Saturday, February 14, 2026
Menu

ಪ್ರತಿ ವರ್ಷ ನವೆಂಬರ್ 3, 4, 5 ರಂದು ಹಂಪಿ ಉತ್ಸವ: ಸಿಎಂ

ಪ್ರತಿ ವರ್ಷದ ನವೆಂಬರ್ 3, 4, 5 ರಂದು ಹಂಪಿ ಉತ್ಸವದ ಆಯೋಜಿಸುವುದಾಗಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  ವಿಜಯನಗರದಲ್ಲಿ  ಹಂಪಿ ಉತ್ಸವ 2026 ನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಹಂಪಿ ಉತ್ಸವ 2026 ವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ಮಾಜಿ ಸಚಿವ ದಿವಂಗತ ಎಂ ಪಿ ಪ್ರಕಾಶ್ ಅವರು ಹಿಂದೆ ಕನ್ನಡ ಮತ್ತು ಸಂಸ್ಕೃತಿಯ ಸಚಿವರಾಗಿದ್ದ ಸಂದರ್ಭದಲ್ಲಿ , ಮೈಸೂರು ದಸರಾ ಉತ್ಸವದ ವಿಜೃಂಭಣೆಯನ್ನು ಮನಗಂಡು, ಇದೇ ರೀತಿಯ ಉತ್ಸವವನ್ನು ಹಂಪಿಯಲ್ಲಿಯೂ ನೆರವೇರಿಸಬೇಕೆಂದು ಆಶಿಸಿದ್ದರು. ಎಂ ಪಿ ಪ್ರಕಾಶ್ ಅವರು, ಕನ್ನಡ ನಾಡು ನುಡಿ, ಸಾಹಿತ್ಯಗಳಲ್ಲಿ ಅಪಾರ ಆಸಕ್ತಿ ವಹಿಸಿದ್ದರು. ಈ ರೀತಿಯ ಅದ್ದೂರಿ ಹಂಪಿ ಉತ್ಸವದ ಆಚರಣೆಗೆ ಮೂಲ ಕಾರಣ ಎಂಪಿ ಪ್ರಕಾಶ್ ಅವರು. ಅವರೊಬ್ಬ ಅಪರೂಪದ ವ್ಯಕ್ತಿ ಎಂದರು.

ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಸಂಪತ್ಭರಿತವಾಗಿತ್ತು. ನಮ್ಮ ಸರ್ಕಾರ ಕೂಡ ಸಾಹಿತ್ಯ ಸಂಸ್ಕೃತಿ ಕಲೆ ಗಳಿಗೆ ಹೆಚ್ಚಿನ ಒತ್ತು ನೀಡುತ್ತದೆ. ವಿಜಯನಗರ ಕಾಲದಲ್ಲಿ ಸಂಪ್ಭರಿತ ವಾದ ಹಂಪಿಯ ಹಿರಿಮೆಯನ್ನು ಹಂಪಿ ಉತ್ಸವದಿಂದ ತಿಳಿಯಬಹುದಾಗಿದೆ. ವಿದೇಶಿ ಪ್ರವಾಸಿಗ ಅಬ್ದುಲ್ ರಜಾಕ್ , ವಿಜಯನಗರ ಶ್ರೀಮಂತವಾದ ಸ್ಥಳವಾಗಿತ್ತು ಎಂದು ಉಲ್ಲೇಖಿಸಿದ್ದನ್ನು ಸಿಎಂ ವಿವರಿಸಿದರು.

ಸಮಾಜದಲ್ಲಿ ಬಡವ ಶ್ರೀಮಂತ, ಉತ್ತಮ ಮತ್ತು ಕೆಳ ಜಾತಿಗಳೆಂಬ ಬೇಧವಿದೆ. ಡಾ.ಬಿ.ಆರ್. ಅಂಬೇಡ್ಕರ್ ರವರು ಸಂವಿಧಾನ ರಚಿಸದಿದ್ದರೆ, ಸಮಾನ ಅವಕಾಶಗಳು ದೊರೆಯಲು ಸಾಧ್ಯವಾಗುತ್ತಿರಲಿಲ್ಲ. ಸಮಾಜದ ಅಸಮಾನತೆಯನ್ನು ತೊಡೆದು ಹಾಕಿದರೆ ಸಮಸಮಾಜ ನಿರ್ಮಾಣ ಸಾಧ್ಯ. 2013 ರಲ್ಲಿ ಮತ್ತು 2023 ರಲ್ಲಿ ಮುಖ್ಯಮಂತ್ರಿಯಾಗಿ ನಾನು ತಂದಿರುವ ಕಾರ್ಯಕ್ರಮಗಳು ಅಸಮಾನತೆಯ ನಿವಾರಣೆಗೆ ತಂದವುಗಳಾಗಿವೆ. ಸಮಸಮಾಜ ನಿರ್ಮಿಸಿದಾಗ ದುರ್ಬಲ ವರ್ಗದವರೂ  ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.

ನಮ್ಮ ಸರ್ಕಾರ ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್ದು, 2023 ರಿಂದಲೂ ಗ್ಯಾರಂಟಿ ಯೋಜನೆಗಳನ್ನು ನೀಡಿ, ಅಸಮಾನತೆಯನ್ನು ನಿವಾರಿಸುವ ಉದ್ದೇಶ ಹೊಂದಿದೆ. ಜನರಿಗೆ ಆರ್ಥಿಕ , ಸಾಮಾಜಿಕ ಶಕ್ತಿಯನ್ನು ಸಾಧ್ಯವಾಗಿಸದೇ ಇದ್ದರೆ, ಜಾತಿ ವ್ಯವಸ್ಥೇ ಹೋಗಲಾಡಿಸಬಹುದು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ಸುಮಾರು 60 ಸಾವಿರ ರೂ.ಗಳ ಆರ್ಥಿಕ ಬಲವನ್ನು ತುಂಬುತ್ತಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತಿದೆ. ಜಾತಿವ್ಯವಸ್ಥೆ ಇಲ್ಲವಾಗಲು ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಸ್ವಾತಂತ್ರ್ಯ ಬರಬೇಕು ಎಂದು ಹೇಳಿದರು.

ಸರ್ಕಾರ ಆಚರಿಸುವ ಚಾಲುಕ್ಯ ಉತ್ಸವ, ಹಂಪಿ ಉತ್ಸವ, ಕಿತ್ತೂರು ಉತ್ಸವ, ಆನೆಗುಂದಿ ಉತ್ಸವ, ಬನವಾಸಿ , ಮೈಸೂರು ದಸರಾ, ಕರಾವಳಿ ಉತ್ಸವ ಗಳ ಮೂಲಕ ನಾಡಿನ ಸಾಹಿತ್ಯ, ಕಲೆ, ಸಂಗೀತ ಪರಂಪರೆಗಳನ್ನು ಸಂರಕ್ಷಿಸುವ ದಿಸೆಯಲ್ಲಿ ಮುಖ್ಯವಾಗಿದೆ. ಮುಂದಿನ ಪೀಳಿಗೆಗೆ ಕನ್ನಡದ ಶ್ರೀಮಂತ ಪರಂಪರೆ ಕೊಂಡೊಯ್ಯವ ದಿಸೆಯಲ್ಲಿ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಬದ್ಧವಾಗಿದೆ ಎಂದರು.

Related Posts

Leave a Reply

Your email address will not be published. Required fields are marked *