ಕಳೆದ ಎರಡು ತಿಂಗಳಿನಿಂದ ‘ಗೃಹಲಕ್ಷ್ಮಿ ಯೋಜನೆ’ ಹಣ ಬಿಡುಗಡೆಯಾಗದಿರುವುದರಿಂದ, ಹಣದ ನಿರೀಕ್ಷೆಯಲ್ಲಿದ್ದ ಮಹಿಳೆಯರಿಗೆ ತೊಂದರೆ ಉಂಟಾಗಿತ್ತು. ಸರ್ಕಾರ ನೀಡಿದ ವಚನವನ್ನು ಈಡೇರಿಸುತ್ತಿಲ್ಲ ಎಂದು ಬೇಸರ ಹೊರಪಡಿಸಿದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಬಾಕಿ ಉಳಿದ ಹಣವನ್ನು ಬಿಡುಗಡೆ ಮಾಡಲಾಗಿದೆ.
ರಾಜ್ಯದ 1.24 ಕೋಟಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ 22 ಕಂತುಗಳ ಹಣ ನೀಡಲಾಗಿದೆ. ದಸರಾ ಹಬ್ಬದ ಪ್ರಯುಕ್ತಾ ಮೂರು ದಿನದ ಹಿಂದೆ 23ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಇನ್ನು 24ನೇ ಕಂತು, ಅಂದರೆ ಆಗಸ್ಟ್ ತಿಂಗಳ ಹಣ ಬಾಕಿ ಇರುವುದರಿಂದ, ಅದನ್ನು ಶೀಘ್ರದಲ್ಲೇ ಖಾತೆಗೆ ಜಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಈ ವಾರಾಂತ್ಯದೊಳಗೆ ಎಲ್ಲಾ ಫಲಾನುಭವಿಳಿಗೂ ಹಣ ತಲುಪುವ ನಿರೀಕ್ಷೆಯಿದೆ.
ಮಹಿಳೆಯರಿಗೆ ಬ್ಯಾಂಕ್‌ಗಳಿಂದ ಸರಿಯಾಗಿ ಸಾಲ ಸೌಲಭ್ಯ ಸಿಗದ ಕಾರಣ ಅವರಿಗೆ ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳಲು ಕಷ್ಟವಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಹೆಸರಿನಲ್ಲಿ ಸಹಕಾರ ಸಂಘ ಆರಂಭಿಸಲು ಚಿಂತನೆ ನಡೆಸಿದೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು ಅತ್ಯಂತ ಮಹತ್ವಕಾಂಕ್ಷಿ ಯೋಜನೆಯಾಗಿದೆ. ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/-ಗಳನ್ನು ನೀಡುವ “ಗೃಹಲಕ್ಷ್ಮಿ ಯೋಜನೆ”ಯನ್ನು ಜಾರಿಗೊಳಿಸಿತು.
ಇದುವರೆಗೂ ಒಟ್ಟು 23 ಕಂತುಗಳ ಹಣ ಖಾತೆಗೆ ಜಮೆ ಆಗಿವೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ. ಅದರ ಪ್ರಕಾರ, ಗೃಹ ಲಕ್ಷ್ಮಿ ಯೋಜನೆ ಆರಂಭವಾದ ಇಲ್ಲಿಯವರೆಗೂ ಪ್ರತಿ ತಿಂಗಳು 2 ಸಾವಿರದಂತೆ ಪ್ರತಿಯೊಬ್ಬ ಫಲಾನುಭವಿಗೂ 46 ಸಾವಿರ ರೂ. ಜಮೆ ಆಗಿದೆ.