ಬೆಂಗಳೂರಿನಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಗೆ ಆಗಮಿಸುತ್ತಿದ್ದ ಚಾಮರಾಜನಗರ ಗುಂಡ್ಲಪೇಟೆಯ ರೈತ ಈಶ್ವರ್ (50) ಹೃದಯಾಘಾತದಿಂದ ಮಜೆಸ್ಟಿಕ್ ರೈಲು ನಿಲ್ದಾಣದ ಬಳಿ ಮೃತಪಟ್ಟಿದ್ದಾರೆ.
ಗುಂಡ್ಲಪೇಟೆಯ ಕುರುಬರಹುಂಡಿ ಗ್ರಾಮದ ಈಶ್ವರ್, ಬೆಳಗ್ಗೆ ಗುಂಡ್ಲಪೇಟೆಯಿಂದ ಮೈಸೂರಿಗೆ ಬಂದು ರೈಲು ಹತ್ತಿ ಬೆಂಗಳೂರಿಗೆ ಆಗಮಿಸಿದ್ದರು. ಮಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಇಳಿದು ಹೊರ ಬರುತ್ತಿದ್ದಾಗ ದಿಢೀರನೆ ಅಸ್ವಸ್ಥರಾಗಿ ನೆಲಕ್ಕೆ ಕುಸಿದಿದ್ದಾರೆ. ಪೊಲೀಸರ ತಂಡ ಕೂಡಲೇ ಸಿಪಿಆರ್ ನೀಡಿ ಪ್ರಥಮ ಚಿಕಿತ್ಸೆ ಪ್ರಯತ್ನ ಮಾಡಿದರು. ಬಳಿಕ ಈಶ್ವರ್ ಅವರನ್ನು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ತಕ್ಷಣ ಶಿಫ್ಟ್ ಮಾಡಲು ಆಂಬುಲೆನ್ಸ್ ಸಿದ್ಧಗೊಳಿಸಿ ಕೊಂಡೊಯ್ಯುವ ಮೊದಲೇ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಹೃದಯಾಘಾತವೇ ಸಾವಿಗೆ ಕಾರಣವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಅವರಿಗೆ ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಇತ್ತು ಎಂದು ಪರಿಚಿತ ರೈತರು ತಿಳಿಸಿದ್ದಾರೆ. ರೈತ ಸಂಘದ ಕಾರ್ಯದರ್ಶಿ ಕಿರಣ್ ಸಿದ್ದಾಪುರ ಮಾತನಾಡಿ, ಈಶ್ವರ್ ಅವರು ರೈತರ ಪರವಾಗಿ ಹೋರಾಟ ಮಾಡುತ್ತಿದ್ದರು. ದೇವನಹಳ್ಳಿ ಬಳಿ ನಡೆದಿದ್ದ ಹೋರಾಟಕ್ಕೆ ಕೂಡ ಬಂದಿದ್ದರು. ರೈತ ಈಶ್ವರ್ ಸಾವಿಗೆ ಸರ್ಕಾರವೇ ಹೊಣೆ. ರೈತರ ಪ್ರತಿಭಟನೆ ಫ್ರೀಡಂ ಪಾರ್ಕ್ ನಲ್ಲಿ ಇಲ್ಲದಿದ್ದರೆ ನಾವು ಬರುತ್ತಿರಲಿಲ್ಲ. ರೈತರಿಗೆ ಈ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಅಪೋಲೋ ಆಸ್ಪತ್ರೆಗೆ ಬಂದು ಭೇಟಿಯಾಗುವುದಾಗಿ ಮೊದಲು ಹೇಳಿದ್ದರೂ ಕೊನೆ ಕ್ಷಣದಲ್ಲಿ ನಿರಾಕರಿಸಿದ್ದು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮೃತದೇಹವನ್ನು ಅಪೋಲೋ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.