ಬೆಂಗಳೂರು: ಬಿಬಿಎಂಪಿ ನಿರ್ವಹಣೆ ಮಾಡುತ್ತಿರುವ ಶುದ್ದ ಕುಡಿಯುವ ನೀರಿನ ಘಟಕಗಳ (ಆರ್.ಓ ಪ್ಲಾಂಟ್ ಗಳ) ನಿರ್ವಹಣೆಯ ಹೊಣೆಯನ್ನು ಬೆಂಗಳೂರು ಜಲಮಂಡಳಿಗೆ ಹಸ್ತಾಂತರ ಮಾಡಲು ಸೂಕ್ತ ಆದೇಶ ಹೊರಡಿಸಿ” ಎಂದು ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಈ ಬಗ್ಗೆ ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು, “ಬೆಂಗಳೂರು ನಗರದ ನಾಗರೀಕರಿಗೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಜವಾಬಾರಿಯನ್ನು ಬೆಂಗಳೂರು ಜಲಮಂಡಳಿ ನಿರ್ವಹಿಸುತ್ತಿದೆ. ಆದರೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತಿದೆ. ಈಗ ಬೇಸಿಗೆ ಆರಂಭವಾಗುತ್ತಿದ್ದು, ಒಂದು ವೇಳೆ ಕೊಳವೆಬಾವಿಗಳು ಬತ್ತಿ ಹೋದರೆ ಆರ್.ಓ. ಘಟಕಗಳಿಗೆ ಬೇಕಾಗುವ ನೀರನ್ನು ಬೆಂಗಳೂರು ಜಲಮಂಡಳಿ ಮುಖಾಂತರವೇ ಪೂರೈಸಬೇಕಾಗುತ್ತದೆ.
ನೀರು ಸರಬರಾಜು ಮಾಡುವ ಕುರಿತು ಎರಡು ಸಂಸ್ಥೆಗಳ ನಡುವೆ ಯಾವುದೇ ರೀತಿಯ ಸಮನ್ವಯದ ಕೊರತೆ ಉಂಟಾದರೂ ನಾಗರೀಕರಿಗೆ ತೊಂದರೆಯಾಗುತ್ತದೆ. ಆದ ಕಾರಣಕ್ಕೆ ಈ ಅನಾನುಕೂಲತೆ ತಪ್ಪಿಸುವ ದೃಷ್ಟಿಯಿಂದ ಬಿಬಿಎಂಪಿಗೆ ಸೇರಿದ ಎಲ್ಲಾ ಆರ್.ಓ. ಪ್ಲಾಂಟ್ ಗಳನ್ನು ಬೆಂಗಳೂರು ಜಲಮಂಡಳಿಯೇ ನಿರ್ವಹಣೆ ಮಾಡುವುದು ಸೂಕ್ತ” ಎಂದು ಡಿಸಿಎಂ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ನಗರ ಸಂಚಾರ ಕೈಗೊಂಡು ಪರಿಶೀಲಿಸಿದ ವೇಳೆ ಬೆಂಗಳೂರು ನಗರದ ಕೆಲವು ಆರ್.ಓ. ಪ್ಲಾಂಟ್ ಗಳು ಕೆಲಸ ಮಾಡದೇ ಇರುವುದನ್ನು ಗಮನಿಸಿದ್ದರು. ಈ ಬಗ್ಗೆ ವರದಿ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದರು.