Menu

ಉಗ್ರರ ಗುಂಡುಗಳ ಹೋಲಿಕೆ, ಚಾಕೋಲೆಟ್, ಶವ ಚಹರೆಯಿಂದ ಪೆಹಲ್ಗಾಮ್ ಉಗ್ರರ ಪತ್ತೆ: ಲೋಕಸಭೆಯಲ್ಲಿ ಅಮಿತ್ ಶಾ

ನವದೆಹಲಿ: ಭಾರತೀಯ ಸೇನೆ ಆಪರೇಷನ್ ಮಹದೇವ್ ಕಾರ್ಯಾಚರಣೆಯಲ್ಲಿ ಹತ್ಯೆಯಾದವರು ಪಹಲ್ಗಾಮ್‌ ದಾಳಿಕೋರರು ಎಂಬ ಬಗ್ಗೆ ಹಲವು ಸಾಕ್ಷ್ಯಗಳನ್ನು ದೃಢಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದರು.

ಆಪರೇಷನ್‌ ಸಿಂಧೂರ ವಿಷಯದ ಮೇಲೆ ಲೋಕಸಭೆಯಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಮಂಗಳವಾರ ಪಾಲ್ಗೊಂಡ ಅಮಿತ್ ಶಾ, ಪೆಹಲ್ಗಾಮ್ ದಾಳಿಯಲ್ಲಿ 26 ಮುಗ್ಧ ಪ್ರವಾಸಿಗರನ್ನು ಕೊಂದಿದ್ದು ಇವರೇ ಎಂಬುದನ್ನು ದೃಢಪಡಿಸಿಕೊಂಡ ನಂತರವೇ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ ಎಂದರು.

ಮಾಜಿ ಕೇಂದ್ರ ಸಚಿವ ಚಿದಂಬರಂ ಹತ್ಯೆಯಾದವರು ಪೆಹಲ್ಗಾಮ್ ದಾಳಿಕೋರರೇ ಅಥವಾ ಪಾಕಿಸ್ತಾನದವರೇ ಎಂದು ಹೇಗೆ ದೃಢಪಡಿಸುತ್ತಿರಾ? ಸ್ಥಳೀಯರು ಕೂಡ ಆಗಿರಬಹುದಲ್ಲವೇ ಎಂಬ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, ಈ ರೀತಿಯ ಅನುಮಾನಸ್ಪದ ಹೇಳಿಕೆಯಿಂದ ನೋವಾಗಿದೆ ಎಂದರು.

ಆಪರೇಷನ್ ಮಹದೇವ ಕಾರ್ಯಾಚರಣೆಯಲ್ಲಿ ಹತ್ಯೆಯಾದ ಉಗ್ರರ ದೇಹಗಳನ್ನು ಪ್ರಕರಣದಲ್ಲಿ ಬಂಧಿಸಲಾಗಿರುವ ವ್ಯಕ್ತಿಗಳಿಗೆ ತೋರಿಸಿ ದೃಢಪಡಿಸಿಕೊಳ್ಳಲಾಗಿದೆ. ಅಲ್ಲದೇ ಉಗ್ರರ ಬಳಿ ಪತ್ತೆಯಾದ ಒಂದು ಎಂಜಿ-4 ಮತ್ತು ಎರಡು ಎಕೆ-47 ರೈಫಲ್ಸ್ ಗಳನ್ನು ವಿಶೇಷ ವಿಮಾನದಲ್ಲಿ ಲ್ಯಾಬ್ ಗೆ ಕಳುಹಿಸಿ ಪೆಹಲ್ಗಾಮ್ ನಲ್ಲಿ ಹಾರಿಸಿದ ಗುಂಡುಗಳಿಗೆ ಹೋಲಿಕೆ ಮಾಡಿ ದೃಢಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಉಗ್ರರ ಬಳಿ ಪತ್ತೆಯಾದ ಚಾಕೋಲೆಟ್ ಕೂಡ ಪಾಕಿಸ್ತಾನದ್ದಾಗಿದೆ. ಅಲ್ಲದೇ ಅವರ ಬಳಿ ಪತ್ತೆಯಾದ ಶಸ್ತ್ರಾಸ್ತ್ರಗಳು ಕೂಡ ಅಲ್ಲಿಯವೇ. ಈ ಎಲ್ಲಾ ಪರೀಕ್ಷೆಗಳನ್ನು 6 ವಿಜ್ಞಾನಿಗಳು ದೃಢಪಡಿಸಿದ್ದಾರೆ. ಇದಕ್ಕಿಂತ ನಿಮಗೆ ಬೇರೆ ಏನು ಸಾಕ್ಷ್ಯ ಬೇಕು ಎಂದು ಅಮಿತ್ ಶಾ ಪ್ರಶ್ನಿಸಿದರು.

ಪಹಲ್ಗಾಮ್‌ನಲ್ಲಿ ಬಳಸಿದ್ದ ರೈಫಲ್‌ಗಳು, ಹತ್ಯೆಯಾದ ಉಗ್ರನ ಬಳಿ ಸಿಕ್ಕಿದ್ದ ರೈಫಲ್‌ ಒಂದೇ ಅಂತ ಖಚಿತಪಡಿಸಿದ್ದೇವೆ. ನಿನ್ನೆಯೇ ಚಂಡೀಗಢಕ್ಕೆ ವಿಮಾನದಲ್ಲಿ ರೈಫಲ್ ಕಳಿಸಿ ದೃಢಪಡಿಸಿದ್ದೇವೆ. ಪಹಲ್ಗಾಮ್‌ ದಾಳಿಯಲ್ಲಿ ಸಿಕ್ಕಿದ ಗುಂಡು ಮತ್ತು ನಿನ್ನೆ ಚಂಡೀಗಢ ಎಫ್‌ಎಸ್‌ಎಲ್‌ನಲ್ಲಿ ರೈಫಲ್ ಬಳಸಿ ಅದರಿಂದಲೂ ಗುಂಡು ಹಾರಿಸಿ ಖಚಿತಪಡಿಸಿದ್ದೇವೆ. ಈ ಮೂರೂ ರೈಫಲ್‌ಗಳನ್ನ ಬಳಸಿಯೇ ಪಹಲ್ಗಾಮ್‌ನಲ್ಲಿ ದಾಳಿ ಮಾಡಿರೋದು ಖಚಿತವಾಗಿದೆ ಎಂದು ವರು ಸ್ಪಷ್ಟಪಡಿಸಿದರು.

Related Posts

Leave a Reply

Your email address will not be published. Required fields are marked *