Menu

ಸುಖೀ ರಾಜ್ಯ ಮತ್ತು ಸುಶಾಸನ: ಜನರಿಗೆ ತಿಳಿಸುವ ಆಂದೋಲನ ಅಗತ್ಯ

ರಾಜ್ಯದ ಸುಗಮ ಶಾಸನಗಳ ರಚನೆ ಮತ್ತು ಅವುಗಳ ಅನುಷ್ಠಾನದಲ್ಲಿ ವಾಸ್ತವಿಕವಾಗಿ ಇಂದು ಏನಾಗಬೇಕಿದೆಯೋ ಅದು ಇಂದು ಸಾಧ್ಯವಾಗಿಲ್ಲ. ಗ್ರಾಮ, ಪಟ್ಟಣ, ನಗರ ಮತ್ತು ಮಹಾನಗರಗಳೆಂಬ ತಾರತಮ್ಯವಿಲ್ಲದೆ ಉತ್ತಮ ಶಾಸನಗಳ ಆಶಯವನ್ನು ಸಮಸ್ತ ಜನತೆಗೆ ತಿಳಿಸುವ ವಿಚಾರ ಕ್ರಾಂತಿಕಾರಕ ಪರಿಣಾಮಕಾರಿ ಆಂದೋಲನ ಯಾವುದೂ ನಮ್ಮ ಮುಂದಿಲ್ಲದಿರುವುದು ಒಂದು ದುರಂತ. 

ರಚನಾತ್ಮಕ ಶಾಸನಗಳ ಹಿಂದೆ ಪ್ರಜಾಹಿತ ಅಡಗಿದೆ. ರಾಜ್ಯವೊಂದರ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಕ್ಷೇಮ-ಇವೆಲ್ಲವೂ ಅವಲಂಬಿತವಾಗುವುದು ಉತ್ತಮ ಶಾಸನಗಳ ಅನುಷ್ಠಾನ ಮತ್ತು ಅವುಗಳ ಪಾಲನೆಯಲ್ಲಿ. ಸುಖೀ ರಾಜ್ಯದಲ್ಲಿ ಸಮಂಜಸ ಶಾಸನಗಳು ಯಾವಾಗಲೂ ಸಕ್ರಿಯವಾಗಿರುತ್ತೆ .

ಉತ್ತಮ ಶಾಸನ, ಯಾವಾಗಲೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ವಿತರಿಸುವ ಪರಮಾಶಯ ಹೊಂದಿರುತ್ತೆ. ಪ್ರಜಾ ಪ್ರತಿನಿದಿ ಸಭೆಗಳು ಇಂತಹ ಪರಮಾಶಯಗಳನ್ನು ಶಾಸನಗಳಾಗಿ ರೂಪಿಸುವ ಪಾಕಶಾಲೆ ಹೌದು. ಸಂಕ್ಷೇಮ ರಾಜ್ಯದ ಮೂಲ ಆಶಯ ಎಂದರೆ ತಪ್ಪು ಮಾಡಿದವನನ್ನು ಕಠಿಣ ಶಾಸನಗಳಿಂದ ನೇಣುಗಂಬ ಏರಿಸುವುದೊಂದೇ ಅಲ್ಲ. ಆ ರಾಜ್ಯದ ಸಮಸ್ತ ಜನತೆಯ ಸಹಜ ಬದುಕು ಮತ್ತು ನೆಮ್ಮದಿಗೆ ಸಹಾಯಕವಾದ ಸನ್ನಿವೇಶ ಮತ್ತು ವಾತಾವರಣವನ್ನು ನಿರ್ಮಿಸುವಂತಹ ಹೊಣೆಗಾರಿಕೆ ರಾಜ್ಯಾಡಳಿತದ್ದು. ಅರಿಸ್ಟಾಟಲ್ ಹೇಳಿದ್ದೂ ಅದೇ, ಆಚಾರ್ಯ ಚಾಣಕ್ಯ ಹೇಳಿದ್ದೂ ಇದೇ. ವಿದುರ ನೀತಿಯೂ ಇದಕ್ಕಿಂತಲೂ ಭಿನ್ನವಲ್ಲ.

ಆಧುನಿಕ ಜಗತು ಇಂದು ಶರವೇಗದಲ್ಲಿ ಬೆಳೆಯುತ್ತಿದೆ . ದೇಶದ ಪ್ರಜೆಗಳ ಸಾಮಾನ್ಯ ಬೇಕು- ಬೇಡಗಳೂ ಇಂದು ಮಿಂಚಿನ ವೇಗದಲ್ಲಿ ಹೊಸ ಹೊಸ ರೂಪ ತಾಳುತ್ತಿವೆ. ಇಂತಹ ಸನ್ನಿವೇಶದಲ್ಲಿ ಸಮಸ್ತ ಜನತೆಯ ಸದಾಶಯ ಕಾಪಾಡುವುದು ಹೇಗೆ ? ಅವುಗಳಿಗೆ ಶಾಸನದ ರೂಪವನ್ನು ನೀಡುವುದು ಹೇಗೆ. ರೂಪುಗೊಂಡ ಬಳಿಕ ಇವುಗಳ ಅನುಷ್ಠಾನ ಮತ್ತು ಅವುಗಳ ಜಾರಿಗೂ ಮುನ್ನ ಜನತೆಗೆ ಇಂತಹ ಶಾಸನಗಳಲ್ಲಿ ಏನಿದೆ ಎಂಬುದನ್ನು ತಿಳಿಸುವ ಹೊಣೆಗಾರಿಕೆ ಯಾರದ್ದು ? ಈ ಪ್ರಶ್ನೆಗಳಿಂದು ನಮ್ಮನ್ನು ಗಂಭೀರವಾಗಿ ಕಾಡುವಂತಹದು.

ಸಮಾಜಮುಖಿ ಶಾಸನಗಳು ರಚನೆಯಾದ ಮಾತ್ರಕ್ಕೆ ಸುಖೀರಾಜ್ಯ ಸಾಧ್ಯವಿಲ್ಲ. ಶಾಸನಗಳು ಅಧಿಕಾರದ ಚುಕ್ಕಾಣಿ ಹಿಡಿದವರ ಮತ್ತು ಪಟ್ಟಭದ್ರರ ಹಿತವನ್ನು ಮಾತ್ರ ಕಾಪಾಡುವುದಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ರಚನೆಯಾದ ಹಲವಾರು ಶಾಸನಗಳು ಅರಸೊತ್ತಿಗೆಯನ್ನು ಕಾಪಾಡುವ ಆಶಯವಿದ್ದಿದ್ದು ನಿಜ. ಆದರೆ ಸ್ವತಂತ್ರೋತ್ತರದ ಭಾರತದಲ್ಲಿ ರಚನೆಯಾಗಿರುವ ಶಾಸನಗಳಿಗೆ ಈ ದೇಶದ ಪ್ರತಿಯೋರ್ವ ಪ್ರಜೆಯ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವ ನಿಶ್ಚಿತ ಹೊಣೆಗಾರಿಕೆ ಇದೆ.

ಪ್ರಪಂಚವಿಂದು ತಂತ್ರಜ್ಞಾನದ ತುತ್ತತುದಿಯ ಬೆಳವಣಿಗೆಯ ಆಧುನಿಕ ಪೋಷಾಕು ಧರಿಸಿದೆ. ಹಿಂದಿಗಿಂತಲೂ ಇಂದು , ಜಗತ್ತಿನ ಆಗು ಹೋಗುಗಳನ್ನು ಅತಿ ತ್ವರಿತವಾಗಿ ತಿಳಿಯಲು ಅತ್ಯಾಧುನಿಕ ಸಲಕರಣೆಗಳು ಪ್ರತಿಯೊಬ್ಬನ ಅಂಗೈಯಲ್ಲಿವೆ. ಆದರೂ ಸುಖೀರಾಜ್ಯದ ಆಶೋತ್ತರಗಳನ್ನು ನೆರವೇರಿಸುವ ಶಾಸನಗಳ ರಚನೆ ಕುರಿತು ಪ್ರಾಮಾಣಿಕ ಚಿಂತನೆ ಇಂದು ನಡೆದಿಲ್ಲ. ಜನತೆಗೆ ಅನಿವಾರ್ಯವಾದ ಶಾಸನ ಮತ್ತು ಕಟ್ಟಳೆಗಳ ಬಗ್ಗೆ ಶಾಸನಸಭೆಗಳಲ್ಲಿ ಪಕ್ಷಬೇಧವಿಲ್ಲದ ಚಿಂತನ ಮಂಥನ ಇಂದು ದುರ್ಲಬವಾಗಿರುವುದು ದುರದೃಷ್ಟಕರ. ಸಮಸ್ತ ಸಮಾಜದ ಬದಲು ಸೀಮಿತ ಸಮಾಜದ ಕೂಗು ಮತ್ತು ಬೇಡಿಕೆಯೇ ಹೆಚ್ಚು ಮನ್ನಣೆ ಪಡೆದುಕೊಳ್ಳುತಿದೆ. ಒಟ್ಟಿನಲ್ಲಿ ಸುಖೀ ರಾಜ್ಯದ ಸುಗಮ ಶಾಸನಗಳ ರಚನೆ ಮತ್ತು ಅವುಗಳ ಅನುಷ್ಠಾನದಲ್ಲಿ ವಾಸ್ತವಿಕವಾಗಿ ಇಂದು ಏನಾಗಬೇಕಿದೆಯೋ ಅದು ಇಂದು ಸಾಧ್ಯವಾಗಿಲ್ಲ. ಗ್ರಾಮ, ಪಟ್ಟಣ, ನಗರ ಮತ್ತು ಮಹಾನಗರಗಳೆಂಬ ತಾರತಮ್ಯವಿಲ್ಲದೆ ಉತ್ತಮ ಶಾಸನಗಳ ಆಶಯವನ್ನು ಸಮಸ್ತ ಜನತೆಗೆ ತಿಳಿಸುವ ವಿಚಾರ ಕ್ರಾಂತಿಕಾರಕ ಪರಿಣಾಮಕಾರಿ ಆಂದೋಳನ ಯಾವುದೂ ನಮ್ಮ ಮುಂದಿಲ್ಲದಿರುವುದು ಒಂದು ದುರಂತ.

Related Posts

Leave a Reply

Your email address will not be published. Required fields are marked *