ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್-1ಬಿ ವೀಸಾಗಳ ಮೇಲಿನ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಏರಿಕೆ ಮಾಡುವ ಮೂಲಕ ಭಾರತೀಯ ಉದ್ಯೋಗಿಗಳ ಮೇಲೆ ಬರೆ ಎಳೆದಿದ್ದಾರೆ. ವಿದೇಶಿ ಉದ್ಯೋಗಿಗಳಿಗೆ ವಾರ್ಷಿಕ 1,00,000 ಡಾಲರ್ ವೀಸಾ ಶುಲ್ಕವನ್ನು ವಿಧಿಸುವ ಘೋಷಣೆಗೆ ಟ್ರಂಪ್ ಸಹಿ ಹಾಕಿದ್ದು, ಶ್ರೀಮಂತರಿಗೆ ಅಮೆರಿಕ ಪೌರತ್ವ ಪಡೆಯಲು 1 ಮಿಲಿಯನ್ ಡಾಲರ್ ‘ಗೋಲ್ಡ್ ಕಾರ್ಡ್’ ವೀಸಾ ಜಾರಿಗೊಳಿಸಿದ್ದಾರೆ.
ಅಮೆರಿಕದ ಉದ್ಯೋಗಿಗಳ ರಕ್ಷಣೆಗೆ ಹೊಸ ಕ್ರಮಕ್ಕೆ ಅಮೆರಿಕ ಸರ್ಕಾರ ಬದ್ಧವಾಗಿದೆ ಎಂದು ಟ್ರಂಪ್ ಹೇಳಿದ್ದು, ಹೆಚ್-1ಬಿ ವೀಸಾಗಳು ವಿದೇಶಿಯರನ್ನು ಉನ್ನತ ಕೌಶಲ್ಯದ ಉದ್ಯೋಗಗಳಿಗೆ ಅಮೆರಿಕಕ್ಕೆ ಕರೆತರಲು ಉದ್ದೇಶಿಸಿವೆ. ಅಮೆರಿಕ ಉದ್ಯೋಗಿಗಳಿಗೆ ಹೆಚ್ಚಿನ ಸಂಬಳ ಕೊಟ್ಟು ನೇಮಿಸಿಕೊಳ್ಳುವುದು ಟೆಕ್ ಕಂಪನಿಗಳಿಗೆ ಕಷ್ಟ. ಕಡಿಮೆ ಸಂಬಳಕ್ಕೆ ನುರಿತ, ಕೌಶಲಪೂರ್ಣ ವಿದೇಶಿ ಉದ್ಯೋಗಿಗಳನ್ನು ಕರೆತಂದು ಕೆಲಸ ನೀಡುತ್ತಿವೆ. ಅದಕ್ಕಾಗಿ ಹೆಚ್-1ಬಿ ವೀಸಾ ಜಾರಿಯಲ್ಲಿದೆ.
ವೀಸಾ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿರುವುದರಿಂದ ಇತರ ದೇಶಗಳಿಂದ ನುರಿತ ಉದ್ಯೋಗಿಗಳ ಕರೆತರಲು ಅರ್ಜಿ ಸಲ್ಲಿಸುವ ಕಂಪನಿಗಳು ವಾರ್ಷಿಕವಾಗಿ ಪ್ರತಿ ವೀಸಾಕ್ಕೆ 1,00,000 ಡಾಲರ್ ಪಾವತಿಸಬೇಕಿದೆ.
ಈ ನಡುವೆ ಭಾರತದ ಕೆಲ ವಸ್ತುಗಳ ಮೇಲೆ ವಿಧಿಸಿದ ಸುಂಕವನ್ನು ನವೆಂಬರ್ 30ರ ನಂತರ ಅಮೆರಿಕ ಹಿಂದಕ್ಕೆ ಪಡೆಯಬಹುದು ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಅಭಿಪ್ರಾಯಪಟ್ಟಿದ್ದಾರೆ.
ಆರಂಭದಲ್ಲಿ ಶೇ.25 ಸುಂಕ ನಂತರ ದಂಡದ ರೂಪದಲ್ಲಿ ಶೇ.25 ಸುಂಕ ವಿಧಿಸಿದ್ದು, ಭೌಗೋಳಿಕ ರಾಜಕೀಯ ಸಂದರ್ಭಗಳು ಎರಡನೇ ಶೇ.25 ಸುಂಕ ವಿಧಿಸಲು ಕಾರಣವಾಗಿರಬಹುದು. ಕಳೆದ ಎರಡು ವಾರ ಮತ್ತು ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ನ.30ರ ನಂತರ ಈ ದಂಡದ ಸುಂಕ ಇರಲಾರದು ಎಂದು ಭಾವಿಸುವುದಾಗಿ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ಮಧ್ಯೆ ವ್ಯಾಪಾರ ಮಾತುಕತೆ ಮತ್ತೆ ಆರಂಭವಾಗಿದೆ. ಪ್ರಧಾನಿ ಮೋದಿ ಅವರ 75ನೇ ಹುಟ್ಟುಹಬ್ಬಕ್ಕೆ ಟ್ರಂಪ್ ಶುಭ ಕೋರಿದ್ದರು. ಇದೇ ಸಮಯದಲ್ಲಿ ಅನಂತ ನಾಗೇಶ್ವರನ್ ಈ ಹೇಳಿಕೆ ನೀಡಿರುವುದು ಗಮನಾರ್ಹ.
ಭಾರತದ ರಫ್ತು ಬೆಳವಣಿಗೆ ಪ್ರಸ್ತುತ ವಾರ್ಷಿಕವಾಗಿ 850 ಶತಕೋಟಿ ಡಾಲರ್ ಆಗಿದ್ದು, ಇದು 1 ಟ್ರಿಲಿಯನ್ ಡಾಲರ್ ತಲುಪುವ ಹಾದಿಯಲ್ಲಿದೆ. ಇದು ಜಿಡಿಪಿಯ ಶೇ.25 ರಷ್ಟನ್ನು ಪ್ರತಿನಿಧಿಸುತ್ತದೆ. ಇದು ಆರೋಗ್ಯಕರ, ಮುಕ್ತ ಆರ್ಥಿಕತೆಯನ್ನು ಸೂಚಿಸುತ್ತದೆ ಎಂದು ಅನಂತ ನಾಗೇಶ್ವರನ್ ಹೇಳಿದ್ದಾರೆ.