ದೊಡ್ಡ ಮೊತ್ತ ಜಿಎಸ್ಟಿ ಪಾವತಿಸಲು ತೆರಿಗೆ ಇಲಾಖೆಯಿಂದ ನೋಟಿಸ್ ಪಡೆದಿರುವ ಸಣ್ಣ ವ್ಯಾಪಾರಿಗಳು ಸರ್ಕಾರದ ವಿರುದ್ಧ ಸಮರಕ್ಕೆ ಮುಂದಾಗಿದ್ದಾರೆ. ಸಣ್ಣಪುಟ್ಟ ವರ್ತಕರು, ಬೇಕರಿ, ಟೀ ಸ್ಟಾಲ್, ಹಣ್ಣು-ತರಕಾರಿ ಅಂಗಡಿಗಳನ್ನಿಟ್ಟುಕೊಂಡು ಜೀವನ ನಡೆಸುತ್ತಿರುವವರು ಜುಲೈ 23 ರಂದು ಪ್ರತಿಭಟನೆ ನಡೆಸಲಿದ್ದಾರೆ.
ಮುನ್ಸೂಚನೆ ನೀಡದೆ ಸಣ್ಣ ಉದ್ಯಮದಾರರಿಗೆ ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿರುವುದು ಕಾನೂನು ಬಾಹಿರ. ನಮಗೆ ನ್ಯಾಯ ಸಿಗುವ ತನಕ ಹೋರಾಟ ನಡೆಸುವುದಾಗಿ ರಾಜ್ಯ ಕಾರ್ಮಿಕ ಪರಿಷತ್ ಹೇಳಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡಲೇ ಮಧ್ಯಪ್ರವೇಶಸಿ ನೋಟಿಸು ಹಿಂಪಡೆಯಬೇಕು ಎಂದು ಆಗ್ರಹಿಸಿದೆ.
ಇವರ ವ್ಯಾಪಾರ ವಹಿವಾಟು ಮೇಲೆ ವಾಣಿಜ್ಯ ತೆರಿಗೆ ಇಲಾಖೆಯು ಲಕ್ಷಗಟ್ಟಲೆ ತೆರಿಗೆ ಹೇರುತ್ತಿದ್ದು, ಕೆಲವರಿಗೆ 60-70 ಲಕ್ಷ ರೂ. ವರೆಗೆ ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ಬಂದಿದೆ. ಆತಂಕಕ್ಕೊಳಗಾಗಿರುವ ಸಣ್ಣ ವ್ಯಾಪಾರಿಗಳು ಸರ್ಕಾರದ ವಿರುದ್ಧ ಪ್ರತಿಭಟನೆಯ ಭಾಗವಾಗಿ ಜುಲೈ 23 ರಂದು ಅಂಗಡಿಗಲ್ಲಿ ಹಾಲು, ಟೀ, ಕಾಫಿ ಮೊದಲಾದವುಗಳ ಮಾರಾಟ ನಿಲ್ಲಿಸಲಿದ್ದಾರೆ, ಮರುದಿನ ಗುಟ್ಕಾ ಸಿಗರೇಟು ಮಾರಾಟ ಇರುವುದಿಲ್ಲ, ಜುಲೈ 25 ರಂದು ಎಲ್ಲ ಸಣ್ಣ ವ್ಯಾಪಾರಿಗಳು ಒಗ್ಗೂಡಿ ಫ್ರೀಡಂ ಪಾರ್ಕ್ನಲ್ಲಿ ದೊಡ್ಡಮಟ್ಟದ ಪ್ರತಿಭಟನೆ ನಡೆಸಲಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆ ನೀಡುತ್ತಿರುವ ನೋಟಿಸ್ ಈಗ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ವಾಣಿಜ್ಯ ಇಲಾಖೆಯ ಈ ಟ್ಯಾಕ್ಸ್‌ನ್ನು ವಜಾ ಮಾಡುವಂತೆ ಆಗ್ರಹಿಸಿ ಬೇಕರಿ, ದಿನಸಿ, ಟೀ ಅಂಗಡಿ ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸಿಎಂ, ಡಿಸಿಎಂ ಸೇರಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಸಂಪೂರ್ಣ ಟ್ಯಾಕ್ಸ್ ವಜಾಕ್ಕೆ ಆಗ್ರಹಿಸಿದ್ದಾರೆ. ಈ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶೀಘ್ರವೇ ಸಭೆ ಕರೆದು, ಟ್ಯಾಕ್ಸ್ ಅಧಿಕಾರಿಗಳ ಜೊತೆ ಮಾತನಾಡುವ ಬಗ್ಗೆ ಭರವಸೆ ನೀಡಿದೆ ಎನ್ನಲಾಗಿದೆ.