಲ್ಕ ಕಟ್ಟದ ಕಾರಣಕ್ಕೆ ಆಡಳಿತ ಮಂಡಳಿ ನೀಡಿದ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅನಿಕೇತನ ವಿದ್ಯಾಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದ ಎಚ್.ಎಲ್.ಮಿಲನಾ (15) ಆತ್ಮಹತ್ಯೆಗೆ ಮಾಡಿಕೊಂಡ ವಿದ್ಯಾರ್ಥಿನಿ.
ಗ್ರಾಮದ ಲಕ್ಷ್ಮಿಪ್ರಸಾದ್ ಹಾಗೂ ಎಚ್.ಎಸ್.ರಶ್ಮಿ ದಂಪತಿ ಪುತ್ರಿ ಎಚ್.ಎಲ್.ಮಿಲನಾ ಸೇರಿದಂತೆ ಇನ್ನಿಬ್ಬರು ಮಕ್ಕಳಾದ ಮೋಹಿತಾ 7ನೇ ತರಗತಿ, ಪುತ್ರ ಮೋಹಿತ್ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮಿಲನಾ ಶಿಕ್ಷಣ ಹಕ್ಕು ಕಾಯ್ದೆಯಡಿ ಶಾಲೆಗೆ ಆಯ್ಕೆ ಆಗಿದ್ದರೂ ಶಾಲೆ ಆಡಳಿತ ಮಂಡಳಿ ಮತ್ತು ಮುಖ್ಯಶಿಕ್ಷಕಿ ಶೈಲಜಾ ಸೇರಿದಂತೆ ಮೂವರು ಶಿಕ್ಷಕರು ಶಾಲಾ ಶುಲ್ಕ ಪಾವತಿ ಮಾಡುವಂತೆ ವಿದ್ಯಾರ್ಥಿನಿಗೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದರು.
ಪ್ರತಿನಿತ್ಯ ಪ್ರಾರ್ಥನಾ ಸಮಯದಲ್ಲಿ ಭಾಗವಹಿಸಲು ಅವಕಾಶ ಕೊಡದೆ ಬಹಿಷ್ಕಾರ ಹಾಕಿದ್ದರು ಎನ್ನಲಾಗಿದೆ. ಶನಿವಾರ ಮಿಲನಾ ಮಧ್ಯಾಹ್ನ ಶಾಲೆ ಬಿಟ್ಟ ನಂತರ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ದೂರು ನೀಡಿದ್ದಾರೆ. ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೃತ ಬಾಲಕಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವಂತೆ ದಲಿತ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.