ಮಾಗಡಿ ತಾಲೂಕಿನ ಸುಹಾಸ್.ಎಸ್ ಮತ್ತು ಉಡುಪಿಯ ಮೇಘಾ ವೀಡಿಯೊ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವರ ಸುಹಾಸ್ ಕೆನಡಾದಲ್ಲಿದ್ದು, ರಜೆ ಸಿಗದ ಕಾರಣ ಉಡುಪಿ ಸರಸ್ವತಿ ಸಭಾಭವನದಲ್ಲಿ ವಧು ಮೇಘಾ ಮತ್ತು ಕುಟುಂಬದವರು ಹಾಜರಿದ್ದು ನಿಶ್ಚಿತಾರ್ಥ ನೆರವೇರಿತು.
ವಧು-ವರರು ವಿಡಿಯೋ ಕಾನ್ಫರೆನ್ಸ್ ಮೂಲಕ ಅದ್ದೂರಿ ನಿಶ್ಚಿತಾರ್ಥ ಮಾಡಿಕೊಂಡ ವಿನೂತನ ಘಟನೆ ನಡೆದಿದೆ. ಮಾಗಡಿ ತಾಲ್ಲೂಕಿನ ಚಕ್ರಬಾವಿ ಗ್ರಾಮದ ನಿವಾಸಿ ಸುಹಾಸ್.ಎಸ್ ಮತ್ತು ಉಡುಪಿಯ ನಿವಾಸಿ ಮೇಘ ಅವರ ನಿಶ್ಚಿತಾರ್ಥವು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು.
ಕೆನಡಾದಲ್ಲಿ ಉದ್ಯೋಗದಲ್ಲಿರುವ ಸುಹಾಸ್ ಅವರಿಗೆ ನಿಶ್ಚಿತಾರ್ಥಕ್ಕೆ ಬರಲು ರಜೆ ಸಿಗದ ಕಾರಣ ಈ ಆನ್ಲೈನ್ ನಿಶ್ಚಿತಾರ್ಥ ವ್ಯವಸ್ಥೆ ಮಾಡಲಾಗಿತ್ತು. ಉಡುಪಿಯಲ್ಲಿ ಬೆಳಗ್ಗೆ ನಿಶ್ಚಿತಾರ್ಥ ನಡೆಯುತ್ತಿದ್ದಾಗ, ಸುಹಾಸ್ ಇದ್ದ ಕೆನಡಾದಲ್ಲಿ ಮಧ್ಯರಾತ್ರಿ ಆಗಿತ್ತು. ವೀಡಿಯೊ ಕರೆಯ ಮೂಲಕ ಸಂಪರ್ಕ ಸಾಧಿಸಿದ ವಧು-ವರರು ಕ್ಯಾಮೆರಾಗಳಿಗೆ ಉಂಗುರವನ್ನು ತೋರಿಸುವ ಮೂಲಕ ನಿಶ್ಚಿತಾರ್ಥ ನೆರವೇರಿಸಿದರು.
ಎರಡು ಕುಟುಂಬಗಳ ಸಂಬಂಧಿಕರು ನಿಶ್ಚಿತಾರ್ಥಕ್ಕೆ ಸಾಕ್ಷಿಯಾದರು. ನಿಶ್ಚಿತಾರ್ಥದ ವಿಧಿವಿಧಾನಗಳ ಭಾಗವಾಗಿ ಭಾರತದಲ್ಲಿ ಸಮಾರಂಭಕ್ಕೆ ಹಾಜರಿದ್ದ ಹಿರಿಯರು ಕ್ಯಾಮೆರಾದ ಮೂಲಕವೇ ವಧು-ವರರಿಗೆ ಆರತಿ ಬೆಳಗಿ ಮಂತ್ರಾಕ್ಷತೆ ಹಾಕಿ ಆಶೀರ್ವದಿಸಿದರು.
ಇತ್ತೀಚೆಗೆ ಇಂಡಿಗೊ ವಿಮಾನ ಸಂಚಾರದಲ್ಲಿ ಆದ ವ್ಯತ್ಯಯದ ಕಾರಣ ಮದುವೆ ಅರತಕ್ಷತೆ ಕೂಡ ವಧು- ವರರ ಕ್ಯಾಮೆರಾ ಹಾಜರಿ ಮೂಲಕ ನಡೆದಿರುವುದು ರಾಜ್ಯದಲ್ಲಿ ಸುದ್ದಿಯಾಗಿತ್ತು.


