ತಾಯಿ ತನ್ನ ಮಕ್ಕಳಿಗೆ ಸದಾ ಎಚ್ಚರಿಸುತ್ತಲೇ ಇರುತ್ತಾಳೆ, “ಮಗು ಅಪ್ಪನನ್ನು ಸುಮ್ಮನೆ ಕಾಡಬೇಡ, ಅವರಿಗೆ ತೊಂದರೆ ಕೊಡಬೇಡ, ತುಂಬ ಬಳಲಿರುವ ಜೀವವದು ಎಂದು. ಊಹೂಂ… ನಮಗದು ಅರ್ಥವಾಗುವುದೇ ಇಲ್ಲ. ಎಲ್ಲಿಯವರೆಗೆ ಅಂದರೆ, ಅಪ್ಪ ಅಗಲುವವರೆಗೂ. ಖರ್ಚಿಗೆ ದುಡ್ಡು ಬೇಕಾದಾಗಲೆಲ್ಲ ಪರೀಕ್ಷೆ, ಶಾಲೆಯ ಫೀಸು ಹೀಗೆ ಏನಾದರೂ ನೆಪವೊಡ್ಡಿ ಆತನ ಮುಂದೆ ಕೈಯೊಡ್ಡಿ ನಿಲ್ಲುತ್ತಿದ್ದೆವು. ಆತ ಏನೋ ಮರೆತವನಂತೆ ತಕ್ಷಣ ಮಾಯವಾಗಿ ಅರೆಘಳಿಗೆಯಲ್ಲಿಯೇ ಕೈಯಲ್ಲಿ ಕಾಸು ಹಿಡಿದು ಪ್ರತ್ಯಕ್ಷನಾಗುತ್ತಿದ್ದ. ಜೇಬಿನೊಳಗೆ ಕಾಸು ಇಡುತ್ತ ಮುಗುಳ್ನಗುತ್ತ ನಿಲ್ಲುತ್ತಿದ್ದ…
ನೀನಿನ್ನೂ ಬದುಕಿರುವೆ;
ನಿನ್ನ ಬದುಕಿಗೆ ನೀನೇ ಹೆಗಲಾಗು
ಮಂದಿ ಹೆಗಲು ಕೊಡಲು ಬರುವುದು
ನೀ ಸತ್ತಾಗಲಷ್ಟೇ!
ನಿನಗೆ ನೀನೇ ಗೆಳೆಯ ಎಂಬ ಅಡಿಗರ ಕವಿತೆಯನ್ನು ನೆನಪಿಸುತ್ತಲೆ, ಮತ್ತೊಬ್ಬರ ಆಸರೆಯ ನಿರೀಕ್ಷೆಯಲ್ಲಿ ನೀನುಳಿದುಬಿಟ್ಟರೆ ಎದ್ದು ನಿಲ್ಲುವುದ್ಯಾವಾಗ? ಜನ ಉಸಿರು ಚೆಲ್ಲಿದ ಮೇಲೆಯೇ ಹೆಗಲು ನೀಡಲು ಬರುತ್ತಾರೆ ನೆನಪಿಟ್ಟುಕೋ ಎನ್ನುವ ಈ ಸಾಲುಗಳು ಮನು ಗುರುಸ್ವಾಮಿ ಅವರದ್ದು.
ಅಪ್ಪ ಅಳುತ್ತಿದ್ದ…
ಅವ್ವ ಯಾವಾಗಲೂ ಹೇಳುತ್ತಿದ್ದಳು:
ನಿನ್ನಪ್ಪ ಸೊರಗಿದ್ದಾನೆ; ಕಾಡಬೇಡ ಮಗನೇ!
ನನಗದು ಅರ್ಥವಾಗಲಿಲ್ಲ,
ಆತ ಬದುಕಿರುವವರೆಗೂ!
ಖರ್ಚಿಗೆ ಕಾಸು ಬೇಕಾದಾಗಲೆಲ್ಲ
ಆತನೆದುರು ಗೋಳಿಡುತ್ತಿದ್ದೆ;
ಪರೀಕ್ಷೆ, ಫೀಸು, ನೆಪವೊಡ್ಡುತ್ತಿದ್ದೆ!
ಮುಗ್ಧ; ಇತ್ತ ಹೋಗಿ ಅತ್ತ ಬಂದು
ಹಣವ ಕಿಸೆಯೊಳಿಡುತ್ತಿದ್ದ!
ಹಣವೆಲ್ಲಿಂದ ಬಂತು ಅಪ್ಪನಿಗೆ?
ಅದರ ಯೋಚನೆ ನನಗಿರಲಿಲ್ಲ;
ವೆಚ್ಚಕ್ಕೆ ಹಣ ಸಿಕ್ಕಿತಲ್ಲ? ಖುಷಿ.
ದುಡ್ಡಿನ ಬೆಲೆ ತಿಳಿಯಲಿಲ್ಲ!
ಅಪ್ಪ ಅಳುತ್ತಿದ್ದ ಆಗಾಗ,
ಕಾರಣವೇನೋ?
ತಿಳಿದುಕೊಳ್ಳುವ ಸಂಯಮ
ಆ ಕ್ಷಣ ನನಗಿರಲಿಲ್ಲ!
ದುಡಿಯುತ್ತಾನೆ; ದಣಿಯುತ್ತಾನೆ
ಕೈ ಜೋಡಿಸು ಮಗನೇ- ಅವ್ವ
ಎಷ್ಟು ಹೇಳಿದರೂ ಕೇಳಲಿಲ್ಲ.
ಇಂದು ಅಪ್ಪನ ಕೈ ಸೋತಿದೆ
ಹೊಣೆಗಾರಿಕೆ ನನ್ನ ಹೆಗಲಿಗೇರಿದೆ
ನಾನೀಗ ದುಡಿಯಲೇಬೇಕು;
ಅನಿವಾರ್ಯ!
ಹಿಂದೆ ಅವ್ವನ ಮಾತಿಗೆ ಕಿವಿಗೊಟ್ಟಿದ್ದರೆ,
ಇಂದು ಅಪ್ಪ ನನ್ನ ಜೊತೆಯಲ್ಲೇ
ಇರುತ್ತಿದ್ದನೇನೋ? ಈಗಿಲ್ಲ!
ನನ್ನ ದುಡಿಯುವ ಕೈಗಳ ಕಂಡೊಡನೆ,
ಬಹುಶಃ ಆತನ ಸಡಗರಕ್ಕೆ, ಸಂಭ್ರಮಕೆ
ಕೊನೆಯೇ ಇರುತ್ತಿರಲಿಲ್ಲ.
– ಮನು ಗುರುಸ್ವಾಮಿ
ಒಂದು ವಸ್ತು ಹಾಗೂ ವ್ಯಕ್ತಿಯ ಬೆಲೆ ಹತ್ತಿರ ಇದ್ದಾಗ ಗೊತ್ತೇ ಆಗುವುದಿಲ್ಲ, ದೂರವಾದಾಗ ಅವುಗಳ ಮೌಲ್ಯ, ಅನುಪಸ್ಥಿತಿಯ ಅಗಾಧತೆ, ಎದೆಯಲ್ಲಿ ಉಳಿಸಿ ಹೋದ ಚಿರಂತನ ಕೊರಗು ಕೊನೆಗಾಲದವರೆಗೂ ನಮ್ಮನ್ನು ಬಾಧಿಸುತ್ತಲೇ ಇರುತ್ತದೆ. ಹಾಗೆಂದೇ ತಿಳಿದವರು ಹೇಳುತ್ತಾರೆ. ಇರುವಾಗಲೇ ಎಲ್ಲ ಮರೆತು ಬಿಗಿದಪ್ಪಿಕೊಂಡು ಬಿಡಿ, ಯಾರಿಗ್ಗೊತ್ತು ನಾಳೆ ಆ ಅವಕಾಶ ಸಿಗುವುದೋ, ಇಲ್ಲವೋ? ಇದ್ದಾಗ ಇರದ ಹಂಬಲ ಇಲ್ಲವಾದಾಗಲೇ ಹೆಚ್ಚು. ಗಂಡು ಮಕ್ಕಳು ಹೆತ್ತವ್ವನಿಗೆ ಹತ್ತಿರವಾದಷ್ಟು ತಂದೆಗೆ ಸಮೀಪವಾಗಿರುವುದಿಲ್ಲ. ಅದಕ್ಕೆಂದೇ ನಮ್ಮ ದೃಷ್ಟಿಯಲ್ಲಿ ಅಪ್ಪ ಯಾಕೋ ಹಿಂದುಳಿದುಬಿಟ್ಟ ಎನಿಸುತ್ತದೆ. ನಿಜದೃಷ್ಟಿಯಲ್ಲಿ ಅಪ್ಪ, ನಮಗಾಗಿ ಬದುಕು ಸುಟ್ಟುಕೊಂಡಿರುತ್ತಾನೆ, ಹಸಿವು, ನಿದ್ರೆ, ವಾಂಛೆಗಳನ್ನೆಲ್ಲ ದೂರ ತಳ್ಳಿರುತ್ತಾನೆ, ನಮ್ಮನ್ನು ಎತ್ತರೆತ್ತರಕ್ಕೇರಿಸಲು ನೆಲಕ್ಕಂಟಿಕೊಂಡು ದುಡಿಯುತ್ತಿರುತ್ತಾನೆ. ಇವ್ಯಾವುವೂ ನಮಗೆ ಅರಿವಿಗೆ ಬರುವುದೇ ಇಲ್ಲ. ಬಂದಾಗ ಆತ ನಮ್ಮ ಜೊತೆ ಇರುವುದೇ ಇಲ್ಲ.
ಮನು ಗುರುಸ್ವಾಮಿಯವರ ಈ ಕವಿತೆ ಕೂಡ ಅಪ್ಪನ ಅನುಪಸ್ಥಿತಿಯಲ್ಲಿ, ಮೊದಲು ಆತನ ಜೊತೆ ಹೇಗೆಲ್ಲಾ ನಡೆದುಕೊಂಡಿದ್ದೆ ಎಂಬುದನ್ನು ನೆನಪಿಸಿಕೊಂಡು ಕಣ್ಣೀರಾಗುತ್ತದೆ. ಹೆತ್ತ ಜೀವಗಳು ಬದುಕಿರುವಾಗಲೇ ಅವರ ನೋವುಗಳಿಗೆ ಕಿವಿಯಾಗಿ ಎಂದು ಕಿವಿಮಾತನ್ನೂ ಹೇಳುತ್ತದೆ.
ತಾಯಿ ತನ್ನ ಮಕ್ಕಳಿಗೆ ಸದಾ ಎಚ್ಚರಿಸುತ್ತಲೇ ಇರುತ್ತಾಳೆ, “ಮಗು ಅಪ್ಪನನ್ನು ಸುಮ್ಮನೆ ಕಾಡಬೇಡ, ಅವರಿಗೆ ತೊಂದರೆ ಕೊಡಬೇಡ, ತುಂಬ ಬಳಲಿರುವ ಜೀವವದು ಎಂದು. ಊಹುಂ… ನಮಗದು ಅರ್ಥವಾಗುವುದೇ ಇಲ್ಲ. ಎಲ್ಲಿಯವರೆಗೆ ಅಂದರೆ, ಅಪ್ಪ ಅಗಲುವವರೆಗೂ. ಖರ್ಚಿಗೆ ದುಡ್ಡು ಬೇಕಾದಾಗಲೆಲ್ಲ ಪರೀಕ್ಷೆ, ಶಾಲೆಯ ಫೀಸು ಹೀಗೆ ಏನಾದರೂ ನೆಪವೊಡ್ಡಿ ಆತನ ಮುಂದೆ ಕೈಯೊಡ್ಡಿ ನಿಲ್ಲುತ್ತಿದ್ದೆವು. ಆತ ಏನೋ ಮರೆತವನಂತೆ ತಕ್ಷಣ ಮಾಯವಾಗಿ ಅರೆಘಳಿಗೆಯಲ್ಲಿಯೇ ಕೈಯಲ್ಲಿ ಕಾಸು ಹಿಡಿದು ಪ್ರತ್ಯಕ್ಷನಾಗುತ್ತಿದ್ದ. ಜೇಬಿನೊಳಗೆ ಕಾಸು ಇಡುತ್ತ ಮುಗುಳ್ನಗುತ್ತ ನಿಲ್ಲುತ್ತಿದ್ದ. ಒಂದರೆಕ್ಷಣವೂ ನಮ್ಮ ತಲೆಯಲ್ಲಿ ಅಪ್ಪನಿಗೆ ಹಣ ಎಲ್ಲಿಂದ ಬಂತು ಎಂಬ ಆಲೋಚನೆ ಸುಳಿಯುತ್ತಿರಲಿಲ್ಲ. ಮೋಜು-ಮಜೆಗೆ ದುಡ್ಡು ದಕ್ಕಿತಲ್ಲ, ಅದೇ ಖುಷಿ. ಯಾವತ್ತಿಗೂ ಆ ಸಂದರ್ಭದಲ್ಲಿ ದುಡ್ಡಿನ ಬೆಲೆ ನಮಗೆ ತಿಳಿಯಲೇ ಇಲ್ಲ.
ಅಪ್ಪ ಒಮ್ಮೊಮ್ಮೆ ಒಬ್ಬನೇ ಕೂತು ಕಣ್ಣೀರು ಹಾಕುತ್ತಿದ್ದ. ಕಾರಣ ಕೇಳುವ, ಆತನನ್ನು ಸಮಾಧಾನಿಸುವ ಸಂಯಮ, ತಾಳ್ಮೆ ನಮಗೆ ಇರಲಿಲ್ಲ. ನೋಡು ನಿಮ್ಮಪ್ಪ ನಿಮಗಾಗಿಯೇ ಜೀವ ತೇದು ದಣಿಯುತ್ತಾನೆ. ಒಂದಿನವಾದರೂ ಆತನ ಕಾಲಿಗೆ ನಮಸ್ಕರಿಸು ಎಂದು ತಾಯಿ ಅದೆಷ್ಟು ಹೇಳಿದರೂ ಕೇಳುವ ಗೋಜಿಗೆ ಹೋಗಲಿಲ್ಲ. ಇದೀಗ ಕಾಲಚಕ್ರ ಉರುಳಿ ನಿಂತಿದೆ, ಹೊಣೆಗಾರಿಕೆ ಅಪ್ಪನ ಹೆಗಲು ಬಿಟ್ಟು ನನ್ನ ಹೆಗಲಿಗೇರಿದೆ. ಬದುಕಿನ ತುತ್ತಿನ ಚೀಲ ತುಂಬಿಸಲು ದುಡಿಮೆ ಈಗ ಅನಿವಾರ್ಯ. ಈಗೀಗ ಯೋಚಿಸುತ್ತೇನೆ… ಹಿಂದೊಮ್ಮೆ ಅಮ್ಮನ ಮಾತಿಗೆ ಕಿವಿಗೊಟ್ಟಿದ್ದರೆ ಅಪ್ಪ ನನ್ನ ಜೊತೆಯಲ್ಲಿ ಖುಷಿಯಿಂದ ಇರುತ್ತಿದ್ದನೇನೋ? ಆದರೆ ಕಾಲಮಿಂಚಿ ಹೋಗಿದೆ, ಅಪ್ಪ ಈಗ ಬದುಕಿಲ್ಲ. ಒಂದಂತೂ ಸತ್ಯ ಅಪ್ಪ ಈಗ ಬದುಕಿದ್ದರೆ, ನಾನು ದುಡಿಯುವುದ ಕಂಡು ಆತನ ಸಂಭ್ರಮ ಮುಗಿಲು ಮುಟ್ಟುತ್ತಿತ್ತು.
ತುಂಬ ಸರಳವಾಗಿ ಅಪ್ಪನಿಲ್ಲದ ಸಂಕಟದ ಜೊತೆಗೆ, ಇದ್ದಾಗ ಆತನನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲವಲ್ಲ ಎಂಬ ಕೊರಗು ಕವಿತೆ ತುಂಬ ಹರಡಿಕೊಂಡು ನಮ್ಮನ್ನು ಆರ್ದ್ರಗೊಳಿಸುತ್ತದೆ. ಕವಿಗೆ ನಮನಗಳು.
ಕವಿ ಪರಿಚಯ: ಮೈಸೂರು ಜಿಲ್ಲೆಯ ತಲಕಾಡು ಸಮೀಪದ ಪರಿಣಾಮಿಪುರ ಗ್ರಾಮದವರಾದ ಮನು ಗುರುಸ್ವಾಮಿ ಕನ್ನಡ ಸ್ನಾತಕೋತ್ತರ ಪದವೀಧರರು. ಬೆಂಗಳೂರಿನ ಕೆಎಲ್ಇಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿ ಜೀವನವನ್ನು ಆರಂಭಿಸಿದ ಇವರು, ಬೆಂಗಳೂರಿನ ಯಲಹಂಕದ ಬೃಂದಾವನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿಬ್ಬೆರಗು ನಾಟಕ, ಅವಳೂ ಕತೆಯಾದಳು ನೀಳ್ಗತೆ, ಕಲ್ಲು ದೇವರು ದೇವರಲ್ಲ ಸಂಶೋಧನಾ ನಿಬಂಧ, ವ್ಯಭಿಚಾರಿ ಹೂವು ಕವನ ಸಂಕಲನಗಳು ಪ್ರಕಟವಾಗಿವೆ. ಗ್ರಾಮೀಣ ಪ್ರದೇಶದಲ್ಲಿನ ಬಡಮಕ್ಕಳ ಅನುಕೂಲಕ್ಕಾಗಿ ಕುವೆಂಪು ಪುಸ್ತಕ ಮನೆ ಎಂಬ ಹೆಸರಿನ ಗ್ರಂಥಾಲಯ ಸ್ಥಾಪಿಸಿದ್ದಾರೆ. ವಾಟ್ಸಾಪ್ ಸಾಹಿತ್ಯ ಪತ್ರಿಕೆಯ ರೂವಾರಿಯೂ ಹೌದು.