Tuesday, November 18, 2025
Menu

ಪತಿಯ ಕಿರುಕುಳ: ಅರಕಲಗೂಡಿನಲ್ಲಿ ಮಗುವಿನೊಂದಿಗೆ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

mother

ಹಾಸನದ ಅರಕಲಗೂಡು ತಾಲೂಕಿನ ರಾಮನಾಥಪುರ ಬಳಿ ಪತಿ ಹಾಗೂ ಅತ್ತೆಯ ಕಿರುಕುಳಕ್ಕೆ ಬೇಸತ್ತ ಮನನೊಂದ ಮಹಿಳೆ ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹಾದೇವಿ (29) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮಹಾದೇವಿ ಮೂರು ವರ್ಷಗಳ ಹಿಂದೆ ಸೀಬಿಹಳ್ಳಿ ಗ್ರಾಮದ ಕುಮಾರ್ ಜೊತೆ ಎರಡನೇ ವಿವಾಹವಾಗಿದ್ದರು. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಸಾಲಿಗ್ರಾಮ ತಾಲೂಕಿನ ಕರ್ಪೂರವಳ್ಳಿ ಗ್ರಾಮದ ಮಹಾದೇವಿಯ ಈ ಎರಡನೇ ಮದುವೆ ಸಂದರ್ಭ ವರದಕ್ಷಿಣೆ ರೂಪದಲ್ಲಿ 100 ಗ್ರಾಂ ಚಿನ್ನ ನೀಡಲಾಗಿತ್ತು.

ಇತ್ತೀಚಿಗೆ ಕುಮಾರ್‌ ಪತ್ನಿ ಮೇಲೆ ಅನುಮಾನ ಪಡುತ್ತಿದ್ದ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದ. ಕಿರುಕುಳ ತಾಳಲಾರದೆ ಮಹಾದೇವಿ ಹದಿನೈದು ದಿನಗಳ ಹಿಂದೆ ತವರು ಮನೆ ಸೇರಿದ್ದರು. ಸುಮ್ಮನಾಗದ ಕುಮಾರ್ ಪತ್ನಿಗೆ ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ.

ಮೊನ್ನೆ ಹಾಸನಕ್ಕೆ ಬಂದಿದ್ದ ಮಹಾದೇವಿಗೆ ಬಸ್ ನಿಲ್ದಾಣದಲ್ಲೇ ಕುಮಾರ್ ನಿಂದಿಸಿದ್ದ. ಮಹಾದೇವಿ ನಂತರ ಹಾಸನ ಮಹಿಳಾ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಬಳಿಕ ಡೆತ್‌ನೋಟ್ ಬರೆದಿಟ್ಟು ಮಗುವಿನೊಂದಿಗೆ ವೀಡಿಯೊ ಮಾಡಿದ್ದರು.

ಪತಿಯ ನಿಂದನೆ ಸಹಿಸಲು ಆಗುತ್ತಿಲ್ಲ. ನನ್ನ ಸಾವಿಗೆ ನನ್ನ ಗಂಡ, ನನ್ನ ಅತ್ತೆ ಕಾರಣ. ಯಾವುದು ಬೇಡ, ಹೋರಾಟ ಮಾಡಲು ಓಡಾಡಲು ಆಗುತ್ತಿಲ್ಲ. ನಾನು ಇದ್ದರೆ ತಮ್ಮ, ಅಪ್ಪ-ಅಮ್ಮನಿಗೂ ತೊಂದರೆ. ಬಾಯಿಗೆ ಬಂದಂತೆ ಬಯ್ಯುತ್ತಾನೆ. ಮೂರು ವರ್ಷದಿಂದ ನರಕ ಕೊಟ್ಟಿದ್ದಾನೆ. ಪೊಲೀಸರು ಹೇಳುವಷ್ಟು ಹೇಳಿದ್ದಾರೆ. ನನ್ನ ತಮ್ಮ, ಅಪ್ಪ, ಅಮ್ಮ ಎಲ್ಲರಿಗೂ ಜೀವ ಬೆದರಿಕೆ ಹಾಕಿದ್ದಾನೆ. ನನ್ನಿಂದ ಅವರ ಜೀವನ ಏಕೆ ಹಾಳಾಗಬೇಕು, ಮಗು ನನಗೆ ಹುಟ್ಟಿಲ್ಲ ಅನ್ನುತ್ತಾನೆ. ಇದನ್ನೆಲ್ಲಾ ಕೇಳಿಕೊಂಡು ಬದುಕಲು ಆಗಲ್ಲ, ಈ ಜೀವನವೇ ಬೇಡ ನನಗೆ ಎಂದು ಮಹಾದೇವಿ ವೀಡಿಯೊ ಮಾಡಿಟ್ಟು ನಾಪತ್ತೆಯಾಗಿದ್ದರು.

ಕುಟುಂಬಸ್ಥರು ಮಹಾದೇವಿಗಾಗಿ ಹುಡುಕಾಟ ನಡೆಸಿದ್ದು, ಸೋಮವಾರ ಅರಕಲಗೂಡು ತಾಲೂಕಿನ, ಬೆಟ್ಟಸೋಗೆ ಬಳಿ ಮಹಾದೇವಿ ಮೃತದೇಹ ಪತ್ತೆಯಾಗಿದೆ. ರಾಮನಾಥಪುರದ ಬಳಿಯ ಕಾವೇರಿ ನದಿಗೆ ಒಂದೂವರೆ ವರ್ಷದ ಮಗುವಿನೊಂದಿಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಮಗುವಿನ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Posts

Leave a Reply

Your email address will not be published. Required fields are marked *