79ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ದೇಶದ ನಾಗರಿಕರಿಗೆ ದೀಪಾವಳಿ ಉಡುಗೊರೆಯ ಭರವಸೆ ನೀಡಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸುಧಾರಣೆಗಳು ದೇಶಕ್ಕೆ ದೀಪಾವಳಿ ಉಡುಗೊರೆಯಾಗಿರುತ್ತವೆ ಎಂದು ತಿಳಿಸಿದ್ದಾರೆ. ಈ ಸುಧಾರಣೆ ದೇಶಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ. ಸರ್ಕಾರವು ದೇಶಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡಿ, ತೆರಿಗೆ ಪ್ರಕ್ರಿಯೆಯನ್ನು ಸರಳಗೊಳಿಸಲಿದೆ ಎಂದು ಹೇಳಿದ್ದಾರೆ.
ಸಾಮಾನ್ಯ ಜನರಿಗೆ ವಸ್ತುಗಳ ಮೇಲಿನ ತೆರಿಗೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ದಿನನಿತ್ಯ ಬಳಸುವ ವಸ್ತುಗಳು ಅಗ್ಗವಾಗುತ್ತವೆ. ಇದರಿಂದ ಆರ್ಥಿಕತೆ ಬಲಗೊಳ್ಳುತ್ತದೆ ಎಂದು ಮೋದಿ ತಿಳಿಸಿದ್ದಾರೆ.
2017 ರ ಜುಲೈನಲ್ಲಿ ಜಿಎಸ್ಟಿ ಜಾರಿಗೊಂಡಿದ್ದು, ಎಂಟು ವರ್ಷ ಪೂರ್ಣಗೊಂಡ ನಂತರ ಬದಲಾವಣೆಗಳಿಗಾಗಿ ಪರಿಶೀಲನೆ ನಡೆಸಲು ಉನ್ನತಾಧಿಕಾರ ಸಮಿತಿ ರಚಿಸಲಾಗಿದ್ದು, ರಾಜ್ಯಗಳೊಂದಿಗೆ ಸಮಾಲೋಚನೆ ಮಾಡಲಾಗಿದೆ. ಸರ್ಕಾರವು ಹೊಸ ಜಿಎಸ್ಟಿ ಸುಧಾರಣೆಗಳನ್ನು ಸಿದ್ಧಪಡಿಸಿದೆ ಎಂದು ಮೋದಿ ಮಾಹಿತಿ ನೀಡಿದರು.
ವಿಕಸಿತ ಭಾರತ ರೋಜ್ಗಾರ್ ಯೋಜನೆಯಡಿ ಮೊದಲ ಬಾರಿಗೆ ಖಾಸಗಿ ವಲಯದ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ ಯುವಕರಿಗೆ 15,000 ರೂ. ನೆರವನ್ನು ಪ್ರಧಾನಿ ಘೋಷಿಸಿದ್ದಾರೆ. ಈ ಯೋಜನೆಯಿಂದ 3.5 ಕೋಟಿಗೂ ಹೆಚ್ಚು ಯುವಜನರು ಪ್ರಯೋಜನ ಪಡೆಯುವ ಸಾಧ್ಯತೆ ಇದೆ. ದೇಶದ ಯುವಕರಿಗಾಗಿ 1 ಲಕ್ಷ ಕೋಟಿ ಮೌಲ್ಯದ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ. ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್ಗಾರ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯಡಿ ಖಾಸಗಿ ವಲಯದಲ್ಲಿ ಮೊದಲ ಉದ್ಯೋಗ ಪಡೆಯುವ ಯುವಕ-ಯುವತಿಯರು ಸರ್ಕಾರದಿಂದ 15,000 ರೂ. ಪಡೆಯುತ್ತಾರೆ. ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವ ಕಂಪನಿಗಳಿಗೆ ಪ್ರೋತ್ಸಾಹ ಮೊತ್ತ ನೀಡಲಾಗುತ್ತದೆ. ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್ಗಾರ್ ಯೋಜನೆಯು ಯುವಕರಿಗೆ 3.5 ಕೋಟಿ ಹೊಸ ಉದ್ಯೋಗಾವಕಾಶ ಸೃಷ್ಟಿಸುತ್ತದೆ ಎಂದು ತಿಳಿಸಿದ್ದಾರೆ.