ಮುಖ್ಯಮಂತ್ರಿ ಭೂಪೇಂದ್ರ ಪಾಟೀಲ್ ನೇತೃತ್ವದ ಗುಜರಾತ್ ಸಚಿವ ಸಂಪುಟ ಪುನರಚನೆ ಶುಕ್ರವಾರ ನಡೆದಿದ್ದು, ಡಿಸಿಎಂ ಹರ್ಷ ಸಾಂಘ್ವಿ ಸೇರಿದಂತೆ 21 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಗಾಂಧೀನಗರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನೆರವೇರಿತು. ರಾಜ್ಯಪಾಲ ಆಚಾರ್ಯ ದೇವವ್ರತ್ ನೂತನ ಸಚಿವರಿಗೆ ಪ್ರಮಾಣ ವಚನ ಭೋದಿಸಿದರು.
ಗುಜರಾತ್ ರಾಜಕೀಯದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಗುರುವಾರ ಎಲ್ಲಾ 16 ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಶುಕ್ರವಾರ ಮಧ್ಯಾಹ್ನ ಸಂಪುಟ ಪುನರಚನೆ ನಡೆಯಿತು. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಭೂಪೇಂದ್ರ ಹೊರತುಪಡಿಸಿ ಎಲ್ಲಾ ಸಚಿವ ಸಂಪುಟದ ಸದಸ್ಯರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಹಿಂದಿನ ಸಂಪುಟದಲ್ಲಿದ್ದ ಇಬ್ಬರು ಹಾಗೂ 19 ಮಂದಿ ಹೊಸಬರು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯ ನಂತ ಭೂಪೇಂದ್ರ ಪಾಟೀಲ್ ಎಲ್ಲಾ ಸಚಿವರಿಂದ ರಾಜೀನಾಮೆ ಪತ್ರ ಪಡೆದಿದ್ದಾರೆ.
ರಾಜ್ಯದಲ್ಲಿ ಪಕ್ಷದ ಬಲವರ್ಧನೆಗಾಗಿ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಹೇಳಲಾಗಿದೆ. ಗುರುವಾರ ರಾತ್ರಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಭೇಟಿ ಮಾಡಿ ಸಚಿವರ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ. ಅಲ್ಲದೇ ನೂತನ ಸಚಿವರ ಪಟ್ಟಿಯನ್ನು ನೀಡಿದ್ದರು.
ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ವೇಳೆ ಯುವ ಸಮುದಾಯ ಹಾಗೂ ಹಿರಿಯರಿಗೆ ಮಣೆ ಹಾಕುವ ಜೊತೆಗೆ ಜಾತಿ ಸಮತೋಲನ ಕಾಯ್ದುಕೊಳ್ಳುವ ಮೂಲಕ ಮುಂದಿನ ಚುನಾವಣೆಗೆ ತಂತ್ರಗಾರಿಕೆ ಆರಂಭಿಸಲಾಗಿದೆ ಎಂದು ಉನ್ನತ ಮೂಲಗಳು ವಿಶ್ಲೇಷಿಸಿವೆ.