Menu

ಗ್ರೀನ್‌ ಸ್ಟೀಲ್‌, ಉನ್ನತ ದರ್ಜೆಯ ಅಲ್ಯೂಮೀನಿಯಂ; ಭಾರತ -ಯುಎಇ ಸಹಯೋಗಕ್ಕೆ ಒತ್ತು

hdk

ದುಬೈ, ಯುಎಇ: ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ ಉನ್ನತ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ಉಕ್ಕು ಹಾಗೂ ಅಲ್ಯೂಮೀನಿಯಂ ಕುರಿತಾಗಿ ಅವರು ಮಾತುಕತೆ ನಡೆಸಲಾಗಿದ್ದು; ಗ್ರೀನ್‌ ಸ್ಟೀಲ್‌, ಉನ್ನತ ದರ್ಜೆಯ ಅಲ್ಯೂಮೀನಿಯಂ ಕುರಿತ ಭಾರತ -ಯುಎಇ ನಡುವಿನ ದೀರ್ಘಕಾಲೀನ ಸಹಯೋಗಕ್ಕೆ ಒತ್ತು ನೀಡಲಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಈ ಕುರಿತಂತೆ ಯುಎಇ ಹಣಕಾಸು ಸಚಿವರಾದ ಎಚ್.ಇ. ಅಬ್ದುಲ್ಲಾ ಬಿನ್ ತೌಕ್ ಅಲ್ ಮರ್ರಿ ಅವರನ್ನು ಭೇಟಿ ಮಾಡಿ ಮಹತ್ವದ ಸಮಾಲೋಚನೆ ನಡೆಸಿದರು, ಉಕ್ಕು ಸಚಿವ ಕುಮಾರಸ್ವಾಮಿ ಅವರು; ವ್ಯಾಪಾರ ವಿಸ್ತರಣೆ, ಸಂಪನ್ಮೂಲಗಳ ಖಾತರಿ ಮತ್ತು ಉಕ್ಕು- ಅಲ್ಯೂಮಿನಿಯಂನಲ್ಲಿ ಸಹಯೋಗ, ನಾವೀನ್ಯತೆಗಳನ್ನು ಕೇಂದ್ರೀಕೃತವಾಗಿರಿಸಿಕೊಂಡು ಚರ್ಚೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ೨೦೩೦ರ ಹೊತ್ತಿಗೆ ದೇಶಿಯವಾಗಿ ವಾರ್ಷಿಕ ೩೦೦ ದಶಲಕ್ಷ ಟನ್‌ ಉಕ್ಕು ಉತ್ಪಾದನೆ ಮಾಡುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಭಾರತವು ನಿರ್ಣಾಯಕ ಕ್ರಮಗಳ ಮೂಲಕ ಮುನ್ನಡೆಯುತ್ತಿದೆ ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ಒತ್ತಿ ಹೇಳಿದರು.

ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಸ್ಥಿತಿ ಸ್ಥಾಪಕತ್ವ, ಸಂಪನ್ಮೂಲಗಳ ಖಾತರಿ ಮತ್ತು ಸುರಕ್ಷಿತೆ, ನಾವೀನ್ಯತೆ ಚಾಲಿತ ಬಲವಾದ ಜಾಗತಿಕ ಕೈಗಾರಿಕಾ ಪಾಲುದಾರಿಕೆಗಳನ್ನು ರೂಪಿಸಿಕೊಳ್ಳಲು ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆ. ಈ ಗುರಿ ಮುಟ್ಟಲು ಭಾರತವು ಜಾಗತಿಕವಾಗಿ ಉತ್ತಮ ಪಾಲುದಾರರತ್ತ ಕೈ ಚಾಚಿದೆ ಎಂದು ಅವರು ಮಾತುಕತೆಯ ವೇಳೆ ಅಬ್ದುಲ್ಲಾ ಬಿನ್ ತೌಕ್ ಅಲ್ ಮರ್ರಿ ಅವರಿಗೆ ತಿಳಿಸಿದರು.

ದ್ವಿಪಕ್ಷೀಯ ಕೈಗಾರಿಕಾ ಸಂಬಂಧಗಳನ್ನು ಬಲಪಡಿಸುವ ಅವಕಾಶವನ್ನು ಮುಕ್ತವಾಗಿ ಸ್ವಾಗತಿಸಿದ ಕುಮಾರಸ್ವಾಮಿ ಅವರು, ಜಗತ್ತಿನ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ದೇಶವಾಗಿ ಭಾರತವು ವೇಗವಾಗಿ ಬೆಳೆಯುತ್ತಿರುವ ಬಗ್ಗೆ ಒತ್ತಿ ಹೇಳಿದರು. ಅಲ್ಲದೆ; ಹಸಿರು ಉಕ್ಕು, ಹೆಚ್ಚಿನ ಮೌಲ್ಯದ ಉತ್ಪಾದನೆ ಮತ್ತು ಜಾಗತಿಕ ಪೂರೈಕೆ ಸರಪಳಿ ಸ್ಥಿತಿ ಸ್ಥಾಪಕತ್ವಕ್ಕೆ ರಾಷ್ಟ್ರದ ಬದ್ಧತೆಯನ್ನು ವಿವರಿಸಿದರು.

“ಭಾರತ ಮತ್ತು ಯುಎಇ ಹಸಿರು ಉಕ್ಕು ಉತ್ಪಾದನೆ ಮತ್ತು ಸುಸ್ಥಿರ ಕೈಗಾರಿಕಾ ಬೆಳವಣಿಗೆಯಲ್ಲಿ ಬಲವಾದ ಪಾಲುದಾರರಾಗಬಹುದು” ಎಂದು ಸಚಿವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

“2030ರ ವೇಳೆಗೆ ಭಾರತವು ತನ್ನ 300 ಮಿಲಿಯನ್ ಟನ್ ಉಕ್ಕು ಉತ್ಪಾದನಾ ಗುರಿಯನ್ನು ತಲುಪಲು ಸಹಾಯ ಮಾಡುವಲ್ಲಿ ಯುಎಇ ಪ್ರಮುಖ ಪಾತ್ರ ವಹಿಸಬಹುದು. ವಿಶೇಷವಾಗಿ ಕಚ್ಚಾ ವಸ್ತುಗಳ ಖಾತರಿಯನ್ನು ಬೆಂಬಲಿಸುವ ಮೂಲಕ ಮತ್ತು ಇಂಧನ ಪೂರೈಕೆ, ಸಮರ್ಥ ಉತ್ಪಾದನಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸುವ ಮೂಲಕ ಭಾರತದ ಜತೆ ಕೈ ಜೋಡಿಸಬಹುದು. ಈ ಪಾಲುದಾರಿಕೆ ಅತ್ಯಂತ ಮಹತ್ವದ್ದಾಗಿರುತ್ತದೆ” ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.

ಉನ್ನತ ದರ್ಜೆಯ ಉಕ್ಕು ಮತ್ತು ಅಲ್ಯೂಮಿನಿಯಂ:

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಆಟೋಮೊಬೈಲ್ ಮತ್ತು ಕಾರ್ಯತಂತ್ರದ ವಲಯಗಳಿಗೆ ಅತ್ಯಗತ್ಯವಾದ ಉನ್ನತ ದರ್ಜೆಯ ಉಕ್ಕು ಮತ್ತು ಅಲ್ಯೂಮಿನಿಯಂನ ಜಂಟಿ ಅಭಿವೃದ್ಧಿಯು ಚರ್ಚೆಯ ಪ್ರಮುಖ ಅಂಶಗಳಲ್ಲಿ ಒಂದಾಗಿತ್ತು.

“ಆಟೋಮೊಬೈಲ್, ಚಲನಶೀಲತೆ ಮತ್ತು ಉನ್ನತ ಮಟ್ಟದ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಬಳಕೆಗಾಗಿ ಉತ್ತಮ ಗುಣಮಟ್ಟದ ಉಕ್ಕು ಮತ್ತು ಅಲ್ಯೂಮಿನಿಯಂ ಅನ್ನು ಜಂಟಿಯಾಗಿ ಉತ್ಪಾದಿಸುವ ಮತ್ತು ವ್ಯಾಪಾರ ಮಾಡುವಲ್ಲಿ ನಾವು ಸ್ಪಷ್ಟವಾದ ಪಾಲುದಾರಿಕೆಯನ್ನು ಎದುರು ನೋಡುತ್ತೇವೆ” ಎಂದು ಇದೇ ವೇಳೆ ಕುಮಾರಸ್ವಾಮಿ ಅವರು ಅಬ್ದುಲ್ಲಾ ಬಿನ್ ತೌಕ್ ಅಲ್ ಮರ್ರಿ ಅವರಲ್ಲಿ ಹೇಳಿದರು.

ಸಾರ್ವಜನಿಕ ವಲಯದ ಉದ್ಯಮಗಳ ತೊಡಗಿಸಿಕೊಳ್ಳುವಿಕೆ:

ಭಾರತ-ಯುಎಇ ಕೈಗಾರಿಕಾ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಭಾರತದ ಸಾರ್ವಜನಿಕ ವಲಯದ ಉದ್ಯಮಗಳ (ಸಿಪಿಎಸ್‌ಇ) ಸಕ್ರಿಯ ಪಾತ್ರವನ್ನು ಈ ಮಾತಿಕತೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಸಲಾಯಿತು. ಈ ಕೆಳಗಿನ ಅಂಶಗಳನ್ನು ಮಾತುಕತೆ ವೇಳೆ ಸಚಿವರು ಪ್ರಮುಖವಾಗಿ ಉಲ್ಲೇಖಿಸಿದರು.

ಮಹಾರತ್ನ ಸಿಪಿಎಸ್‌ಇ ಆಗಿರುವ ಎಸ್‌ಎಐಎಲ್, ಪ್ರಸ್ತುತ ರಾಸ್ ಅಲ್ ಖೈಮಾದ ಸ್ಟೀವಿನ್ ರಾಕ್ ಎಲ್‌ಎಲ್‌ಸಿಯಿಂದ ವಾರ್ಷಿಕವಾಗಿ ಸುಮಾರು 2.5 ಮಿಲಿಯನ್ ಟನ್ ಕಡಿಮೆ-ಸಿಲಿಕಾ ಸುಣ್ಣದ ಕಲ್ಲನ್ನು ಆಮದು ಮಾಡಿಕೊಳ್ಳುತ್ತದೆ. ಕಂಪನಿಯು ದೀರ್ಘಾವಧಿಯ ಪೂರೈಕೆ ಒಪ್ಪಂದಗಳನ್ನು ಮತ್ತು ಯುಎಇಯ ಮೂಲಸೌಕರ್ಯ ಮತ್ತು ಕೈಗಾರಿಕಾ ವಲಯಗಳಿಗೆ ಪ್ರೀಮಿಯಂ ಭಾರತೀಯ ಉಕ್ಕಿನೊಂದಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಅನ್ವೇಷಿಸುತ್ತಿದೆ.

ಭಾರತದ ಅತಿದೊಡ್ಡ ಕಬ್ಬಿಣದ ಅದಿರು ಉತ್ಪಾದಕ ಸಂಸ್ಥೆ ರಾಷ್ಟ್ರೀಯ ಖನಿಜಾಭಿವೃದ್ಧಿ ಸಂಸ್ಥೆ (NMDC), ಗಣಿಗಾರಿಕೆ ಮೌಲ್ಯ ಸರಪಳಿಯನ್ನು ಅಭಿವೃದ್ಧಿಪಡಿಸುವಲ್ಲಿ ಯುಎಇ ಮೂಲದ ಸಂಸ್ಥೆಗಳೊಂದಿಗೆ ಸಹಕರಿಸಲು ಉತ್ಸುಕವಾಗಿದೆ.

ಭಾರತದ ಪ್ರಮುಖ ಎಂಜಿನಿಯರಿಂಗ್ ಸಲಹಾ ಸಂಸ್ಥೆಯಾದ ಮೆಕಾನ್‌ (MECON), ಕೊಲ್ಲಿ ಭಾಗದಲ್ಲಿ ತೈಲ ಮತ್ತು ಅನಿಲ, ಉಕ್ಕು ಸ್ಥಾವರ ಅಭಿವೃದ್ಧಿ ಮತ್ತು ಸ್ಮಾರ್ಟ್ ಮೂಲಸೌಕರ್ಯ ಯೋಜನೆಗಳಿಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ.

ಮೂರು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಾದ ಭಾರತೀಯ ಉಕ್ಕು ಪ್ರಾಧಿಕಾರ (SAIL), ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (NMDC), ಮತ್ತು ಮೆಕಾನ್ (MECON) ಇದೀಗ ದುಬೈನಲ್ಲಿ ಅಂತಾರಾಷ್ಟ್ರೀಯ ಕಚೇರಿಗಳನ್ನು ತೆರೆದಿವೆ. ವ್ಯಾಪಾರ ಸಮನ್ವಯ, ಜಂಟಿ ಉದ್ಯಮಗಳು ಮತ್ತು ತಂತ್ರಜ್ಞಾನ ವಿನಿಮಯಕ್ಕಾಗಿ ಶಾಶ್ವತ ವೇದಿಕೆಯನ್ನು ಸ್ಥಾಪಿಸಿವೆ.

ಜಂಟಿ ಕಾರ್ಯಪಡೆ ರಚನೆ:

ನಿರ್ದಿಷ್ಟ ಅವಕಾಶಗಳನ್ನು ಗುರುತಿಸಲು, ಸಂಚಾರ ಸೌಕರ್ಯಗಳನ್ನು ಸುಗಮಗೊಳಿಸಲು ಮತ್ತು ಪ್ರಮುಖ ವಲಯಗಳಲ್ಲಿ ದೀರ್ಘಕಾಲೀನ ಸಹಯೋಗವನ್ನು ಉತ್ತೇಜಿಸಲು ಭಾರತೀಯ ಮತ್ತು ಯುಎಇ ಪಾಲುದಾರರ ನಡುವೆ ಜಂಟಿ ಕಾರ್ಯಪಡೆಯನ್ನು ರಚಿಸುವ ಬಗ್ಗೆ ಈ ಸಂದರ್ಭದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಪ್ರಸ್ತಾಪಿಸಿದರು.

“ಭಾರತವು ಯುಎಇ ಯನ್ನು ಕೇವಲ ಮಾರುಕಟ್ಟೆಯನ್ನಾಗಿ ನೋಡುವುದಿಲ್ಲ. ಆದರೆ ಜಾಗತಿಕ ಕೈಗಾರಿಕಾ ಭೂಪಟವನ್ನು ಮರು ರೂಪಿಸುವಲ್ಲಿ ಕಾರ್ಯತಂತ್ರದ ಪಾಲುದಾರನಾಗಿ ನೋಡುತ್ತದೆ” ಎಂದು ಸಚಿವರು ಪ್ರತಿಪಾದಿಸಿದರು.

$5 ಟ್ರಿಲಿಯನ್ ಆರ್ಥಿಕತೆಯಾಗುವ ಭಾರತದ ಗುರಿಯೊಂದಿಗೆ ಹೊಂದಿಕೆಯಾಗುವ ಜಂಟಿ ಯೋಜನೆಗಳು ಮತ್ತು ವ್ಯಾಪಾರ ಚೌಕಟ್ಟುಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ದಯಬೈ ಸಹಕಾರವನ್ನು ವಿಸ್ತೃತ ಮಟ್ಟದಲ್ಲಿ ಪಡೆದುಕೊಳ್ಳುವ ಸಂಕಲ್ಪದೊಂದಿಗೆ ಸಭೆ ಮುಕ್ತಾಯವಾಯಿತು.

Related Posts

Leave a Reply

Your email address will not be published. Required fields are marked *