Menu
12

ಮಾಧ್ಯಮಗಳಲ್ಲಿ ಗುಲಿಯನ್ ಬ್ಯಾರಿ ಸಿಂಡ್ರೋಮ್ ಗುಲ್ಲು

ಚಿಕ್ಕೋಡಿಯ ಚಂದಪ್ಪ ಅರವತ್ತು ದಾಟಿದ್ದರೂ ಗಟ್ಟಿ ಮುಟ್ಟಾಗಿದ್ದ. ಹೊಲದಲ್ಲಿ ಹಗಲು ರಾತ್ರಿ ದುಡಿಯುತ್ತಿದ್ದ. ಒಮ್ಮೆಯೂ ದವಾಖಾನೆ ಮೆಟ್ಟಲು ಹತ್ತಿದವನೇ ಅಲ್ಲ. ಅಂಗಾಲಲ್ಲಿ, ಕಾಲಲ್ಲಿ ಜೋಮು ಹಿಡಿಯಹತ್ತಿತು. ಅಶಕ್ತಿಗೆ ಹೀಗಾಗಿರಬೇಕೆಂದು ನಿರ್ಲಕ್ಷಿಸಿದ. ಬರುಬರುತ್ತ ಕಾಲಲ್ಲಿ ಸೆಳೆತ ಕಾಣಿಸಿತು. ಅಡ್ಡಾಡಲು ಅಡ್ಡಿ ಆಯಿತು. ಸುಸ್ತು ಗಸ್ತು ಹೊಡೆಯಿತು. ಹಳ್ಳಿಯಲ್ಲಿ ವೈದ್ಯರಿಗೆ ತೋರಿಸಿದ. ಗುಣವಾಗಲಿಲ್ಲ. ದೊಡ್ಡ ಆಸ್ಪತ್ರೆಗೆ ಬಂದ. ಆಡ್ಮಿಟ್ ಆದ. ಸುದೀರ್ಘ ತಪಾಸಣೆ ಮಾಡಿದ ನಂತರ ಅವನಲ್ಲಿ ಕಂಡು ಬಂದ ರೋಗ ಲಕ್ಷಣ, ಪ್ರಯೋಗಾಲಯದ ವರದಿ ತಾಳೆ ಹಾಕಿ ಗುಲಿಯನ್ ಬ್ಯಾರಿ (ಜಿಬಿ) ಸಿಂಡ್ರೋಮ್ ಆಗಿರುವುದನ್ನು ಖಚಿತಪಡಿಸಿದರು.

ಇತ್ತೀಚೆಗೆ ಎಲ್ಲೂ ಗುಲಿಯನ್ ಬ್ಯಾರಿ ಸಿಂಡ್ರೋಮ್ ಸುದ್ದಿ. ಪೇಪರಿನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಟಿವಿಯ ಬ್ರೇಕಿಂಗ್ ಸುದ್ದಿಗಳಲ್ಲಿ ಇದರದೇ ಗುಲ್ಲು. ಜಗತ್ತಿನ ಅತಿ ಅಪರೂಪದ ಕಾಯಿಲೆಗಳಲ್ಲಿ ಒಂದು ಎಂದು ಎಣಿಸಿರುವ ಜಿ.ಬಿ.ಸಿಂಡ್ರೋಮ, ಮಾಧ್ಯಮದವರ ಕೈಯಲ್ಲಿ ಸಿಕ್ಕು ಅಬ್ಬರಿಸುತ್ತಿದೆ. ಹಾಗೆ ನೋಡಿದರೆ ಈಗ ಗುಬ್ಬಿಸಿರುವ ಜಿ.ಬಿ.ಸಿಂಡ್ರೋಮ್ ಹೊಸ ಕಾಯಿಲೆಯೇನಲ್ಲ. ಇದನ್ನು ಮೊದಲು ಕ್ರಿ.ಶ.೧೮೫೯ರಲ್ಲಿ ಲಾಂಡ್ರಿ ಜೀನ್ ಬ್ಯಾಪ್ಟಿಸ್ಟ್ ಕ್ವೇವ್ ಎಂಬ ಫ್ರೆಂಚ್ ದೇಶದ ವೈದ್ಯರು ದೇಹದ ಕೆಳಭಾಗದಿಂದ ನಿಧಾನವಾಗಿ ಆವರಿಸಿಕೊಳ್ಳುವ ನರಮಾಂಸ ಖಂಡಗಳ ನಿಷ್ಕ್ರಿಯತೆ ಎಂದು ವಿವರಿಸಿದ್ದರು. ೨೦೧೬ರಲ್ಲಿ ಫ್ರೆಂಚ್ ನರರೋಗ ಶಾಸ್ತ್ರಜ್ಞರಾದ ಜಾರ್ಜ್ ಗುಲಿಯನ್ ಮತ್ತು ಜಾನ್ ಅಲೆಕ್ಸಾಂಡರ್ ಬ್ಯಾರಿಯವರು ಆಂಡ್ರೆ ಸ್ಟ್ರಾ ಎಂಬ ವೈದ್ಯರೊಂದಿಗೆ ಸೇರಿ, ಇಬ್ಬರು ಯೋಧರಲ್ಲಿ ಈ ಕಾಯಿಲೆಯನ್ನು ಗುರುತಿಸಿದ್ದರಿಂದ, ಇದಕ್ಕೆ ಅವರ ಹೆಸರನ್ನೇ ಇಡಲಾಗಿದೆ.

ಜಾಗತಿಕ ಮಟ್ಟದಲ್ಲಿ ಇಲ್ಲಿಯವರೆಗೆ ವರದಿಯಾಗಿರುವ ಪ್ರಕರಣಗಳ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ೨೦೧೯ರಲ್ಲಿ ಒಂದೇ ವರ್ಷ ೧.೫೦ ಲಕ್ಷ ಪ್ರಕರಣಗಳು ದೃಢಪಟ್ಟಿ ರುವ ಮಾಹಿತಿ ಇದೆ. ಜಾಗತಿಕ ಮಟ್ಟದಲ್ಲಿ ವಾರ್ಷಿಕವಾಗಿ ಪ್ರತಿ ಲಕ್ಷ  ಜನರಲ್ಲಿ ಒಬ್ಬರು ಅಥವಾ ಇಬ್ಬರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಒಬ್ಬ ವ್ಯಕ್ತಿ  ಜೀವ ಮಾನದಲ್ಲಿ ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಶೇ.೧ ರಷ್ಟು ಮಾತ್ರ. ಈ ಕಾಯಿಲೆಗೆ ಒಳಗಾದವರಲ್ಲಿ ಶೇ.೨೦ ರಷ್ಟು ರೋಗಿಗಳು ಉಸಿರಾಟಕ್ಕೆ ಸಂಬಂಧಿ ಸಿದ ಸ್ನಾಯುಗಳಲ್ಲಿ ದೌರ್ಬಲ್ಯವನ್ನು ಅನುಭವಿಸುತ್ತಾರೆ. ಅಂಥವರಿಗೆ ಕೃತಕ ಉಸಿರಾಟದ ವ್ಯವಸ್ಥೆಯ ಅಗತ್ಯವಿದೆ. ಅತ್ಯುತ್ತಮ ಚಿಕಿತ್ಸೆ ಲಭ್ಯವಿದ್ದರೂ ಶೇ.೩ ರಿಂದ ೭ ರಷ್ಟು ರೋಗಿಗಳು ಈ ಕಾಯಿಲೆಯಿಂದಾಗಿ ಮೃತಪಡುತ್ತಾರೆ.

ಪ್ರಸ್ತುತ ಸ್ಥಿತಿಗತಿ:  ಪುಣೆಯ ನಾಂದೇಡ ಸೋಂಕಿನ ಕೇಂದ್ರ ಸ್ಥಳವಾಗಿದೆ. ೨೦೨೫ರ ಜನವರಿಯಿಂದ ಪುಣೆ ಮತ್ತು ಸುತ್ತಮುತ್ತ ಸುಮಾರು ೨೧೧ ಜನರಿಗೆ ಮುತ್ತಿಗೆ ಹಾಕಿ ಮೆತ್ತಗೆ ಮಾಡಿರುವ ಜಿ.ಬಿ.ಸಿಂಡ್ರೋಮ್ (ಜಿಬಿಎಸ್) ಈಗಾಗಲೇ ೧೧ ಜನರ ಪ್ರಾಣ ಪಕ್ಷಿಯನ್ನು ಹೆಕ್ಕಿದೆ. ಇಷ್ಟಕ್ಕೆ ಇದರ ದಾಹ ತೀರಿಲ್ಲ. ಈ ಕಾಯಿಲೆ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಆಂಧ್ರಪ್ರದೇಶ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಸುತ್ತಾಡಿ ಈಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಚಿಕ್ಕೋಡಿ ಮೂಲದ ವ್ಯಕ್ತಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಜಿಬಿಎಸ್ ಸೋಂಕಿಗೆ ಬಲಿಯಾಗಿದ್ದಾರೆ.  ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಇಬ್ಬರು ಜಿಬಿಎಸ್‌ಗೆ ಬಲಿಯಾಗುವುದರೊಂದಿಗೆ ದೇಶದಲ್ಲಿನ ಜಿಬಿಎಸ್ ಸಾವಿನ ಸಂಖ್ಯೆ ೨೦ ಕ್ಕೆ ಮುಟ್ಟಿದೆ. ಈ ಕಾಯಿಲೆ ಸಾಂಕ್ರಾಮಿಕವಲ್ಲ. ಹೀಗಾಗಿ ಆತಂಕ ಪಡಬೇಕಾಗಿಲ್ಲ. ಆದರೆ, ಎಚ್ಚರಿಕೆ ಅಗತ್ಯ ಎಂಬುದನ್ನು ಮರೆಯುವಂತಿಲ್ಲ.

೨೦೨೪ರಲ್ಲಿ ಆಂಧ್ರಪ್ರದೇಶದಲ್ಲಿ ಜಿಬಿಎಸ್ ಸೋಂಕಿನ ೨೬೭ ಪ್ರಕರಣ ದಾಖಲಾಗಿದ್ದವು. ವರ್ಷದ ಪೂರ್ವಾಧದಲ್ಲಿ ೧೪೧ ಮತ್ತು ದ್ವಿತೀಯಾರ್ಧದಲ್ಲಿ ೧೨೬ ಪ್ರಕರಣ ವರದಿಯಾಗಿದ್ದವು. ಮಹಾರಾಷ್ಟ್ರದ ಪುಣೆಯ ಸುತ್ತ ಮುತ್ತಲಿನ ಜಲಮೂಲಗಳಲ್ಲಿ ಕೋಲಿಫೋರಂ, ಇ.ಕೋಲೈ, ನೊವೊ ವೈರಸ್ ಮತ್ತು ಕ್ಯಾಂಪಿಲೋ ಬ್ಯಾಕ್ಟರ್ ಜೆಜುನಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಈ ಭಾಗದ ೪೦ ಜಲಮೂಲಗಳಿಂದ ಮಾದರಿ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರಿಶೀಲಿಸಿದಾಗ ನೀರಿನಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾಗಳಿರುವುದು ಕಂಡು ಬಂದಿದೆ. ನಾಂದೇಡ ಭಾಗದ ಈ ಜಲಮೂಲಗಳನ್ನೇ ಸೋಂಕು ಹರಡಿರುವ ಪ್ರದೇಶದ ಜನರು ಹೆಚ್ಚಾಗಿ ಆಶ್ರಯಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಭಾಗದಲ್ಲಿನ ಹೆಚ್ಚಿನ ಸೋಂಕಿತರ ಮಲದ ಮಾದರಿಗಳನ್ನು ಸೂಕ್ಷ್ಮ ದರ್ಶಕದಲ್ಲಿ ಪರಿಶೀಲಿಸಿದಾಗ ಕ್ಯಾಂಪಿಲೋ ಬ್ಯಾಕ್ಟರ್ ಜೆಜುನಿ ಬ್ಯಾಕ್ಟೀರಿಯಾ ಮತ್ತು ನ್ಯೂರೊ ವೈರಸ್‌ಗಳೇ ಕಾರಣ ಎಂದು ಸಧ್ಯ ಪರಿಗಣಿಸಲಾಗಿದೆ.

ರೋಗಕಾರಕ:  ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ ಎಂಬ ರೋಗಕಾರಕ ಬ್ಯಾಕ್ಟೀರಿಯಾದಿಂದ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಈ ಬ್ಯಾಕ್ಟೀರಿಯಾ ಕೋಳಿಗಳಲ್ಲಿ ಕಂಡು ಬರುತ್ತದೆ. ಝೀಕಾ, ಡೆಂಗ್ಯೂ ಸೇರಿದಂತೆ ಇತರೇ ಸೋಂಕುಕಾರಕ ವೈರಸ್‌ಗಳೊಂದಿಗೆ ಈ ಬ್ಯಾಕ್ಟೀರಿಯಾವೂ ಸೇರಿಕೊಂಡಿರುತ್ತದೆ. ಕಲುಷಿತ ನೀರಿನಲ್ಲಿ ತಯಾರಿಸಿದ ಆಹಾರ, ತಿಂಡಿ ತಿನ್ನುವುದು, ಕೋಳಿ ಮಾಂಸ ಅರೆಬೆರೆ ಬೇಯಿಸಿ ತಿನ್ನುವುದು ಕೂಡ ಸೋಂಕಿಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.

ರೋಗ ಲಕ್ಷಣಗಳು: ವ್ಯಕ್ತಿಗೆ ಸೋಂಕು ತಗುಲಿದ ನಂತರ ೭ ರಿಂದ ೧೪ ದಿನಗಳಲ್ಲಿ ರೋಗದ ಲಕ್ಷಣಗಳು   ಕಂಡುಬರುತ್ತವೆ. ಇದಕ್ಕೆ ‘ರೋಗದ ಅದಿಶಯನ ಕಾಲ’ವೆನ್ನುವರು. ಇದು ಆಹಾರ ಮತ್ತು ನೀರಿನಿಂದ ಬರುವ ಕಾಯಿಲೆಯಾಗಿದ್ದು, ಭೇದಿ ಇದರ ಪ್ರಮುಖ ಲಕ್ಷಣವಾಗಿದೆ. ಸ್ನಾಯು ದೌರ್ಬಲ್ಯ, ಕಾಲು ಮತ್ತು ಕೈಗಳು ಸ್ಪರ್ಶ ಜ್ಞಾನ ಕಳೆದುಕೊಳ್ಳುವುದು, ನುಂಗುವುದಕ್ಕೆ ತೊಂದರೆಯಾಗುವುದು, ಉಸಿರಾಟ ಕಷ್ಟವಾಗುವುದು ಇದರ ಮುಖ್ಯ ಲಕ್ಷಣಗಳು. ಕೈಕಾಲು, ಪಾದ ಜೋಮು ಹಿಡಿಯುವುದು, ಮರಗಟ್ಟುವುದು. ಒಮ್ಮೊಮ್ಮೆ ಕೈಕಾಲು ಪಾದಗಳಲ್ಲಿ ಚುಚ್ಚಿದಂತಾಗುವುದು. ನಿಶ್ಯಕ್ತಿ ಕಾಣಿಸಿಕೊಳ್ಳುವುದು. ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳು ಗೋಚರಿಸುವುದು. ಹೃದಯ ಬಡಿತ ಮತ್ತು ರಕ್ತದೊತ್ತಡದಲ್ಲಿ ಏರುಪೇರಾಗುವುದು ಕೂಡ ಇದರ ಲಕ್ಷಣಗಳಾಗಿವೆ.

ಈ ಕಾಯಿಲೆಗೆ ವಯಸ್ಸಿನ ನಿರ್ಬಂಧವಿಲ್ಲ. ಎಲ್ಲ ವಯಸ್ಸಿನವರಿಗೂ ಈ ಕಾಯಿಲೆ ಕಾಡಬಹುದಾದರೂ, ವಯಸ್ಸು ಹೆಚ್ಚಾದಂತೆ ರೋಗಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಮಹಿಳೆಯರಿಗೆ ಹೋಲಿಸಿದರೆ, ಪುರುಷರಲ್ಲಿ ಜಿಬಿಎಸ್ ಹೆಚ್ಚು ಕಂಡು ಬರುತ್ತದೆ. ನೈರ್ಮಲ್ಯದ ಕೊರತೆಯಿದ್ದಲ್ಲಿ ಇದರ ಹಾವಳಿ ಹೆಚ್ಚು. ಬಡ, ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಈ ಕಾಯಿಲೆ ಉಪಟಳ ಜಾಸ್ತಿ. ದೇಹದ ನರಮಂಡಲವನ್ನು ದುರ್ಬಲಗೊಳಿಸಿ, ಪಾರ್ಶ್ವವಾಯು ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗುವ ಈ ಕಾಯಿಲೆ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ತಜ್ಞರು ಹೇಳುತ್ತಾರೆ.

ಉಪಚಾರ: ಇಲ್ಲಿಯವರೆಗೆ ಈ ರೋಗಕ್ಕೆ ನಿಖರವಾದ ಔಷಧ ಸಿಕ್ಕಿಲ್ಲ. ಆದರೆ ರೋಗದ ಲಕ್ಷಣಗಳಿಗೆ ಅನುಗುಣವಾಗಿ ನೀಡುವ ಚಿಕಿತ್ಸೆಗಳು ರೋಗ ವಾಸಿ ಯಾಗಲು ಬಹಳ ಸಹಾಯ ಮಾಡುತ್ತವೆ ಮತ್ತು ರೋಗದ ಅವಧಿಯನ್ನು ಕಡಿಮೆ ಮಾಡುತ್ತವೆ. ಸೂಕ್ತ ಚಿಕಿತ್ಸೆ, ಸಕಾಲದಲ್ಲಿ ದೊರೆತರೆ ಕೆಲ ಕಾಲದಲ್ಲಿ ಗುಣವಾಗ ಬಹುದು. ರಕ್ತ ಅಥವಾ ಇಂಟ್ರಾವೆನಸ್ ಇಮ್ಯುನೊಗ್ಲಾಬಿಲಿನ್‌ನಿಂದ ಪ್ರತಿಕಾಯಗಳನ್ನು ತೆಗೆದು ಹಾಕಲು ಪ್ಲಾಸ್ಮಾ ವಿನಿಮಯ ಮಾಡಬಹುದು. ಅನಾರೋಗ್ಯದ ತೀವ್ರ ಹಂತದ ನಂತರ ಸ್ನಾಯು ದೌರ್ಬಲ್ಯವು ಮುಂದುವರಿದರೆ ರೋಗಿಗಳ ಸ್ನಾಯುಗಳನ್ನು ಬಲಪಡಿಸಲು ಮತ್ತು ಚಲನೆಯನ್ನು ಮೊದಲಿನಂತೆ ಮಾಡಲು ಪುನರ್ವಸತಿ ಸೇವೆಗಳ ಅಗತ್ಯವಿರುತ್ತದೆ.

ಮುಂಜಾಗ್ರತೆ ಕ್ರಮ:  ಈ ರೋಗವನ್ನು ತಡೆಯಲು ನಿರ್ದಿಷ್ಟ ಮುಂಜಾಗ್ರತಾ ಕ್ರಮಗಳು ಇಲ್ಲದೇ ಇದ್ದರೂ, ಪುಣೆ ನಗರದ ಆರೋಗ್ಯ ವಿಭಾಗವು ಕೆಲವು ಸಲಹೆ ಸೂಚನೆಗಳನ್ನು ಜನರಿಗೆ ನೀಡಿದೆ. ಕಲುಷಿತ ನೀರಿನಲ್ಲಿ ಸ್ನಾನ ಮಾಡಬಾರದು. ಕಲುಷಿತ ನೀರು ಕುಡಿಯಬಾರದು. ಅಂತಹ ನೀರಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಬಿಸಿ ಬಿಸಿ ಆಹಾರ ತಿನ್ನಬೇಕು ಮತ್ತು ಕುದಿಸಿ, ಆರಿಸಿ, ಸೋಸಿದ ನೀರನ್ನು ಕುಡಿಯಬೇಕು.  ಸರಿಯಾಗಿ ಬೇಯಿಸದೇ ಇರುವ ಚಿಕನ್, ಮಟನ್ ತಿನ್ನಬಾರದು. ತಯಾರಿಸಿ ಹೆಚ್ಚು ಹೊತ್ತಾದ ನಂತರ ತಿನ್ನಬಾರದು. ಇದು ಜಗತ್ತಿನ ಅತಿ ಅಪರೂಪದ ಕಾಯಿಲೆ ಆಗಿದ್ದು, ತೀರಾ ಅಪಾಯಕಾರಿ ಕಾಯಿಲೆಯೇನಲ್ಲ. ಆದರೆ, ಈ ರೋಗಕ್ಕೆ ನಿಶ್ಚಿತ ಔಷಧ ಇಲ್ಲದಿರುವುದರಿಂದ ಜನ ಆದಷ್ಟು ಜಾಗೃತಿಯಿಂದಿರುವುದು ಒಳ್ಳೆಯದು.

– ಡಾ.ಕರವೀರಪ್ರಭು ಕ್ಯಾಲಕೊಂಡ
ವಿಶ್ರಾಂತ ಜಿ ಶಸ್ತ್ರ ಚಿಕಿತ್ಸಕರು
ಮೊ :  9448036207    

Related Posts

Leave a Reply

Your email address will not be published. Required fields are marked *