Menu

ಬಿಬಿಎಂಪಿ ಇಂದಿನಿಂದ ಗ್ರೇಟರ್‌ ಬೆಂಗಳೂರು: ಆದೇಶ ಜಾರಿ

ಬಿಬಿಎಂಪಿಯಾಗಿದ್ದ ಬೆಂಗಳೂರನ್ನು ಗ್ರೇಟರ್‌ ಬೆಂಗಳೂರನ್ನಾಗಿ ಪರಿವರ್ತನೆ ಮಾಡಿರುವ ಆದೇಶ ಹೊರ ಬಿದ್ದಿದ್ದು, ಆದೇಶದಲ್ಲಿ ಗುರುವಾರ (ಇಂದು)ದಿಂದಲೇ ಗ್ರೇಟರ್‌ ಬೆಂಗಳೂರು (ಜಿಬಿಎ)ಆಡಳಿತ ಜಾರಿಗೆ ಬರುತ್ತಿದೆ . ನಗರ ಪಾಲಿಕೆ, ಮಹಾನಗರ ಪಾಲಿಕೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಾಗಿದ್ದ ಬೆಂಗಳೂರು ಗುರುವಾರದಿಂದ ಗ್ರೇಟರ್‌ ಬೆಂಗಳೂರಾಗುತ್ತಿದೆ.

ಸರ್ಕಾರ ಹೊರಡಿಸಿರುವ ಈ ಆದೇಶದ ಪ್ರತಿಯಂತೆ ಗ್ರೇಟರ್‌ ಬೆಂಗಳೂರು ಆಡಳಿತ ಅಧಿನಿಯಮ, 2024 (2025ರ ಕರ್ನಾಟಕ ಅಧಿನಿಯಮ ಸಂಖ್ಯೆ 36) ರ ಒಂದನೇ ಪ್ರಕರಣದ (3) ನೇ ಉಪ ಪ್ರಕರಣದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವೂ ಈ ಮೂಲಕ ಸದರಿ ಅಧಿನಿಯಮವನ್ನು ಎಲ್ಲಾ ಪ್ರಕರಣಗಳು ಹಾಗೂ ಉಪಬಂಧಗಳು ನಾಳೆಯಿಂದ 15.-05-2025 ರಿಂದ ಜಾರಿಗೆ ಬರತಕ್ಕದೆಂದು ಗೊತ್ತುಪಡಿಸಿದೆ ಎಂದು ತಿಳಿಸಲಾಗಿದೆ.
ರಾಜ್ಯಪಾಲರು ಅನುಮೋದಿಸಿರುವ ಈ ಆದೇಶವನ್ನು ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಅಧಿಸೂಚನೆ ಹೊರಡಿಸಿದ್ದಾರೆ.

ಜಾರಿಯಾಗುತ್ತಿರುವ ಜಿಬಿಎ ಅಡಳಿತ ಕುರಿತ ಮಾಹಿತಿಯನ್ನು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೂ ರವಾನೆ ಮಾಡಲಾಗಿದೆ. ಬಿಬಿಎಂಪಿಯನ್ನು ಏಕಾಏಕಿ ಗ್ರೇಟರ್‌ ಬೆಂಗಳೂರನ್ನಾಗಿ ಮಾರ್ಪಾಡು ಮಾಡಿರುವ ಸರ್ಕಾರದ ಆದೇಶಕ್ಕೆ ಕೆಲವು  ಬಿಬಿಎಂಪಿ ಹಿರಿಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿ ದ್ದಾರೆ.

ಏಕಾಏಕಿ ಬಿಬಿಎಂಪಿಯನ್ನು ಜಿಬಿಎ ಮಾಡಿ ಮಾರ್ಪಾಡು ಮಾಡಿ ಹೊಸ ಬೆಂಗಳೂರು ಕಾಯ್ದೆ ಜಾರಿಗೆ ತಂದಿರುವುದರಿಂದ ನಾವೆಲ್ಲಾ ನಾಳೆಯಿಂದ ಯಾವ ಕಾಯ್ದೆ ಪ್ರಕಾರ ಕರ್ತವ್ಯ ನಿರ್ವಹಿಸಬೇಕು ಎಂದು ಗೊಂದಲದಲ್ಲಿದ್ದೇವೆ ಎಂದು ಅಲವತ್ತುಕೊಂಡಿದ್ದಾರೆ.

ಜಿಬಿಎ ಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ. ಡಿಸಿಎಂ  ಉಪಾಧ್ಯಕ್ಷರಾಗಲಿದ್ದು ಬಿಬಿಎಂಪಿ ಆಡಳಿತಾಧಿಕಾರಿಯಾಗಿರುವ ಹಿರಿಯ ಐಎಎಸ್‌‍ ಅಧಿಕಾರಿ ತುಷಾರ್‌ ಗಿರಿನಾಥ್‌ ಅವರು ಜಿಬಿಎ ಮುಖ್ಯ ಕಾರ್ಯನಿರ್ವಾಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಬಿಬಿಎಂಪಿ ರಚನೆಯಾದ ಮೇಲೆ ಬಿಬಿಎಂಪಿ ಆಯುಕ್ತರನ್ನು ಮುಖ್ಯ ಆಯುಕ್ತರನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಇದೀಗ ಬಿಬಿಎಂಪಿ ಆಡಳಿತಾವಾಧಿ ಇಂದಿಗೆ ಕೊನೆಗೊಳ್ಳುತ್ತಿರುವುದರಿಂದ ಹೊಸದಾಗಿ ಮುಖ್ಯ ಆಯುಕ್ತರಾಗಿ ನಿಯೋಜನೆಗೊಂಡಿರುವ ಮಹೇಶ್ವರ್‌ ರಾವ್‌ ಅವರ ಹುದ್ದೆ  ಏನಾಗಲಿದೆ ಎಂಬುದು ಇನ್ನೂ ಗೊತ್ತಾಗಿಲ್ಲ.

ಜಿಬಿಎ ಅಸ್ಥಿತ್ವಕ್ಕೆ ಬರುತ್ತಿರುವುದರಿಂದ ಭವಿಷ್ಯದಲ್ಲಿ ಬೆಂಗಳೂರನ್ನು ಮೂರು ಪಾಲಿಕೆಗಳನ್ನಾಗಿ ವಿಭಜಿಸಿ ಒಂದೊಂದು ಪಾಲಿಕೆಗೆ ಒಬ್ಬೊಬ್ಬ ಐಎಎಸ್‌‍ ಅಧಿಕಾರಿ ಗಳನ್ನು ಆಯುಕ್ತರನ್ನಾಗಿ ನೇಮಕ ಮಾಡುವ ಸಾಧ್ಯತೆಗಳಿವೆ. 125 ರಿಂದ 150 ವಾರ್ಡ್‌ಗಳನ್ನು ಒಳಗೊಂಡ ಮೂರು ಪಾಲಿಕೆಗಳನ್ನು ರಚನೆ ಮಾಡಿ ಚುನಾವಣೆ ನಡೆಸುವುದು ಸರ್ಕಾರದ ಉದ್ದೇಶವಾಗಿದೆ. ಈ ಪಾಲಿಕೆಗಳಿಗೆ ಜನಪ್ರತಿನಿಧಿಗಳು ಆಯ್ಕೆಯಾದರೂ ಅವರು ತಮ ವ್ಯಾಪ್ತಿಯಲ್ಲಿ ಕೈಗೊಳ್ಳುವ ಯಾವುದೇ ಯೋಜನೆಗಳಿಗೆ ಜಿಬಿಎ ಅನುಮತಿ ಪಡೆದುಕೊಳ್ಳುವುದು ಅನಿವಾರ್ಯವಾಗಲಿದೆ.

Related Posts

Leave a Reply

Your email address will not be published. Required fields are marked *