ಜಮ್ಮು ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ಮಂಗಳವಾರ ಉಗ್ರರು ಹಾಗೂ ಸೇನಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಮೂವರು ಉಗ್ರರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನಾಲ್ವರು ಭಯೋತ್ಪಾದಕರು ಹಾಗೂ ಭಾರತದ ಭದ್ರತಾ ಪಡೆ ನಡುವಿನ ಹೋರಾಟದಲ್ಲಿ ಲಷ್ಕರ್-ಎ-ತಯ್ಬಾ ಸಂಘಟನೆಯ ಒಬ್ಬ ಉಗ್ರ ಹತನಾಗಿದ್ದಾನೆ. ಇಬ್ಬರು ಉಗ್ರರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶೋಪಿಯಾನ್ ಜಿಲ್ಲೆಯ ಝಿನ್‌ಪಥರ್ ಕೆಲ್ಲರ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಗುಪ್ತಚರ ಮಾಹಿತಿ ಸಿಕ್ಕಿದ ತಕ್ಷಣ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರೆದವು. ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಕುಲ್ಗಾಮ್‌ನಲ್ಲಿ ಆರಂಭವಾದ ಈ ಕಾರ್ಯಾಚರಣೆಯು ನಂತರ ಶೋಪಿಯಾನ್‌ನ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಗೊಂಡಿದೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ ಆದಿಲ್ ಹುಸೇನ್ ಥೋಕರ್, ಅಲಿ ಭಾಯ್ ಮತ್ತು ಹಶೀಮ್ ಮೂಸಾ ಎಂಬ ಮೂವರು ಉಗ್ರರು ಪಾಕಿಸ್ತಾನದ ಬೆಂಬಲ ಹೊಂದಿದ್ದಾರೆ. ಇವರ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿದೆ. ಪಹಲ್ಗಾಮ್ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರ ಆಡಳಿತವು ಏಪ್ರಿಲ್ 25 ರಂದು ಬಿಜ್ಬೆಹರಾದಲ್ಲಿ ಥೋಕರ್‌ನ ಮನೆಯನ್ನು ಸ್ಫೋಟಿಸಿದೆ. ಥೋಕರ್ ಪಾಕಿಸ್ತಾನಿ ಉಗ್ರರು ಬೈಸರನ್ ಕಣಿವೆಯಲ್ಲಿ ದಾಳಿ ನಡೆಸುವುದಕ್ಕೆ ನೆರವಾಗಿದ್ದ. 2018 ರಲ್ಲಿ ಥೋಕರ್ ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಹೋಗಿದ್ದವ ಕಳೆದ ವರ್ಷ ಮತ್ತೆ ಕಾಶ್ಮೀರಕ್ಕೆ ಬಂದಿದ್ದ.