Menu

ಈ ವರ್ಷ ಗ್ರೇಟರ್ ಬೆಂಗಳೂರು ಅಥಾರಿಟಿ ಸ್ಥಾಪನೆ ಇಲ್ಲ

ಈ ವರ್ಷ ಗ್ರೇಟರ್ ಬೆಂಗಳೂರು ಅಥಾರಿಟಿ ಸ್ಥಾಪನೆ ಇಲ್ಲ ಎಂದು ಹೈಕೋರ್ಟ್​ಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯನ್ನು ಗ್ರೇಟರ್ ಬೆಂಗಳೂರು ಅಥಾರಿಟಿಯನ್ನಾಗಿ ಬದಲಾಯಿಸುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿ, ಕಾರಣಾಂತರಗಳಿಂದ ಮುಂದೂಡುತ್ತಾ ಬರಲಾಗಿತ್ತು.

ಬಿಬಿಎಂಪಿ ಕಟ್ಟಡ ಬೈಲಾ ಉಲ್ಲಂಘನೆ ವಿಚಾರವಾಗಿ ನಡೆದ ವಿಚಾರಣೆ ವೇಳೆ ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿ ಯಾವಾಗ ಎಂದು ಹೈಕೋರ್ಟ್ ಪ್ರಶ್ನಿಸಿತ್ತು. ಈ ವೇಳೆ ಉತ್ತರಿಸಿದ ಎಜಿ ಶಶಿಕಿರಣ್ ಶೆಟ್ಟಿ, ಬಿಬಿಎಂಪಿಯನ್ನು ಐದು ಪಾಲಿಕೆಗಳಾಗಿ ವಿಭಜಿಸಲಾಗುತ್ತಿದೆ. ಐದು ಪಾಲಿಕೆಗಳಿಗೆ ಜನವರಿ ವೇಳೆಗೆ ಚುನಾವಣೆ ಸಾಧ್ಯತೆ ಇದೆ. ಅಲ್ಲಿಯವರೆಗೆ ಬಿಬಿಎಂಪಿ ಆಡಳಿತವೇ ಮುಂದುವರಿಯಲಿದೆ. ಹಾಗಾಗಿ ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿ ಮುಂದೂಡಲಾಗಿದೆ ಎಂದು ಎಜಿ ಸ್ಪಷ್ಟನೆ ನೀಡಿದ್ದಾರೆ.

ಮೇ 5ರಿಂದ ಗ್ರೇಟರ್ ಬೆಂಗಳೂರು ಜಾರಿಗೆ ಬರುವಂತೆ ಸರ್ಕಾರ ಇತ್ತೀಚೆಗೆ ಅಧಿಕೃತ ಅಧಿಸೂಚನೆ ಹೊರಡಿಸಿತ್ತು. ಬೃಹತ್ ಬೆಂಗಳೂರನ್ನು ವಿಭಜಿಸುವ ವರದಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಬಿಬಿಎಂಪಿ ಸುಧಾರಣಾ ಸಮಿತಿ ಅಧ್ಯಕ್ಷ ಬಿ.ಎಸ್. ಪಾಟೀಲ್ ಸಮಿತಿ ನೀಡಿದ್ದ ವರದಿಗೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯ ಸಂಪುಟ ಸಭೆ ಒಪ್ಪಿಗೆ ನೀಡಿತ್ತು.

ಬಿಬಿಎಂಪಿಯನ್ನು 5 ಭಾಗಗಳಾಗಿ ಹಾಗೂ 400 ವಾರ್ಡ್‌ಗಳನ್ನು ವಿಂಗಡಿಸುವ ಪ್ರಸ್ತಾವನೆಯನ್ನು ಕ್ಯಾಬಿನೆಟ್‌ ಅನುಮೋದಿಸಿತ್ತು. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದರೆ ಬೆಂಗಳೂರಿನ ಆಡಳಿತದ ಚಿತ್ರಣವೇ ಬದಲಾಗಲಿದೆ. ಬಿಬಿಎಂಪಿ ವ್ಯಾಪ್ತಿ 708 ಚ.ಕಿ.ಮೀ. ಇದ್ದು, ಜಿಬಿಎ ವ್ಯಾಪ್ತಿ 1400 ಚ.ಕಿ.ಮೀ.ಗೆ ವಿಸ್ತರಣೆಯಾಗಲಿದೆ ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬೆಸ್ಕಾಂ, ಮೆಟ್ರೊ, ಸಂಚಾರ ಪೊಲೀಸ್‌ ಹಾಗೂ ಸಾರಿಗೆ ಇಲಾಖೆ ಸೇರಿದಂತೆ ನಗರಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳೂ ಕಾರ್ಯ ನಿರ್ವಹಿಸಲಿವೆ.

Related Posts

Leave a Reply

Your email address will not be published. Required fields are marked *