Thursday, January 22, 2026
Menu

ಗ್ಯಾರಂಟಿ ಯೋಜನೆಗಳಿಂದ ಶೇ.89ರಷ್ಟು ಫಲಾನುಭವಿ ಕೌಟುಂಬಿಕ ಸಂಬಂಧಗಳಲ್ಲಿ ಸುಧಾರಣೆ

governer

ಬೆಂಗಳೂರು:ರಾಜ್ಯದಲ್ಲಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಶೇ.89 ರಷ್ಟು ಫಲಾನುಭವಿಗಳ ಕೌಟುಂಬಿಕ ಸಂಬಂಧಗಳಲ್ಲಿ ಸುಧಾರಣೆ ಕಂಡಿದೆ ಎಂದು ರಾಜ್ಯ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಿಸಿದೆ‌.

ರಾಜ್ಯಪಾಲರ ಭಾಷಣದಲ್ಲಿ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ‌ ಸೇರಿದಂತೆ ಸರ್ಕಾರದ ಪ್ರಮುಖ ಸಾಧನೆಗಳನ್ನು ಉಲ್ಲೇಖಿಸಲಾಗಿದೆ. 46 ಪುಟಗಳ 122 ಪ್ಯಾರಾಗಳ ಭಾಷಣದಲ್ಲಿ ಕೆಂದ್ರ ಸರ್ಕಾರದ ವಿರುದ್ಧ ಕಟು ಟೀಕೆಯ ಜೊತೆಗೆ ರಾಜ್ಯ ಸರ್ಕಾರಗಳ ಯೋಜನೆ, ಸಾಧನೆಗಳ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.

ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿ ಎಂಬ ಐದು ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಇವುಗಳಿಗೆ ಇದುವರೆಗೆ 1,16,706 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ. ಈ ಯೋಜನೆಗಳ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಲು ಇಪಿಐ ಮೂಲಕ ಕಿಂಗ್ಸ್ ಕಾಲೇಜ್ ಲಂಡನ್, ಜಸ್ಟ್‌ ಜಾಬ್ಸ್ ನೆಟ್‌ವರ್ಕ್, ಎಕ್ಸ್‌ಕೆಡಿಆರ್ ಫೋರಮ್, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಇಂಡಸ್ ಆಕ್ಷನ್ ಹಾಗೂ ಲೋಕನೀತಿ/ಸಿಎಸ್‌ಡಿಎಸ್ ನಂತಹ ಪ್ರತಿಷ್ಠಿತ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.

ಈ ಸಂಸ್ಥೆಗಳು ವ್ಯಾಪಕವಾಗಿ ನಡೆಸಿರುವ ಅಧ್ಯಯನಗಳು ರಾಜ್ಯದಲ್ಲಿ ಆಹಾರ ಭದ್ರತೆ, ಬಡತನ ನಿರ್ಮೂಲನೆ ಮತ್ತು ಮಹಿಳಾ ಸಬಲೀಕರಣದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿರುವುದನ್ನು ದೃಢಪಡಿಸಿವೆ. ಜನರು ಗ್ಯಾರಂಟಿ ಯೋಜನೆಗಳ ಮೂಲಕ ಪಡೆಯುವ ಹಣವನ್ನು ಪೌಷ್ಠಿಕ ಆಹಾರ, ಔಷಧಗಳು ಮತ್ತು ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ ಎಂದು ವಿವರಿಸಲಾಗಿದೆ.

ನಗದು ವರ್ಗಾವಣೆ:

ಬ್ಯಾಂಕ್‌ ಖಾತೆಗಳಿಗೆ ಸರ್ಕಾರದಿಂದ ನಗದು ವರ್ಗಾವಣೆ ಪಡೆದ ಕುಟುಂಬಗಳ ಪ್ರಮಾಣ 2022 ರಲ್ಲಿ ಶೇ.9.3 ರಷ್ಟಿದ್ದು 2024ರ ವೇಳೆಗೆ ಅದು ಶೇ. 72.7ಕ್ಕೆ ಏರಿಕೆಯಾಗಿದೆ. ಇದು ಗ್ಯಾರಂಟಿ ಯೋಜನೆಗಳ ಸಾರ್ಥಕತೆಗೆ ಸಾಕ್ಷಿಯಾಗಿದೆ. ‘ಶಕ್ತಿ’ ಯೋಜನೆಯು ಮಹಿಳೆಯರ ಬದುಕಿನಲ್ಲಿ ಅಪಾರ ಚೈತನ್ಯ ತಂದಿದೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಅಧ್ಯಯನದಂತೆ, ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶಗಳೂ ಸೇರಿದಂತೆ ಅನೇಕ ಮಾರ್ಗಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಾಗಿದ್ದು, ಇದು ನಗರದ ಚಲನಶೀಲತೆಯಲ್ಲಿ ಆದ ಪ್ರಮುಖ ಬದಲಾವಣೆಯಾಗಿದೆ. ಈ ಯೋಜನೆಯಿಂದ ಪ್ರತಿ ಮಹಿಳೆಗೆ ಮಾಸಿಕ ಸರಾಸರಿ ರೂ.1,500 ರಿಂದ 2,000 ಉಳಿತಾಯವಾಗುತ್ತಿದೆ. ರಾಜ್ಯಾದ್ಯಂತ ಶೇ.19 ರಷ್ಟು ಮತ್ತು ಬೆಂಗಳೂರಿನಲ್ಲಿ ಶೇ.34ರಷ್ಟು ಮಹಿಳೆಯರು ಉತ್ತಮ ಸಂಬಳದ ಕೆಲಸಗಳನ್ನು ಪಡೆಯಲು ಈ ಯೋಜನೆ ನೆರವಾಗಿದೆ. ಶೇ.83 ರಷ್ಟು ಜನರು ಉತ್ತಮ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು‌ ವಿವರಿಸಲಾಗಿದೆ.

ಗುಣಮಟ್ಟದ ಆಹಾರ:

ʼಹಸಿವು ಮುಕ್ತ ಕರ್ನಾಟಕʼದ ಕನಸನ್ನು ನನಸು ಮಾಡುತ್ತಿರುವ ‘ಅನ್ನಭಾಗ್ಯ’ ಯೋಜನೆಯಿಂದಾಗಿ ಶೇ.83 ರಷ್ಟು ಮಹಿಳೆಯರು ಗ್ಯಾರಂಟಿ ಯೋಜನೆಗಳಿಂದ ಆದ ಉಳಿತಾಯದ ಹಣದಲ್ಲಿ ಬೇಳೆಕಾಳು, ತರಕಾರಿ, ಹಣ್ಣು, ಮೊಟ್ಟೆ ಮತ್ತು ಮಾಂಸ ಮುಂತಾದ ಗುಣಮಟ್ಟದ ಆಹಾರ ಪದಾರ್ಥಗಳನ್ನು ಖರೀದಿಸುವ ಮೂಲಕ ಕುಟುಂಬದ ಪೌಷ್ಠಿಕತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ʼಗೃಹಲಕ್ಷ್ಮಿʼ ಯೋಜನೆಯಿಂದ ಶೇ.80 ರಷ್ಟು ಮಹಿಳೆಯರು, ತಾವು ಹೆಚ್ಚು ಆರ್ಥಿಕವಾಗಿ ಸ್ವತಂತ್ರರಾಗಿರುವುದಾಗಿ ಹಾಗೂ ಕುಟುಂಬದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವುದಾಗಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಶೇ.37 ರಷ್ಟು ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ಹಣವನ್ನು ಕುಟುಂಬದ ಹಳೆಯ ಸಾಲ ಮರುಪಾವತಿಸಲು ಬಳಸುವ ಮೂಲಕ ಸಾಲ ಮುಕ್ತರಾಗುತ್ತಿದ್ದಾರೆ ಎಂದು ಪ್ರಸ್ತಾಪಿಸಲಾಗಿದೆ.

ಸಾಮಾಜಿಕ ಪರಿವರ್ತನೆ:

ಸರ್ಕಾರವು ಜಾರಿಗೆ ತಂದಿರುವ ಮಹಿಳಾ ಸಬಲೀಕರಣದ ಯೋಜನೆಗಳಿಂದ ಕರ್ನಾಟಕವು ಹೊಸ ಮಾದರಿಯನ್ನು ಪ್ರಾರಂಭಿಸಿದೆ. ಈ ಯೋಜನೆಗಳಿಂದ ಕೇವಲ ಆರ್ಥಿಕ ನೆರವು ಮಾತ್ರವಲ್ಲದೆ, ಸಾಮಾಜಿಕ ಪರಿವರ್ತನೆಯೂ ಕೂಡ ಸಾಧ್ಯವಾಗಿದೆ. ಯುವ ಜನತೆಗೆ ಆಸರೆಯಾಗಿರುವ ‘ಯುವ ನಿಧಿ’ ಯೋಜನೆಯ ಫಲವಾಗಿ ಶೇ.28ರಷ್ಟು ಯುವಕರು ಕೌಶಲ್ಯ ಕಲಿಕೆಯಲ್ಲಿ ತೊಡಗಿಸಿಕೊಂಡರೆ, ಶೇ.20ರಷ್ಟು ಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಪೂರಕವಾಗಿ ‘ಗೃಹಲಕ್ಷ್ಮಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ’ಯನ್ನು ಸ್ಥಾಪಿಸಲಾಗಿದೆ. ಅಪಾಯ ಮತ್ತು ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ಒದಗಿಸುವ ಉದ್ದೇಶದಿಂದ 2025-26ನೇ ಸಾಲಿನಲ್ಲಿ ‘ಅಕ್ಕಪಡೆ’ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ನೆರೆ ಪರಿಹಾರ ರೈತರ ಖಾತೆಗೆ:

ಈ ವರ್ಷ ಉಂಟಾದ ಅತಿವೃಷ್ಟಿ ಮತ್ತು ಪ್ರವಾಹದಿಂದ 14.21 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಗೊಳಗಾಗಿತ್ತು. ರಾಜ್ಯದ ಪಾಲಿನ ಎಸ್‌ಡಿಆರ್‌ಎಫ್ ಅನುದಾನದ ಜೊತೆಗೆ ಹೆಚ್ಚುವರಿಯಾಗಿ ರೂ.1032 ಕೋಟಿ ಸೇರಿಸಿ ರೂ.2,250 ಕೋಟಿ ಪರಿಹಾರವನ್ನು 14,21,615 ಸಂತ್ರಸ್ತ ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ. ಕೇಂದ್ರ ಸರ್ಕಾರವು ನಿಗದಿ ಪಡಿಸಿರುವ ಮಾನದಂಡಗಳಿಗಿಂತ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರಿಗೆ 8500 ರೂ.ಗಳನ್ನು ರಾಜ್ಯ ಸರ್ಕಾರವು ನೀಡಿದೆ. ಪ್ರಕೃತಿ ವಿಕೋಪದಿಂದ ಮನೆ, ಜೀವಹಾನಿ ಮತ್ತು ಜಾನುವಾರು ಹಾನಿ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ರೂ.46.5 ಕೋಟಿ ಪರಿಹಾರವನ್ನು ವಿತರಿಸಲಾಗಿದೆ ಎಂದು ಸರ್ಕಾರ ವಿವರಿಸಿದೆ.

966.93 ಕೋಟಿ ಕ್ರಿಯಾಯೋಜನೆ:

ಎಸ್ ಡಿಎಂಎಫ್ ಅಡಿಯಲ್ಲಿ ರೂ.235.31 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದುವರೆದು, 2025-26ನೇ ಸಾಲಿನಲ್ಲಿ ಭೂಕುಸಿತ, ಪ್ರವಾಹ ಹಾಗೂ ಬರ ಉಪಶಮನಕ್ಕಾಗಿ ಒಟ್ಟು ರೂ.966.93 ಕೋಟಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ರಾಜ್ಯದಲ್ಲಿ ಉಂಟಾದ ಬೆಳೆಹಾನಿ ಪರಿಹಾರಕ್ಕಾಗಿ ರೂ.615 ಕೋಟಿ ಹಾಗೂ ಮೂಲಭೂತ ಸೌಕರ್ಯಗಳ ಪುನರ್‌ ಸ್ಥಾಪನೆಗಾಗಿ ರೂ.1522 ಕೋಟಿಗಳ ಮೆಮೊರಾಂಡಮ್​ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈವರೆಗೆ ಅನುದಾನ ಬಿಡುಗಡೆಯಾಗಿರುವುದಿಲ್ಲ ಎಂದು ಆಕ್ಷೇಪಿಸಿದೆ.

ರೈತರಿಗೆ ನೀಡುವ ಬಿತ್ತನೆ ಬೀಜದಿಂದ ಹಿಡಿದು ಮಾರುಕಟ್ಟೆಯವರೆಗಿನ ಸೇವೆಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ಒದಗಿಸಲು ಮಂಡ್ಯ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಮೈಸೂರು ಮತ್ತು ಬಾಗಲಕೋಟೆ, ಈ ಜಿಲ್ಲೆಗಳಲ್ಲಿ “ತೋಟಗಾರಿಕೆ ಕಿಸಾನ್‌ ಮಾಲ್”ಗಳನ್ನು ಸ್ಥಾಪಿಸಲಾಗಿದೆ. ಬೆಳೆಗಾರರ ಅನುಕೂಲಕ್ಕಾಗಿ 14,000 ಮೆಟ್ರಿಕ್ ಟನ್ ಸಾಮರ್ಥ್ಯದ 6 ಶೀತಲ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ತೋಟಗಾರಿಕೆ ಶಿಕ್ಷಣ ಮತ್ತು ಸಂಶೋಧನೆಗೆ ಒತ್ತು ನೀಡಲು ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ನೂತನ ತೋಟಗಾರಿಕೆ ಮಹಾವಿದ್ಯಾಲಯವನ್ನು ಸ್ಥಾಪಿಸಲು ರೂ.40 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಕ್ಷೀರಧಾರೆ ಯೋಜನೆ:

ರಾಜ್ಯದ 9.07 ಲಕ್ಷ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡುವ ಕ್ಷೀರಧಾರೆ ಯೋಜನೆಯಡಿಯಲ್ಲಿ ಲೀಟರಿಗೆ 5 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಹಿಂದಿನ ಸರ್ಕಾರ ಬಾಕಿ ಉಳಿಸಿದ್ದ ರೂ.600 ಕೋಟಿ ಸೇರಿ ಒಟ್ಟಾರೆ ರೂ.4,130 ಕೋಟಿಗಳ ಪ್ರೋತ್ಸಾಹಧನವನ್ನು ಸರ್ಕಾರ ನೇರವಾಗಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ. ‘ಅನುಗ್ರಹ’ ಯೋಜನೆಯಡಿ ಆಕಸ್ಮಿಕವಾಗಿ ಮರಣ ಹೊಂದಿದ ಜಾನುವಾರು ಮತ್ತು ಕುರಿ/ಮೇಕೆಗಳ ಮಾಲೀಕರಿಗೆ ನಮ್ಮ ಸರ್ಕಾರ ರಚನೆಯಾದಾಗಿನಿಂದ ರೂ.95.41 ಕೋಟಿ ಪರಿಹಾರ ಧನ ವಿತರಿಸಲಾಗಿದೆ. ಪಶು ವೈದ್ಯಕೀಯ ಸೇವೆಗಳನ್ನು ವಿಸ್ತರಿಸಲು ಮೊದಲ ಹಂತದಲ್ಲಿ 20 ತಾಲೂಕುಗಳಲ್ಲಿ ಪಾಲಿ ಕ್ಲಿನಿಕ್‌ಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಆರೋಗ್ಯ ರಕ್ಷಣೆಗೆ ಒತ್ತು:

ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜಾನುವಾರುಗಳ ಆರೋಗ್ಯ ರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದ್ದು, ಕಾಲು ಬಾಯಿ ಜ್ವರದ ವಿರುದ್ಧ ಒಟ್ಟು 379.63 ಲಕ್ಷ ದನಗಳಿಗೆ ಹಾಗೂ ಈ ವರ್ಷ 182.71 ಲಕ್ಷ ದನಗಳಿಗೆ ಲಸಿಕೆ ಹಾಕುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನ ಗಳಿಸಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಹಾಗೂ ಬಾಡಿಗೆ ಕಟ್ಟಡದಲ್ಲಿರುವ 200 ಪಶುವೈದ್ಯ ಸಂಸ್ಥೆಗಳಿಗೆ ರೂ.100 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ, 381 ಗುತ್ತಿಗೆ ಪಶುವೈದ್ಯರನ್ನು ನೇಮಕ ಮಾಡಿಕೊಳ್ಳುವ ಮೂಲಕ ವೈದ್ಯರ ಕೊರತೆಯನ್ನು ನೀಗಿಸಲಾಗಿದೆ ಎಂದು ಪ್ರಸ್ತಾಪಿಸಲಾಗಿದೆ.

ಬೆಂಬಲ ಬೆಲೆಯಡಿ‌ ಪ್ರೋತ್ಸಾಹಧನ:

ತೊಗರಿ ಖರೀದಿ ಕೇಂದ್ರಗಳನ್ನು ಜನವರಿಯ ಬದಲಾಗಿ ಡಿಸೆಂಬರಿನಲ್ಲಿಯೇ ತೆರೆಯಬೇಕೆಂದು ಒತ್ತಡ ಬಂದ ಕಾರಣ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಈಗಾಗಲೇ 33,729 ಕ್ವಿಂಟಾಲ್‌ ತೊಗರಿಯನ್ನು ಖರೀದಿಸಲಾಗಿದೆ ಎಂದು ಉಲ್ಲೇಖಿಸಿದೆ.

ರಾಜ್ಯದಲ್ಲಿ ಈ ಬಾರಿ 54.31 ಲಕ್ಷ ಮೆಟ್ರಿಕ್‌ ಟನ್‌ ಮುಸುಕಿನ ಜೋಳ ಬೆಳೆಯಲಾಗಿದೆ. ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಪ್ರತಿ ಕ್ವಿಂಟಾಲಿಗೆ 2400 ರೂ.ಗಳನ್ನು ನಿಗದಿ ಮಾಡಿದೆ. ಆದರೆ ಪಡಿತರ ವಿತರಣೆಯಲ್ಲಿ ಜನರು ಬಳಸುವಂತಿದ್ದರೆ ಮಾತ್ರ ಖರೀದಿಸಬೇಕೆಂದು ನಿಬಂಧನೆ ವಿಧಿಸಿದೆ. ಈ ವರ್ಷ ಎಂಎಸ್‌ಪಿಗಿಂತ ಬೆಲೆ ಕಡಿಮೆಯಾಗಿದೆ. ಮುಸುಕಿನ ಜೋಳದ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರ ನೆರವಿಗೆ ಧಾವಿಸಿದ ರಾಜ್ಯ ಸರ್ಕಾರವು ಎಥೆನಾಲ್‌ ಉತ್ಪಾದಕರು, ಪೌಲ್ಟ್ರಿ ನಡೆಸುವವರು, ಕೆಎಂಎಫ್‌ ಮುಂತಾದವರ ಜೊತೆಯಲ್ಲಿ ಹಲವು ಸಭೆಗಳನ್ನು ನಡೆಸಲಾಯಿತು. ಅವರುಗಳು ಖರೀದಿ ಮಾಡಿದರೂ ಸಹ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ಹೋದಾಗ ಸರ್ಕಾರವೇ 100 ಕೋಟಿ ರೂಗಳಿಗೂ ಹೆಚ್ಚಿನ ಹಣವನ್ನು ಒದಗಿಸಿ ಪಿಡಿಪಿಎಸ್‌ ಯೋಜನೆಯಲ್ಲಿ 40 ಲಕ್ಷ ಕ್ವಿಂಟಾಲ್‌ ಮೆಕ್ಕೆಜೋಳ ಖರೀದಿಸಲು ಪ್ರಾರಂಭಿಸಿದೆ ಎಂದು ಪ್ರಸ್ತಾಪಿಸಲಾಗಿದೆ.

ಮಹತ್ವಾಕಾಂಕ್ಷಿ ಯೋಜನೆ:

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯ ಸಮರ್ಥ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ರಾಜ್ಯ ಕೃಷಿ ಇಲಾಖೆಗೆ ದ್ವಿತೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸರ್ಕಾರವು ಕೆಸಿ ವ್ಯಾಲಿ ಮತ್ತು ಹೆಚ್‌ ಎನ್‌ ವ್ಯಾಲಿಗಳಲ್ಲಿ ಲಭಿಸುವ ನೀರನ್ನು ಸಂಸ್ಕರಿಸಿ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಇನ್ನಷ್ಟು ವಿಸ್ತರಿಸುವುದರ ಜೊತೆಗೆ ವೃಷಭಾವತಿ ವ್ಯಾಲಿಯ ನೀರನ್ನು ಸಂಸ್ಕರಿಸಿ ಕೆರೆಗಳಿಗೆ ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಮೊದಲನೇ ಹಂತದಲ್ಲಿ ರೂ.1081 ಕೋಟಿ ವೆಚ್ಚದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳ 70 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ ಎಂದಿದೆ.

80,997 ಕೋಟಿ ವಿದೇಶಿ ಹೂಡಿಕೆ:

ರಾಜ್ಯದ ಸಮಗ್ರ ಅಭಿವೃದ್ಧಿಗೆ ಮತ್ತು ʼಬಿಯಾಂಡ್‌ ಬೆಂಗಳೂರು ಅಭಿವೃದ್ಧಿ ಪರಿಕಲ್ಪನೆಗೆ ‘ಕರ್ನಾಟಕ ಕೈಗಾರಿಕಾ ನೀತಿ 2025-30’ ಅನ್ನು ಜಾರಿಗೆ ತಂದಿದೆ. ಈ ನೀತಿಯಿಂದಾಗಿ ಅಂದಾಜು 20 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. 2025-26ನೇ ಸಾಲಿನ ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅಂತ್ಯದವರೆಗೆ ರೂ.80,997 ಕೋಟಿ ವಿದೇಶಿ ಹೂಡಿಕೆಯನ್ನು ಆಕರ್ಷಿಸುವುದರೊಂದಿಗೆ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ರಫ್ತು ವಲಯದಲ್ಲಿ ರಾಜ್ಯವು ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದು, 99,309 ಮಿಲಿಯನ್ ಯು.ಎಸ್. ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಿದೆ. ಇದರ ಜೊತೆಗೆ ಐಟಿ ವಲಯದಲ್ಲೂ ರಾಜ್ಯವು ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ಉಲ್ಲೇಖಿಸಲಾಗಿದೆ.

ಸಣ್ಣ ಮತ್ತು ಮಧ್ಯಮ ಉದ್ಯಮ:

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯಕ್ಕೆ ಸರ್ಕಾರವು ಆದ್ಯತೆ ನೀಡಿದೆ. 2025ರ ಡಿಸೆಂಬರ್ ಅಂತ್ಯಕ್ಕೆ ಉದ್ಯಮ್‌ ತಂತ್ರಾಂಶದಲ್ಲಿ 25 ಲಕ್ಷ ಎಂ.ಎಸ್‌.ಎಂ.ಇಗಳು ನೋಂದಣಿಯಾಗಿದ್ದು,235.2 ಲಕ್ಷ ಉದ್ಯೋಗಗಳು ಸೃಜನೆಯಾಗಿವೆ. ಜವಳಿ ವಲಯದಲ್ಲಿ, ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿಯನ್ನು ಜಾರಿಗೆ ತರಲಾಗಿದೆ. ನೇಕಾರರ ವಿದ್ಯುತ್ ಸಹಾಯಧನ, ಬಡ್ಡಿ ಸಹಾಯಧನ, ಮಿತವ್ಯಯ ನಿಧಿ ಯೋಜನೆ ಹಾಗೂ ನೇಕಾರರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ‘ಕಲಿಕೆ ಜೊತೆ ಕೌಶಲ್ಯ’ ಕಾರ್ಯಕ್ರಮದಡಿ ಏಳು ವಿಶ್ವವಿದ್ಯಾನಿಲಯಗಳ 37,400 ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲಾಗಿದೆ ಎಂದು ಪ್ರಸ್ತಾಪಿಸಲಾಗಿದೆ.

ಸಂಚಾರ ದಟ್ಟಣೆ ಕಡಿಮೆ:

ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಲು ಸರ್ಕಾರವು ಬದ್ಧವಾಗಿದೆ. ಬೆಂಗಳೂರು ಮೆಟ್ರೋ ಹಂತ-3 ರ 44.65 ಕಿ.ಮೀ. ಯೋಜನೆಗೆ ಅನುಮೋದನೆ ದೊರೆತಿದ್ದು, ಇದರ ಅಂದಾಜು ವೆಚ್ಚ ರೂ.15,611 ಕೋಟಿಗಳಾಗಿದೆ. ಈ ಯೋಜನೆಯ ಭಾಗವಾಗಿ ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಕಾರಿಡಾರ್‌ನಲ್ಲಿ ರೂ.9700 ಕೋಟಿ ವೆಚ್ಚದ ದೇಶದ ಮೊಟ್ಟ ಮೊದಲ ರಸ್ತೆ ಮತ್ತು ಮೆಟ್ರೋ ಒಳಗೊಂಡಿರುವ ಡಬಲ್ ಡೆಕ್ಕರ್ ಯೋಜನೆಗೆ ರಾಜ್ಯ ಸರ್ಕಾರವು ಅನುಮೋದನೆ ನೀಡಿದೆ. ಸರ್ಜಾಪುರದಿಂದ ಹೆಬ್ಬಾಳದವರೆಗಿನ 36.59 ಕಿ.ಮೀ. ಉದ್ದದ ಮೆಟ್ರೋ ಹಂತ-3ಎ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್ ) ಅನುಮೋದಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಪ್ರಸ್ತಾಪಿಸಿದೆ.

1.7 ಲಕ್ಷ ಕೋಟಿ ಕಾಮಗಾರಿ:

ಗ್ರೇಟರ್‌ ಬೆಂಗಳೂರಿನ ವಿಸ್ತೃತ ಅಭಿವೃದ್ಧಿಗಾಗಿ ಮೆಟ್ರೋ, ಬ್ಯುಸಿನೆಸ್‌ ಕಾರಿಡಾರ್‌, ವೈಟ್‌ ಟಾಪಿಂಗ್‌, ಸೇತುವೆ, ಸುರಂಗ ರಸ್ತೆ, ಡಾಂಬರೀಕರಣ, ಬಸ್‌ ನಿಲ್ದಾಣ, ಪಾರ್ಕುಗಳ ಅಭಿವೃದ್ಧಿ, ನೀರು ಸರಬರಾಜು, ಒಳಚರಂಡಿ ಯೋಜನೆ, ತ್ಯಾಜ್ಯ ಶುದ್ಧೀಕರಣ ಘಟಕಗಳು, ಘನತ್ಯಾಜ್ಯ ವಿಲೇವಾರಿ, ಕೆರೆ ತುಂಬಿಸುವ ಯೋಜನೆಗಳು, ಐಟಿ ಮತ್ತು ಇನ್ನೋವೇಟಿವ್‌ ಸಿಟಿ ನಿರ್ಮಾಣ, ಡಬಲ್‌ ಡೆಕರ್‌ ರಸ್ತೆ, ಎಲಿವೇಟೆಡ್‌ ಕಾರಿಡಾರುಗಳು, ರಾಜಕಾಲುವೆ ಮತ್ತು ಇತರೆ ಚರಂಡಿಗಳ ನಿರ್ಮಾಣ, ಸಬರ್ಬನ್‌ ರೈಲ್ವೆ ಮುಂತಾದವುಗಳ ನಿರ್ಮಾಣ ಮುಂತಾದವುಗಳಿಗಾಗಿ 1.7 ಲಕ್ಷ ಕೋಟಿ ರೂ.ಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಪೂರ್ವ ಪ್ರಾಥಮಿಕ:

2025-26 ರಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 8,000 ಕೋಟಿ ರೂ.ಗಳನ್ನು ಒದಗಿಸಿ ಕಾರ್ಯ ಕ್ರಮಗಳ ಅನುಷ್ಠಾನ ಪ್ರಾರಂಭಿಸಲಾಗಿದೆ. ದೇಶದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯದ 259 ಅಂಗನವಾಡಿ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಎಲ್ ಕೆಜಿ ಮತ್ತು ಯು.ಕೆ.ಜಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲಾಗಿದೆ. ಮಕ್ಕಳ ರಕ್ಷಣೆಯ ವಿಷಯದಲ್ಲಿ ಕಠಿಣ ನಿಲುವು ತಳೆದಿರುವ ಸರ್ಕಾರವು, ಬಾಲ್ಯವಿವಾಹಕ್ಕೆ ಪ್ರಯತ್ನ, ಸಿದ್ಧತೆ ಮತ್ತು ನಿಶ್ಚಿತಾರ್ಥಗಳನ್ನು ಅಪರಾಧವನ್ನಾಗಿಸಲು ‘ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಮಸೂದೆ 2025’ ರ ಜಾರಿಗೆ ತಂದಿದೆ ಎಂದು ಉಲ್ಲೇಖಿಸಲಾಗಿದೆ.

ಕಾರ್ಮಿಕರ ಆರೋಗ್ಯ ರಕ್ಷಣೆ:

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ 14.34 ಲಕ್ಷ ಫಲಾನುಭವಿಗಳಿಗೆ ವಿವಿಧ ಸಾಮಾಜಿಕ ಭದ್ರತಾ ಸೌಲಭ್ಯಗಳಡಿ ರೂ.1115 ಕೋಟಿಗಳ ಸಹಾಯಧನವನ್ನು ವಿತರಿಸಿದೆ. ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ರಾಜ್ಯಾದ್ಯಂತ ಇರುವ 100 ಸಂಚಾರಿ ಆರೋಗ್ಯ ಕ್ಲಿನಿಕ್‌ಗಳಿಂದ 6.75 ಲಕ್ಷ ಕಾರ್ಮಿಕರು ಇದರ ಪ್ರಯೋಜನ ಪಡೆದಿದ್ದಾರೆ. ವಲಸೆ ಕಾರ್ಮಿಕರಿಗೆ ಸುರಕ್ಷಿತ ವಸತಿ ಕಲ್ಪಿಸಲು 5 ಜಿಲ್ಲೆಗಳಲ್ಲಿ 6 ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ. ಕಾರ್ಮಿಕರ ಮಕ್ಕಳಿಗೆ 6ನೇ ತರಗತಿಯಿಂದ 12ನೇ ತರಗತಿಯವರೆಗೆ ಗುಣಮಟ್ಟದ ಉಚಿತ ಶಿಕ್ಷಣ ನೀಡಲು ರಾಜ್ಯಾದ್ಯಂತ 42 ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಪ್ರಸ್ತಾಪಿಸಲಾಗಿದೆ.

ಕಾರ್ಮಿಕರ ಸಹಾಯಹಸ್ತ:

ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ‘ಅಂಬೇಡ್ಕರ್‌ ಕಾರ್ಮಿಕರ ಸಹಾಯಹಸ್ತ’ ಯೋಜನೆಯಡಿ 91,638 ಕಾರ್ಮಿಕರನ್ನು ಹಾಗೂ ‘ಕರ್ನಾಟಕ ರಾಜ್ಯ ಗಿಗ್‌ ಕಾರ್ಮಿಕರ ವಿಮಾ ಯೋಜನೆ’ಯಡಿ 10,468 ಫಲಾನುಭವಿಗಳನ್ನು ನೋಂದಾಯಿಸಲಾಗಿದೆ. ದಿನಪತ್ರಿಕೆ ಮತ್ತು ಹಾಲು ವಿತರಣಾ ಕಾರ್ಮಿಕರು ಹಾಗೂ ಮೋಟಾರು ಸಾರಿಗೆ ಮಂಡಳಿಯ 51,933 ಕಾರ್ಮಿಕರನ್ನು ನೋಂದಾಯಿಸಿಕೊಂಡು ಸೌಲಭ್ಯ ಒದಗಿಸಲಾಗುತ್ತಿದೆ ಎಂದು ವಿವರಿಸಿದೆ.

28 ಸಾವಿರ ಮಿಲಿಯನ್:

ರಾಜ್ಯದಲ್ಲಿ ಹಲವಾರು ವಿದ್ಯುತ್‌ ಉತ್ಪಾದನಾ ಯೋಜನೆಗಳು ಅನುಷ್ಠಾನವಾಗುತ್ತಿವೆ. ಈ ಆರ್ಥಿಕ ವರ್ಷದ 10 ತಿಂಗಳುಗಳಲ್ಲಿ 28,000 ಮಿಲಿಯನ್‌ ಯೂನಿಟ್‌ಗಳಷ್ಟು ವಿದ್ಯುತ್ತನ್ನು ಉತ್ಪಾದಿಸಲಾಗಿದೆ. ಈ ವರ್ಷ 41,208 ವಿತರಣಾ ಪರಿವರ್ತಕಗಳನ್ನು ಹಾಗೂ 10,943 ಕಿಲೋಮೀಟರುಗಳಷ್ಟು ಹೈ ಟೆನ್ಷನ್‌ ಲೈನುಗಳು, 6382 ಕಿಲೋಮೀಟರ್‌ ಎಲ್‌.ಟಿ ಲೈನುಗಳನ್ನು ಅಳವಡಿಸಲಾಗಿದೆ.

ಖಾಸಗಿ ಕಂಪನಿಗಳಿಂದ 3704 ಮೆಗಾವ್ಯಾಟ್‌ ಅನ್ನು ಪಿಪಿಪಿ ಹಾಗೂ ಇನ್ನಿತರೆ ಮಾದರಿಗಳ ಮೂಲಕ ಉತ್ಪಾದಿಸಲು ಹಾಗೂ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಸರ್ಕಾರಿ ಸ್ವಾಮ್ಯದ ಕಂಪನಿಗಳೇ ಸುಮಾರು 4794 ಮೆಗಾವ್ಯಾಟ್‌ ವಿದ್ಯುತ್ತನ್ನು ಹೊಸದಾಗಿ ಉತ್ಪಾದನೆ ಮಾಡಲು ಕಾರ್ಯ ಯೋಜನೆ ರೂಪಿಸಿವೆ. ಇಂಧನ ಇಲಾಖೆ ವತಿಯಿಂದ ‘ಗಂಗಾ ಕಲ್ಯಾಣ’ ಯೋಜನೆಯಡಿ 11,727 ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ರೈತರಿಗೆ ಹಗಲಿನ ವೇಳೆ ವಿಶ್ವಾಸಾರ್ಹ ವಿದ್ಯುತ್ ಒದಗಿಸಲು ಪಿಎಂ-ಕುಸುಮ್ (ಬಿ) ಯೋಜನೆಯಡಿ 1,230 ಜಾಲಮುಕ್ತ ಸೌರ ಪಂಪ್‌ ಸೆಟ್‌ಗಳನ್ನು ಅಳವಡಿಸಿದೆ ಎಂದು ಉಲ್ಲೇಖಿಸಲಾಗಿದೆ.

ಐತಿಹಾಸಿಕ ತೀರ್ಮಾನ:

ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಷಯವನ್ನು ಬಗೆಹರಿಸಲಾಗಿದೆ. ರಾಜ್ಯದ ಜನರ ಜಾತಿವಾರು ಸಮೀಕ್ಷೆಯನ್ನು ನಡೆಸಿ ಅವರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಾನಮಾನಗಳ ಸ್ಥಿತಿಗಳನ್ನು ಅಧ್ಯಯನ ಮಾಡಿ ನೀಡಿದ ವರದಿಯ ಆಧಾರದ ಮೇಲೆ ದಮನಿತ ಸಮುದಾಯಗಳ ಕಲ್ಯಾಣಗಳಿಗೆ ಬೇಕಾದ ಕ್ರಮಗಳನ್ನು ಸರ್ಕಾರವು ಕೈಗೊಂಡಿದೆ. ಪರಿಶಿಷ್ಟ ಜಾತಿಗಳಲ್ಲಿ ಸಮಾನ ಬೆಳವಣಿಗೆ ಸಾಧಿಸುವ ಉದ್ದೇಶದಿಂದ ಜಾರಿ ಮಾಡಲಾಗುತ್ತಿರುವ ಒಳಮೀಸಲಾತಿ ಕುರಿತ ತೀರ್ಮಾನಕ್ಕೆ ಐತಿಹಾಸಿಕ ಮಹತ್ವವಿದೆ ಎಂದು‌‌‌ ಭಾಷಣದಲ್ಲಿ ಉಲ್ಲೇಖಿಸಲಾಗಿದೆ.

Related Posts

Leave a Reply

Your email address will not be published. Required fields are marked *