Menu

2 ವರ್ಷದಲ್ಲಿ ರಸ್ತೆಗಿಳಿಯಲಿವೆ ಹಸಿರು ಹೈಡ್ರೋಜನ್ ವಾಹನ!

hydrojn bus

ನವದೆಹಲಿ: ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಜತೆಗೆ ಜಾಗತಿಕ ನಾಯಕತ್ವದತ್ತ ದಾಪುಗಾಲಿಟ್ಟ ಭಾರತ ಇದೀಗ ದೇಶದ ಹತ್ತು ಮಹಾನ್ ನಗರಗಳಲ್ಲಿ ಹಸಿರು ಹೈಡ್ರೋಜನ್ (ಜಲಜನಕ) ಇಂಧನ ಆಧಾರಿತ ವಾಹನಗಳನ್ನು ಓಡಿಸಲು ಸಜ್ಜಾಗಿದೆ.

ಸಾರಿಗೆ ವಲಯವನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ ಭಾರತ ವಿದ್ಯುತ್ ಚಾಲಿತ ವಾಹನಗಳಿಗೆ ಚಾಲನೆ ನೀಡಿದ ಬೆನ್ನಲ್ಲೇ ಈಗ ಜಲಜನಕ ಇಂಧನ ಚಾಲಿತ ಸಾರಿಗೆಗೆ ಹೆದ್ದಾರಿ ತೋರಿದೆ.

2023ರ ಪ್ರಥಮದಲ್ಲೇ “ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್” ಆರಂಭಿಸಿ ಇದಕ್ಕೆ ಮುನ್ನುಡಿ ಬರೆದಿದ್ದ ಭಾರತ ಎರಡೇ ವರ್ಷದಲ್ಲಿ ಹಸಿರು ಹೈಡ್ರೋಜನ್ ತುಂಬಿದ ವಾಹನ ಸಾರಿಗೆಗೆ ಚಾಲನೆ ನೀಡುವ ಅಭೂತಪೂರ್ವ ಸಾಧನೆಯತ್ತ ಹೆಜ್ಜೆ ಹಾಕಿದೆ.

ಜಲಜನಕದ 5 ಪೈಲಟ್ ಯೋಜನೆ: ದೇಶದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೇ ನವೀಕರಿಸಬಹುದಾದ ಇಂಧನಕ್ಕೆ ಒತ್ತು ಕೊಟ್ಟು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಶನ್ ಸ್ಥಾಪಿಸಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ, ಈಗ ಈ ಮಿಶನ್ ನ ಒಂದು ಭಾಗವಾಗಿ ₹ 208 ಕೋಟಿ ಆರ್ಥಿಕ ನೆರವು ಕಲ್ಪಿಸಿ ಜಲಜನಕ ಇಂಧನ ಚಾಲಿತ 5 ಹೊಸ ಪೈಲಟ್ ಯೋಜನೆಗಳಿಗೆ ಚಾಲನೆ ನೀಡಿದೆ.

ಸಾರಿಗೆ ವಲಯದಲ್ಲಿ ಪ್ರಮುಖವಾಗಿ ಬಸ್ ಮತ್ತು ಟ್ರಕ್‌ಗಳಲ್ಲಿ ಇಂಧನವಾಗಿ ಹಸಿರು ಹೈಡ್ರೋಜನ್ ಬಳಕೆ ಮತ್ತು ಹೈಡ್ರೋಜನ್ ಇಂಧನ ತುಂಬುವ ಕೇಂದ್ರಗಳ ಸ್ಥಾಪನೆಗೆ ಮುಂದಡಿ ಇಟ್ಟಿರುವ ಸರ್ಕಾರ, ಹಸಿರು ಹೈಡ್ರೋಜನ್ ವಲಯದಲ್ಲಿ ವಾಣಿಜ್ಯಿಕವಾಗಿ ಕಾರ್ಯ ಸಾಧುವಾಗುವಂತಹ ತಂತ್ರಜ್ಞಾನ ಅಳವಡಿಸಿ, ಅಗತ್ಯ ಮೂಲಸೌಕರ್ಯ ದೊಂದಿಗೆ ಮತ್ತಷ್ಟು ಅಭಿವೃದ್ಧಿಪಡಿಸಲು ಸಹ ಕಾರ್ಯ ಯೋಜನೆ ರೂಪಿಸಿದೆ.

ಮೊದಲು ದೇಶದ 10 ಮಾರ್ಗಗಳಲ್ಲಿ ಜಲಜನಕ ಇಂಧನ ಚಾಲಿತ ವಾಹನ: ದೇಶದ ಹತ್ತು ಮಹಾ ನಗರಗಳ ಮಧ್ಯೆ ಜಲಜನಕ ಇಂಧನ ಪೂರಿತ ವಾಹನಗಳನ್ನು ಚಲಾಯಿಸಲು ಸರ್ಕಾರ ಮುಂದಾಗಿದೆ. ಇನ್ನೆರೆಡು ವರ್ಷದೊಳಗೆ ದೇಶಾದ್ಯಂತ 10 ವಿಭಿನ್ನ ಮಾರ್ಗಗಳಲ್ಲಿ ಈ ವಾಹನ ಚಲಿಸಲಿವೆ. ಗ್ರೇಟರ್ ನೋಯ್ಡಾ – ದೆಹಲಿ – ಆಗ್ರಾ, ಭುವನೇಶ್ವರ – ಕೊನಾರ್ಕ್ – ಪುರಿ, ಅಹಮದಾಬಾದ್ – ವಡೋದರಾ – ಸೂರತ್, ಸಾಹಿಬಾಬಾದ್ – ಫರಿದಾಬಾದ್ – ದೆಹಲಿ, ಪುಣೆ – ಮುಂಬೈ, ಜಮ್ಶೆಡ್ಪುರ – ಕಳಿಂಗ ನಗರ, ತಿರುವನಂತಪುರಂ – ಕೊಚ್ಚಿ, ಕೊಚ್ಚಿ – ಎಡಪ್ಪಳ್ಳಿ, ಜಾಮ್ನಗರ – ಅಹಮದಾಬಾದ್ ಮತ್ತು NH-16 ವಿಶಾಖಪಟ್ಟಣ – ಬಯ್ಯವರಂ ಮಾರ್ಗಗಳನ್ನು ಆಯ್ಕೆ ಮಾಡಲಾಗಿದೆ.

ಆರಂಭದಲ್ಲಿ 37 ಹೈಡ್ರೋಜನ್ ವಾಹನ: ವಿವಿಧ ರಾಜ್ಯಗಳ ಈ ಮಹಾನ್ ನಗರಗಳಲ್ಲಿ ಮೊದಲ ಹಂತದಲ್ಲಿ ಒಟ್ಟು 37 ಹೈಡ್ರೋಜನ್ ಇಂಧನ ತುಂಬಿದ ಬಸ್ ಮತ್ತು ಟ್ರಕ್ ಗಳು ಸಂಚರಿಸಲಿವೆ. ಪ್ರಾಯೋಗಿಕವಾಗಿ 15 ಹೈಡ್ರೋಜನ್ ಇಂಧನ ಕೋಶ ಆಧಾರಿತ ಮತ್ತು 22 ಹೈಡ್ರೋಜನ್ ಆಂತರಿಕ ಎಂಜಿನ್ ಆಧಾರಿತ ವಾಹನಗಳು ಸೇರಿವೆ.

9 ಹೈಡ್ರೋಜನ್ ಇಂಧನ ಕೇಂದ್ರ ಸ್ಥಾಪನೆ: ಈ 37 ವಾಹನಗಳಿಗೆ ಹೈಡ್ರೋಜನ್ ಇಂಧನ ತುಂಬಲು 9 ಕಡೆ ಹಸಿರು ಹೈಡ್ರೋಜನ್ ಇಂಧನ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಪ್ರಲ್ಹಾದ ಜೋಶಿ ಅವರ ಮಾರ್ಗದರ್ಶನದಂತೆ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಈ ಪಂಚ (5) ಪೈಲಟ್ ಯೋಜನೆಗಳನ್ನು ಅನುಮೋದಿಸಿದೆ.

ಎಂಟು ಪ್ರಮುಖ ಕಂಪನಿಗಳಿಗೆ ಹೊಣೆ: ದೇಶದ ಹತ್ತು ಮಾರ್ಗಗಳಲ್ಲಿ ಹಸಿರು ಹೈಡ್ರೋಜನ್ ಇಂಧನ ಚಲಾಯಿಸುವ 5 ಪೈಲಟ್ ಯೋಜನೆಗಳ ಹೊಣೆಯನ್ನು TATA ಮೋಟಾರ್ಸ್ ಲಿಮಿಟೆಡ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, NTPC, ANERT, ಅಶೋಕ್ ಲೇಲ್ಯಾಂಡ್, HPCL, BPCL ಮತ್ತು IOCL ನಂತಹ ಪ್ರಮುಖ ಕಂಪನಿಗಳಿಗೆ ನೀಡಲಾಗಿದೆ.

ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಶನ್ ಅಡಿ ಸಾರಿಗೆ ವಲಯದಲ್ಲಿ ಪೈಲಟ್ ಯೋಜನೆಗಳ ಅನುಷ್ಠಾನಕ್ಕೆ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಈ ಹಿಂದೆಯೇ ಮಾರ್ಗಸೂಚಿ ಹೊರಡಿಸಿತ್ತು. ವಿವಿಧ ರೀತಿಯ ಹೈಡ್ರೋಜನ್ ಆಧಾರಿತ ವಾಹನಗಳು, ಮಾರ್ಗಗಳು ಮತ್ತು ಇಂಧನ ಕೇಂದ್ರಗಳಿಗೆ ಪ್ರಸ್ತಾವನೆ ಸಹ ಆಹ್ವಾನಿಸಿತ್ತು. ಈ ಕಂಪನಿಗಳ ಕ್ಷಿಪ್ರ ಕಾರ್ಯಾಚರಣೆಗೆ ಗಡುವು ನೀಡಿದ್ದು, ಮುಂದಿನ 18 ರಿಂದ 24 ತಿಂಗಳುಗಳಲ್ಲಿ “ಹಸಿರು ಹೈಡ್ರೋಜನ್ ಚಾಲಿತ ವಾಹನ”ಗಳ ಸಂಚಾರ ಆರಂಭಗೊಳ್ಳುವ ಸಾಧ್ಯತೆಯಿದೆ.

ರಾಷ್ಟ್ರೀಯ ಹೈಡ್ರೋಜನ್ ಮಿಶನ್ ಗೆ ₹19,744 ಕೋಟಿ ಅನುದಾನ: ದೇಶದಲ್ಲಿ 2023ರ ಜನವರಿ 4 ರಂದು ಸ್ಥಾಪಿಸಿದ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಗೆ 2029-30ರ ಹಣಕಾಸು ವರ್ಷದವರೆಗೆ ₹ 19,744 ಕೋಟಿ ಅನುದಾನ ಒದಗಿಸಿದೆ ಮೋದಿ ಸರ್ಕಾರ. ಇದು ಶುದ್ಧ ಇಂಧನದ ಮೂಲಕ ಆತ್ಮನಿರ್ಭರ್ ಆಗುವ ಭಾರತದ ಗುರಿಗೆ ಅನನ್ಯ ಕೊಡುಗೆ ನೀಡಲಿದೆ. ಜಾಗತಿಕ ಶುದ್ಧ ಇಂಧನ ಪರಿವರ್ತನೆಗೆ ಸ್ಫೂರ್ತಿಯಾಗಿ ಈ ಮಿಶನ್ ಕಾರ್ಯ ನಿರ್ವಹಿಸುತ್ತದೆ. ಭಾರತ ಜಾಗತಿಕವಾಗಿ ಹಸಿರು ಹೈಡ್ರೋಜನ್‌ನಲ್ಲಿ ತಂತ್ರಜ್ಞಾನ ಮತ್ತು ಮಾರುಕಟ್ಟೆ ನಾಯಕತ್ವ ವಹಿಸಿಕೊಳ್ಳಲು ಪೂರಕವಾಗಿದೆ.

ಸಾರಿಗೆ ವಲಯದಲ್ಲಿ ಪ್ರಮುಖವಾಗಿ ಬಸ್ ಮತ್ತು ಟ್ರಕ್‌ಗಳಲ್ಲಿ ಹಂತ ಹಂತವಾಗಿ ಹಸಿರು ಹೈಡ್ರೋಜನ್ ಅನ್ನು ಇಂಧನವಾಗಿ ನಿಯೋಜಿಸಿ ಬೆಂಬಲಿಸುವುದು ರಾಷ್ಟ್ರೀಯ ಹೈಡ್ರೋಜನ್ ಮಿಶನ್ ನ ಉದ್ದೇಶಗಳಲ್ಲಿ ಒಂದಾಗಿದೆ. ಅದರಂತೆ ಈಗ ಚಾಲನೆ ನೀಡಲಾಗಿರುವ ಹೈಡ್ರೋಜನ್ ಆಧಾರಿತ ವಾಹನಗಳು ಮತ್ತು ಇಂಧನ ತುಂಬುವ ಕೇಂದ್ರಗಳ ಪೈಲಟ್ ಯೋಜನೆ ಪರಿಣಾಮಕಾರಿ ಆಗಿರಲಿದೆ ಮತ್ತು ತಾಂತ್ರಿಕ ಕಾರ್ಯಸಾಧ್ಯತೆ, ನೈಜ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸಲಿದೆ.

Related Posts

Leave a Reply

Your email address will not be published. Required fields are marked *