ಆಡಳಿತ ವೀಕೆಂದ್ರಿಕರಣ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಖ್ಯೆಯನ್ನು ಹೆಚ್ಚು ಮಾಡುವ ಉದ್ದೇಶದ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024’ವನ್ನು ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಅಂಗೀಕರಿಸಲಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ ಕೆ ಶಿವಕುಮಾರ್, 20 ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024 ಅನ್ನು ಸದನದಲ್ಲಿ ಮಂಡಿಸಿ ದರು. ನಂತರ ಪ್ರತಿಪಕ್ಷಗಳ ಸದಸ್ಯರು ಅಭಿಪ್ರಾಯ, ಆಕ್ಷೇಪ ಕಾರಣಗಳನ್ನು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ಕೊಟ್ಟ ಶಿವಕುಮಾರ್ , ಚರ್ಚೆಯಲ್ಲಿ ವಿರೋಧ ಪಕ್ಷಗಳ ನಾಯಕರು ಅಭಿಪ್ರಾಯ ತಿಳಿಸಿದ್ದಾರೆ. ಅವರ ಅಭಿಪ್ರಾಯವನ್ನು ವಿರೋಧಿಸುವುದಿಲ್ಲ. ಅವರಲ್ಲಿ ಕೆಲವರಿಗೆ ರಾಜಕೀಯ ಇಚ್ಚಾಶಕ್ತಿಯೂ ಇದೆ. ಈಗಿರುವ ವ್ಯವಸ್ಥೆಯಲ್ಲಿಯೇ ಬೆಂಗಳೂರು ನಗರವನ್ನು ಮುನ್ನಡೆಸುವುದು ಅಸಾಧ್ಯ ಎಂದು ಅವರು ಆತ್ಮಸಾಕ್ಷಿ ಮೂಲಕ ಒಪ್ಪಿದ್ದಾರೆ. ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು ಆಡಳಿತಕ್ಕೆ ದೊಡ್ಡ ಸಮಸ್ಯೆ ಎಂಬ ಅರಿವು ಅವರಿಗಿದೆ. ಯಲಹಂಕ, ಕೆಂಗೇರಿ ಉಪನಗರಗಳು ಈಗ ಪಾಲಿಕೆ ವ್ಯಾಪ್ತಿಗೆ ಸೇರಿವೆ. ಹೀಗೆ ಬೆಳೆದಿರುವ ಬೆಂಗಳೂರಿನ ಆಡಳಿತವನ್ನು ನಾವು ವಿಕೇಂದ್ರೀಕರಣ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.
ನಾವು ಬೆಂಗಳೂರನ್ನು ಛಿದ್ರ ಮಾಡಲು ಹೋಗುತ್ತಿಲ್ಲ, ಬೆಂಗಳೂರನ್ನು ಗಟ್ಟಿ ಮಾಡುತ್ತಿದ್ದೇವೆ. ಬೆಂಗಳೂರಿನ ಗೌರವ ಉಳಿಸಬೇಕು. ಮಾಜಿ ಪ್ರಧಾನಿ ವಾಜಪೇಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗಾಗಿ ಬೆಂಗಳೂರಿಗೆ ಬಂದಾಗ, “ಇಷ್ಟು ದಿನ ವಿಶ್ವ ನಾಯಕರು ಮೊದಲು ದೆಹಲಿಗೆ ಬಂದು, ನಂತರ ದೇಶದ ಇತರ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು, ನಂತರ ದೇಶದ ಇತರ ನಗರಗಳಿಗೆ ಹೋಗುತ್ತಿದ್ದಾರೆ” ಎಂದು ಹೇಳಿದ್ದರು. ಇದಕ್ಕೆ ಕಾರಣ ಇಲ್ಲಿನ ಆಡಳಿತ. ನೆಹರೂ ಅವರು ಇಲ್ಲಿಯೇ ಇಸ್ರೋ, ಹೆಚ್ಎಂಟಿ, ಹೆಚ್ಎಎಲ್, ಐಟಿಐ ಆರಂಭಿಸಿದ್ದು ಏಕೆ, ಅನೇಕ ಮಹಾನ್ ಸಂಶೋಧಕರು, ಉದ್ದಿಮೆದಾರರು ಬೆಂಗಳೂರಿನಲ್ಲೇ ಓದಿದ್ದಾರೆ ಎಂದು ವಿವರಿಸಿದರು.
ಕಾರ್ಯಕಾರಿ ಸಮಿತಿಯಲ್ಲಿ ಬೆಂಗಳೂರು ಉಸ್ತುವಾರಿ ಸಚಿವರು ಒಬ್ಬರೇ ಇರುವುದಿಲ್ಲ
ಗ್ರೇಟರ್ ಬೆಂಗಳೂರು ಕಾರ್ಯಾಕಾರಿ ಸಮಿತಿಗೆ ಅಧ್ಯಕ್ಷರನ್ನು ನೇಮಿಸುವ ಬಗ್ಗೆ ಶಾಸಕ ಅಶ್ವಥ ನಾರಾಯಣ ಅವರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಉತ್ತರಿಸಿದ ಡಿಸಿಎಂ ಅವರು, “ಬಿಜೆಪಿ ಸಮಯದಲ್ಲಿ ಬೆಂಗಳೂರಿನವರೇ ಮೂರು ನಾಲ್ಕು ಮಂದಿ ಸಚಿವರು ಇದ್ದರು. ಯಾರು ಜವಾಬ್ದಾರಿ ಹೊರುವವರು, ಕಾರ್ಯಕಾರಿ ಸಮಿತಿಯಲ್ಲಿ ಬೆಂಗಳೂರು ಉಸ್ತುವಾರಿ ಸಚಿವರು ಒಬ್ಬರೇ ಇರುವುದಿಲ್ಲ” ಎಂದರು.
ಡಾಕ್ಟರ್ ಅಶ್ವಥನಾರಾಯಣ ಮರೆತು ಹೋಗಿದ್ದಾರೆ. ಬಿಜೆಪಿ ಅವಧಿಯಲ್ಲಿ ಬೆಂಗಳೂರು ದಕ್ಷಿಣ, ಉತ್ತರಕ್ಕೆ ಉಸ್ತುವಾರಿ ಸಚಿವರಿದ್ದರು. ಬೇಕಿದ್ದರೇ ಅಶೋಕ ಅವರನ್ನೇ ಕೇಳಿಎಂದು ಕೃಷ್ಣಭೈರೇಗೌಡ ಅವರು ಡಿಸಿಎಂ ಮಾತಿಗೆ ಬೆಂಬಲವಾಗಿ ನಿಂತರು.
ಕಾರ್ಯಾಕಾರಿ ಸಮಿತಿಯ ಅಧ್ಯಕ್ಷ ಹುದ್ದೆಗೆ ಬೆಂಗಳೂರು ಅಭಿವೃದ್ದಿ ಸಚಿವರು ‘ಅಥವಾ’ ಇಂತಹವರನ್ನು ನೇಮಕ ಮಾಡಬಹುದು ಎಂದು ಸೇರಿಸಿರುವುದರ ಬಗ್ಗೆ ತಕರಾರು ವ್ಯಕ್ತಪಡಿಸಿದಾಗ, “ಮುಂದಕ್ಕೆ ನಿಮ್ಮ ಅಥವಾ ನಮ್ಮ ಸರ್ಕಾರ ಬರುತ್ತದೆ ಎಂದು ತಿಳಿದುಕೊಳ್ಳಿ. ಆಗ ಬೆಂಗಳೂರಿನಲ್ಲಿ ಯಾರೂ ಗೆಲ್ಲುವುದಿಲ್ಲ. ಆಗ ಏನು ಮಾಡುತ್ತೀರಿ?. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ಆದರೆ ಹೈದರಾಬಾದ್ ಸ್ಥಳೀಯ ಸಂಸ್ಥೆಯಲ್ಲಿ ಒಬ್ಬರೂ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡುವುದು?” ಎಂದು ಕೇಳಿದರು.
ಆರ್ಥಿಕವಾಗಿ ಹಿಂದುಳಿದ ಪಾಲಿಕೆಗಳಿಗೆ ನೆರವು: “ಅಧಿಕಾರ ವಿಕೇಂದ್ರಿಕರಣದ ಉದ್ದೇಶದಿಂದ ಬೆಂಗಳೂರು ಮೂರು ಜಿಲ್ಲೆಯಾಯಿತು, ಉಡುಪಿ ಹಾಗೂ ದಕ್ಷಿಣ ಕನ್ನಡ ಬೇರೆ ಜಿಲ್ಲೆಯಾದವು, ಗದಗ ಹಾಗೂ ಹಾವೇರಿ ಎರಡು ಜಿಲ್ಲೆಗಳಾದವು. ಅಶ್ವತ್ಥ್ ನಾರಾಯಣ ಅವರು ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಬೇಡಿ ಎನ್ನುತ್ತಿದ್ದರು. ಜಿಬಿಎಯಲ್ಲಿ (ಗ್ರೇಟರ್ ಬೆಂಗಳೂರು ಅಥಾರಿಟಿ) ನಾಮನಿರ್ದೇಶಿತ ಸದಸ್ಯರಿರುವುದಿಲ್ಲ. ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ಪರಿಷತ್ತಿನ ಚುನಾಯಿತ ಪ್ರತಿನಿಧಿಗಳು ಮಾತ್ರ ಮತದಾನ ಹಕ್ಕನ್ನು ಹೊಂದಿರುತ್ತಾರೆ” ಎಂದು ಸ್ಪಷ್ಟನೆ ನೀಡಿದರು.
“ನಾವು ಕೂಡ ಆಡಳಿತಾತ್ಮಕ ದೃಷ್ಟಿಯಿಂದಲೇ ಪಾಲಿಕೆ ವಿಭಜನೆ ಮಾಡುತ್ತಿದ್ದೇವೆ. ಇದರಿಂದ ಅನುದಾನದ ಸಮಸ್ಯೆಯಾಗುತ್ತದೆ ಎಂದು ಕೆಲವು ಸದಸ್ಯರು ಪ್ರಸ್ತಾಪಿಸಿದ್ದಾರೆ. ನಾವು ಕೂಡ ಈ ವಿಚಾರವನ್ನು ಆಲೋಚನೆ ಮಾಡಿದ್ದೇವೆ. 75ನೇ ತಿದ್ದುಪಡಿ ಪ್ರಕಾರ ಸ್ಥಳೀಯ ಸಂಸ್ಥೆಗಳ ಹಣವನ್ನು ನಾವು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಜತೆಗೆ ಎಲ್ಲವನ್ನು ಒಟ್ಟಿಗೆ ಸಂಗ್ರಹಿಸಿ ಹಂಚಿಕೆ ಮಾಡಲು ಆಗುವುದಿಲ್ಲ. ಹೀಗಾಗಿ ನಾವು ಸರ್ಕಾರದಿಂದ ಆರ್ಥಿಕವಾಗಿ ದುರ್ಬಲವಾಗಿರುವ ಪಾಲಿಕೆಗಳಿಗೆ ಸಹಾಯ ಮಾಡಬೇಕು ಎಂದು ಈ ಮಸೂದೆಯಲ್ಲಿ ಪ್ರಸ್ತಾಪಿಸಿದ್ದೇವೆ” ಎಂದು ತಿಳಿಸಿದರು.
ಬೆಂಗಳೂರಿನ ಬಗ್ಗೆ ಮುಖ್ಯಮಂತ್ರಿಗಳಿಗೂ ಜವಾಬ್ದಾರಿ ಇರಬೇಕು: ರಾಜ್ಯದ ಜನಸಂಖ್ಯೆಯಲ್ಲಿ ಶೇ. 25 ರಷ್ಟು ಜನಸಂಖ್ಯೆ ಇರುವ ನಗರದ ಬಗ್ಗೆ ಮುಖ್ಯಮಂತ್ರಿ ಸಭೆ ಮಾಡಲೇಬೇಕು. ಮುಖ್ಯಮಂತ್ರಿಗಳಾದವರು ಕೇವಲ ಸಿಟಿ ರೌಂಡ್ಸ್ ಮಾಡಿದರೆ ಸಾಲುವುದಿಲ್ಲ. ಸಭೆ ಮಾಡಬೇಕು. ಹಣಕಾಸು ಹಂಚಿಕೆ ಮಾಡುವವರು ಅವರು. ನಾವು ಇಂದು ಪೆರಿಫೆರಲ್ ರಿಂಗ್ ರಸ್ತೆ, ಟನಲ್ ರಸ್ತೆ ಬಗ್ಗೆ ಮಾತನಾಡುತ್ತೇವೆ. ಅಂದೇ ಪಿಆರ್ ಆರ್ ಯೋಜನೆ ಮಾಡಿದ್ದರೆ 3-4 ಸಾವಿರ ಕೋಟಿಯಲ್ಲಿ ಪೂರ್ಣಗೊಳ್ಳುತ್ತಿತ್ತು. ಇಂದು ಆ ವೆಚ್ಚ 26 ಸಾವಿರ ಕೋಟಿ ರೂ. ಆಗುತ್ತಿದೆ. ಅಂದಿನ ಕಾಲದಲ್ಲಿಯೇ ಮೆಟ್ರೋ ಡಬಲ್ ಡೆಕ್ಕರ್ ಮಾಡಿದ್ದರೆ ಇಂದು ಈ ಪರಿಸ್ಥಿತಿ ಇರುತ್ತಿರಲಿಲ್ಲ. ನೀವು ಬೆಂಗಳೂರಿನ ಯಾವುದೇ ಭಾಗದಲ್ಲಿ ರಸ್ತೆ ಅಗಲೀಕರಣಕ್ಕೆ ಕಟ್ಟಡ ಕೆಡವಬೇಕಾದರೆ ದುಪ್ಪಟ್ಟು ಪರಿಹಾರ ನೀಡಬೇಕು. ಇದೆಲ್ಲವನ್ನು ನೋಡಿ ಯೇ ಸಾಲವಾದರೂ ಸರಿ, ಎಲ್ಲ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೊರಟಿದ್ದೇವೆ. ಸೇನೆಯವರ ಜತೆ ಮಾತನಾಡಿ ಅವರ ಜಾಗವನ್ನು ಪಡೆಯುತ್ತಿದ್ದೇವೆ. ಇದು ಅಷ್ಟು ಸುಲಭವಾದ ಕೆಲಸವಲ್ಲ. ಇದಕ್ಕಾಗಿ ಸರಿಯಾದ ಯೋಜನೆ ಮಾಡಿ, ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಅಗತ್ಯವಿದೆ” ಎಂದು ತಿಳಿಸಿದರು.
“ಬೆಂಗಳೂರಿಗೆ ಹೊಸ ದಿಕ್ಕು ನೀಡಬೇಕು ಎಂದು ನಾವು ಪ್ರಯತ್ನ ಮಾಡುತ್ತಿದ್ದು, ಮುಖ್ಯವಾಗಿ ಇಂಧನ ವಿಚಾರವಾಗಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಅನಿಲ ವಿದ್ಯುತ್ ಉತ್ಪಾದನಾ ಘಟಕ ಮಾಡಿದ್ದು ನಾವು. ಇನ್ನು ನಗರ ಯೋಜನೆ ವಿಚಾರವಾಗಿ ಕೆಲವು ತಿದ್ದುಪಡಿಯನ್ನು ತಂದಿದ್ದೇವೆ. ಬೆಂಗಳೂರನ್ನು ಅಂತರ ರಾಷ್ಟ್ರೀಯ ನಗರವನ್ನಾಗಿ ಮಾಡಿ ಗಟ್ಟಿಗೊಳಿಸಲು ಈ ಮಸೂದೆ ಜಾರಿಗೆ ತರುತ್ತಿದ್ದೇವೆ” ಎಂದು ತಿಳಿಸಿದರು.
ವಿಧೇಯಕ ಮಂಡನೆ ಕುರಿತ ಪ್ರಸ್ತಾವನೆ ವೇಳೆ ಮಾತನಾಡಿದ ಶಿವಕುಮಾರ್, ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದಲ್ಲಿ 74ನೇ ತಿದ್ದುಪಡಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಬೆಂಗಳೂರಿನ ಭವಿಷ್ಯದ ಹಿತದೃಷ್ಟಿಯಿಂದ ಈ ವಿಧೇಯಕ ಪವಿತ್ರವಾದದ್ದು. ಈ ಮಸೂದೆಯಲ್ಲಿ 7 ಪಾಲಿಕೆ ರಚನೆಗೆ ಮುಂದಾಗಿದ್ದೇವೆ. ಭವಿಷ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಶಾಸಕರಿಗೆ ನಿಯಂತ್ರಣ ಇರಬೇಕು, ವಾರ್ಡ್ ಸಮಿತಿಗಳಾ ಗಬೇಕು, ಅಲ್ಲಿ ಜನಪ್ರತಿನಿಧಿಗಳು ಇರಬೇಕು. ಈ ಮಸೂದೆಯಲ್ಲಿ ಎಲ್ಲಾ ಶಾಸಕರು, ಸಂಸದರು ಕೂಡ ಸದಸ್ಯರಾಗಿರುತ್ತಾರೆ. ಮುಖ್ಯಮಂತ್ರಿಗಳು ಇದರ ಅಧ್ಯಕ್ಷ ರಾಗಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಉಪಾಧ್ಯಕ್ಷರಾಗಿರುತ್ತಾರೆ. ಪಾಲಿಕೆ ರಚನೆಯನ್ನು ನಾವು ಯಾವುದೇ ರೀತಿ ಬದಲವಾವಣೆ ಮಾಡುತ್ತಿಲ್ಲ ಎಂದು ತಿಳಿಸಿದರು.
ಪಾಲಿಕೆಯಲ್ಲಿ ಎಲ್ಲಾ ವಿಭಾಗಗಳಿಗೂ ಜವಾಬ್ದಾರಿ: ತೆರಿಗೆ ವಿಚಾರವಾಗಿ ಈ ಹಿಂದೆ ದೆಹಲಿಯಿಂದ ಕೆಲವು ಸೂಚನೆ ನೀಡಲಾಗಿತ್ತು. ಇಲ್ಲಿನ ತೆರಿಗೆಯನ್ನು ನಾವು ಕೆಲವು ತಿದ್ದುಪಡಿ ಮಾಡಿದ್ದೆವು. ಗ್ರೇಟರ್ ಬೆಂಗಳೂರು ಅಥಾರಿಟಿಯಲ್ಲಿ ನಾವು ಪೊಲೀಸರು, ನೀರು ಸರಬರಾಜು, ಬಿಎಂಟಿಸಿ, ಬಿಎಂಆರ್ ಟಿಸಿ, ವಿಪತ್ತು ನಿರ್ವಹಣೆ, ಅಗ್ನಿಶಾಮಕದಳ, ಸಂಚಾರಿ ಪೊಲೀಸ್, ಕೊಳೆಗೇರಿ ಅಭಿವೃದ್ಧಿ ಮಂಡಳಿ, ಬೆಸ್ಕಾಂ, ಬಿಎಂಎಲ್ ಟಿಎ, ಬಿಡಿಎ ಸೇರಿದಂತೆ ಇತರೆ ವಿಭಾಗಗಳ ಆಯುಕ್ತರು, ಎಂ.ಡಿ ಹಾಗೂ ಸಿಇಓಗಳನ್ನು ಒಳಗೊಂಡಿದ್ದೇವೆ. ಇಲ್ಲಿ ಪ್ರತಿಯೊಬ್ಬರಿಗೂ ಹೊಣೆಗಾರಿಕೆ ಹಾಗೂ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.
“ಇನ್ನು ತಜ್ಞರ ಸಮಿತಿಯನ್ನು ರಚಿಸಿದ್ದು, ಆರು ಸಮಿತಿಗಳನ್ನು ನೇಮಿಸಲಾಗಿದೆ. ನಮ್ಮ ಮಸೂದೆಯಲ್ಲಿ 1ರಿಂದ 7 ಪಾಲಿಕೆ ಮಾಡಲು ಅವಕಾಶವಿದೆಯೇ ಹೊರತು, 7ಕ್ಕಿಂತ ಹೆಚ್ಚು ಮಾಡಲು ಅವಕಾಶವಿಲ್ಲ. ಒಂದಾದರೂ ಮಾಡಬಹುದು, ಎರಡು, ಮೂರು, ನಾಲ್ಕು ಹೀಗೆ ಮಾಡಬಹುದು. ಈ ವಿಚಾರದಲ್ಲಿ ಶಾಸಕರ ಅಭಿಪ್ರಾಯವನ್ನು ಪಡೆದು ನಂತರ ತೀರ್ಮಾನ ಮಾಡಲಾಗುವುದು. ಪಾಲಿಕೆ ಆಡಳಿತಾವಧಿ 5 ವರ್ಷ ನಿಗದಿ ಮಾಡಿದ್ದು, ಇಲ್ಲಿ ಪ್ರತಿ ಪಾಲಿಕೆಯಲ್ಲಿ 100ರಿಂದ 150 ಸದಸ್ಯರಿಗೆ ಅವಕಾಶ ಮಾಡಿಕೊಡಲಾಗಿದೆ. ಮೇಯರ್, ಉಪಮೇಯರ್ ಅಧಿಕಾರವಧಿ ಎರಡೂವರೆ ವರ್ಷಗಳಿಗೆ ವಿಸ್ತರಿಸಲಾಗಿದೆ. ಮೇಯರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕಾದರೆ ಆತ ಮೇಯರ್ ಆಗಿ ಆರು ತಿಂಗಳು ಕಳೆದಿರಬೇಕು” ಎಂದು ಹೇಳಿದರು.
ವಿಧಾಸಭಾ ಕ್ಷೇತ್ರ ಮಟ್ಟದ ಸಮಿತಿಗೆ ಆಯಾ ಶಾಸಕರೇ ಮುಖ್ಯಸ್ಥರಾಗಿರುತ್ತಾರೆ. ಇನ್ನು ಈ ಸಮಿತಿಯ ಸದಸ್ಯರಾಗಲು ಆ ಕ್ಷೇತ್ರದ ನಿವಾಸಿಯಾಗಿ, ಆ ಕ್ಷೇತ್ರದ ಮತದಾರನಾಗಿರಬೇಕು. ಆ ಭಾಗದ ಪರಿಷತ್ ಸದಸ್ಯರು, ಕಾರ್ಪೊರೇಟರ್, ಇತರೆ ವಿಭಾಗಗಳ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಒಟ್ಟು ವಿವಿಧ 6 ಸಮಿತಿಗಳನ್ನು ಹೊಂದಿದ್ದು ಇದರ ಕಾಲಾವಧಿ ಎರಡೂವರೆ ವರ್ಷಗಳಿರಬೇಕು. ಈ ಸಮಿತಿಯ ಸದಸ್ಯರ ಸಂಖ್ಯೆಯು ಮುಖ್ಯಸ್ಥ ಸೇರಿದಂತೆ 9-15 ಜನ ಇರಬೇಕು. ವಾರ್ಡ್ ಸಮಿತಿಯ ಕಾಲಾವಧಿ 20 ತಿಂಗಳು ನಿಗದಿ ಮಾಡಲಾಗಿದ್ದು, ಕಾರ್ಪೊರೇಟರ್ ಇದರ ಮುಖ್ಯಸ್ಥರಾಗಿರುತ್ತಾರೆ. ಇಲ್ಲಿ ನಾಲ್ವರು ಸದಸ್ಯರನ್ನು ಜಿಬಿಎ ಮೂಲಕ ನಾಮನಿರ್ದೇಶನ ಮಾಡಲು ಅವಕಾಶವಿರುತ್ತದೆ. ಇನ್ನು ಪಾಲಿಕೆಯಲ್ಲಿ ಈಗಿರುವ ಮೀಸಲಾತಿ ಮುಂದುವರಿಯಲಿದೆ. ಪಾಲಿಕೆ ಅನುದಾನವನ್ನು ಸೆಕ್ಷನ್ 176 ಪ್ರಕಾರ ಅವಕಾಶ ನೀಡಲಾಗುವುದು ಎಂದರು.
ಚರ್ಚೆ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಎಸ್.ಆರ್ ವಿಶ್ವನಾಥ್ ಅವರು ಮಾತನಾಡಿ, ಹಲವು ಪಾಲಿಕೆಗಳನ್ನು ಮಾಡಿದರೆ, ಒಂದು ಪಾಲಿಕೆಯಲ್ಲಿ ಜನರಿಗೆ ಉಚಿತ ಯೋಜನೆಗಳನ್ನು ಕೊಡಲು ಆರಂಭಿಸಿದರೆ, ಆಗ ಈ ಪಾಲಿಕೆ ವ್ಯಾಪ್ತಿಗೆ ಬಾಡಿಗೆದಾರರು ಸ್ಥಳಾಂತರಗೊಂಡರೆ ಆಗ ಮತ್ತೊಂದು ಪಾಲಿಕೆ ಗತಿ ಏನು? ಇಂತಹ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದರು.
ವಿಶ್ವನಾಥ್ ಅವರ ಧರ್ಮಪತ್ನಿ ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಿದ್ದರು. ನಾನು ಕೂಡ ಬೆಂಗಳೂರು ಜಿಲ್ಲಾ ಪರಿಷತ್ ಸದಸ್ಯನಾಗಿದ್ದೆ. ಆಗ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಬೆಂಗಳೂರು ಒಂದೇ ಜಿಲ್ಲೆಯಾಗಿತ್ತು. ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಹೊಸಕೋಟೆ ಸೇರಿದಂತೆ ನಾವೆಲ್ಲರೂ ಬೆಂಗಳೂರಿಗರಾಗಿದ್ದೆವು. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆ, ನಗರ ಜಿಲ್ಲೆ, ರಾಮನಗರ ಜಿಲ್ಲೆಯಾಯಿತು. ಹೀಗೆ ಬೆಂಗಳೂರನ್ನು ಭಾಗ ಮಾಡುವ ಪರಿಸ್ಥಿತಿ ಯಾಕೆ ಬಂದಿತು, ಆಗಿನಂತೆ ಇಡೀ ಜಿಲ್ಲೆಯನ್ನು ಒಂದೇ ಮಾಡಿ ಜಿಲ್ಲಾ ಪಂಚಾಯ್ತಿ ಮಾಡಬಹುದಿತ್ತಲ್ಲವೇ? ಆಡಳಿತಾತ್ಮಕ ಉದ್ದೇಶದಿಂದಲೇ ಇವು ಗಳನ್ನು ವಿಭಜನೆ ಮಾಡಿದ್ದೇವೆ ಅಲ್ಲವೇ? ಎಂದು ಶಿವಕುಮಾರ್ ಸ್ಪಷ್ಟನೆ ನೀಡಿದರು.
ಡಿನೋಟಿಫಿಕೇಶನ್ ಮಾಡಿ, ಸಮಸ್ಯೆಗೆ ಸಿಲುಕುವುದಿಲ್ಲ
ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರು ಮಾತನಾಡಿ, “ಬಜೆಟ್ ನಲ್ಲಿ ಟನಲ್ ರಸ್ತೆ, ಮೇಲ್ಸೇತುವೆ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ. ಬಿಸಿನೆಸ್ ಕಾರಿಡಾರ್ ಮಾಡಲು ಮುಂದಾಗಿದ್ದೀರಿ. ಅಲ್ಲಿ ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚು ಮನೆಗಳಾಗಿವೆ. 10 ವರ್ಷ ಕಳೆದರೆ ಭೂಮಿಯ ಬೆಲೆ ಹೆಚ್ಚಾಗುತ್ತದೆ. ಈ ಬಗ್ಗೆ ಗಮನಹರಿಸಿ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ , ಎಲೆಕ್ಟ್ರಾನಿಕ್ ಸಿಟಿಯಿಂದ ಬನ್ನೇರುಘಟ್ಟ ರಸ್ತೆವರೆಗೂ ನೋಟಿಫಿಕೇಶನ್ ಆಗಿತ್ತು. ನಂತರ ರಸ್ತೆ ಮಾಡ ಲಿಲ್ಲ. ಬಿಡಿಎನಿಂದ ಇದನ್ನು ಡಿಲೀಟ್ ಮಾಡಬೇಕು ಎಂಬ ಮನವಿ ಬಂದಿತು. ಯಾರೂ ಕೂಡ ಇದನ್ನು ಡಿಲೀಟ್ ಮಾಡಿ ಡಿನೋಟಿಫಿಕೇಶನ್ ಮಾಡಲಿಲ್ಲ. ಡಿಲೀಟ್ ಮಾಡಿ ಪ್ಲಾನ್ ಮಾಡಿಕೊಳ್ಳಲು ಅವಕಾಶವನ್ನು ನೀಡಲಿಲ್ಲ. ನಾನಂತೂ ಡಿನೋಟಿಫಿಕೇಶನ್ ಮಾಡುವುದಿಲ್ಲ. ಅವರಿಗೆ ಪರಿಹಾರ ನೀಡಿ, ಇದನ್ನು ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.