Tuesday, February 03, 2026
Menu

ಅನುದಾನ ಮತ್ತು ತೆರಿಗೆ ಹಂಚಿಕೆ: ಕೇಂದ್ರ ಬಜೆಟ್ ಏಕಪಕ್ಷೀಯ ಧೋರಣೆ

ದೇಶದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಈಗ ಮಂಡಿಸಿರುವ ಬಜೆಟ್‌ಗೆ ತಜ್ಞರು ಪೂರ್ಣಾಂಕ ನೀಡಿ ಕೊಂಡಾಡಿರುವುದೇನೋ ಸರಿ. ಆದರೆ ಬಜೆಟ್‌ನಲ್ಲಿ ನೂರಕ್ಕೆ ನೂರರಷ್ಟು ದೇಶದ ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸುವ ರೀತಿಯಲ್ಲಿ ಅನುದಾನ ಮತ್ತು ತೆರಿಗೆ ಹಂಚಿಕೆಯಾಗಿದೆಯೇ ಎಂಬ ಪ್ರಶ್ನೆಗೆ ನೇರ ಉತ್ತರವಂತೂ ಇಲ್ಲ . ಬಜೆಟ್ ಅನುದಾನಕ್ಕಾಗಿ ಬಿಜೆಪಿ ಯೇತರ ರಾಜ್ಯಗಳು ಕೇಂದ್ರದ ಮುಂದೆ ಕೈ ಕಟ್ಟಿ ನಿಂತು ದೇಹಿ ಎನ್ನುವ ಅತಿ ಕೆಟ್ಟ ಪ್ರಜಾತಂತ್ರ ವಿರೋಧಿ ನೀತಿಗೆ ಕೇಂದ್ರ ಸರ್ಕಾರ ನೀರೆರೆಯಬಾರದು.

ದೇಶದ ಆರ್ಥಿಕ ಸನ್ನಿವೇಶ ಮತ್ತದರ ಆಯಾಮ ಬದಲಾಗುತ್ತಿದೆ . ಜಾಗತಿಕ ಮಟ್ಟದ ಹಲವು ಹತ್ತು ವಿಷಯಗಳು ಭಾರತದ ಆರ್ಥಿಕತೆಯ ಮೇಲೆ ನೇರ ಪ್ರಭಾವ ಬೀರುವಂತಹದು ಎಂಬುದು ಆರ್ಥಿಕ ತಜ್ಞರ ಅಭಿಮತ . ಇದೇನೇ ಇರಲಿ. ಸಾಂಪ್ರದಾಯಿಕ  ಬಜೆಟ್ ಮತ್ತು ಅದು ಗಮನಹರಿಸಲೇಬೇಕಾದ ವಲಯಗಳನ್ನು ಹೊರಗಿಟ್ಟು ಜಾಗತಿಕ ಮಾರುಕಟ್ಟೆಯ ತಕ್ಕಡಿಯಲ್ಲಿಟ್ಟು ತೂಗಿ ಇದಕ್ಕೆ ಭಲೇ ಭಲೇ ಎನ್ನುವುದು ಎಷ್ಟರಮಟ್ಟಿಗೆ ಸರಿ ಎಂಬುದು ಪ್ರಶ್ನೆ.

ಒಂಭತ್ತನೆಯ ಬಾರಿಗೆ ದೇಶದ ಆರ್ಥಿಕ ಮಂತ್ರಿ ನಿರ್ಮಲಾ ಸೀತಾರಾಮನ್  ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ್ದು ಸರಿಯಷ್ಟೆ. ಇದು ನಭೂತೋ ನ ಭವಿಷ್ಯತಿ ಅಂತೂ ಅಲ್ಲ ! ಆದರೆ ಕೆಲವರ ದೃಷ್ಟಿಕೋನದಲ್ಲಿ ಸೀತಾರಾಮನ್ ಮಂಡಿಸಿರುವ ಬಜೆಟ್‌ಗೆ ತಜ್ಞರು ಪೂರ್ಣಾಂಕ ನೀಡಿ ಕೊಂಡಾಡಿರುವುದೇನೋ ಸರಿ. ಆದರೆ ಈ ಬಜೆಟ್‌ನಲ್ಲಿ ನೂರಕ್ಕೆ ನೂರರಷ್ಟು ದೇಶದ ಒಕ್ಕೂಟದ ವ್ಯವಸ್ಥೆ ಯನ್ನು ಬಲಪಡಿಸುವ ರೀತಿಯಲ್ಲಿ ಅನುದಾನ ಮತ್ತು ತೆರಿಗೆ ಹಂಚಿಕೆಯಾಗಿದೆಯೇ ಎಂಬ ಪ್ರಶ್ನೆಗೆ ನೇರ ಉತ್ತರವಂತೂ ಇಲ್ಲ ! ಹಿಂದಿನ ಬಜೆಟ್‌ಗಳಲ್ಲಿ ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಬೇಕು , ಬೇಡಗಳಿಗೆ ಗುಲಗಂಜಿಯಷ್ಟೂ ಕಾಳಜಿ ತೋರದ ಕೇಂದ್ರ ಇದ್ದಕ್ಕಿದ್ದಂತೆ ಈ ರಾಜ್ಯಗಳಿಗೆ ಭರಪೂರ ಯೋಜನೆಗಳನ್ನು ಕೇಂದ್ರ ಬಜೆಟ್‌ನಲ್ಲಿ ಘೋಷಣೆಯಾಗುವು ದೆಂದರೆ ಇಂತಹ ಘೋಷಣೆಗಳ ಹಿಂದೆ ಪೊಲಿಟಿಕಲ್ ಅಜೆಂಡಾ ಮತ್ತು ಓಟ್‌ಬ್ಯಾಂಕ್ ತಂತ್ರಗಾರಿಕೆ ಇಲ್ಲವೆನ್ನಲಾದೀತೆ ?

ಹದಿನೈದನೆ ಹಣಕಾಸು ಆಯೋಗವು ಸಲ್ಲಿಸಿರುವ ಶಿಫಾರಸುಗಳು ಜಾರಿಯಾದಲ್ಲಿ, ರಾಜ್ಯಗಳಿಗೆ, ಅದರಲ್ಲಿಯೂ ಬಿಜೆಪಿಯೇತರ ರಾಜ್ಯಗಳಿಗೆ ನ್ಯಾಯ ಸಮ್ಮತ ರೀತಿ ಅನುದಾನ ಲಭಿಸಬೇಕಿದೆ. ಈ ದಿಶೆಯಲ್ಲಿ ಕರ್ನಾಟಕವು ಕಳೆದ ಮೂರು ವರ್ಷಗಳಿಂದ ಕೇಂದ್ರದಿಂದ ಬರಬೇಕಿರುವ ಅನುದಾನಕ್ಕಾಗಿ ಸುಪ್ರೀಂಕೋರ್ಟ್ ಅನ್ನು ಆಶ್ರಯಿಸುವಂತಹ ಸನ್ನಿವೇಶ ನಿರ್ಮಾಣವಾಗಿದೆ ! ಕೇಂದ್ರ ಬಜೆಟ್ ಎಂಬುದು ಏಕಮುಖ ದೃಷ್ಟಿಕೋನವನ್ನು ಹೊಂದಿರಬಾರದು ಮತ್ತು ರಾಜ್ಯಗಳ ಅನುದಾನ ನೀಡಿಕೆ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದು ನ್ಯಾಯಸಮ್ಮತವಲ್ಲ. ಪ್ರತಿ ಬಜೆಟ್‌ನಲ್ಲಿಯೂ ಇಂತಹ ಧೋರಣೆಯು, ಒಕ್ಕೂಟ ಭಾರತದಲ್ಲಿ ಮುಂದೊಂದು ದಿನ ಕೇಂದ್ರ ಮತ್ತು ರಾಜ್ಯಗಳ ನಡುವಣ ಬಹುದೊಡ್ಡ ಸಂಘರ್ಷಕ್ಕೆ ದಾರಿ ಮಾಡಿಕೊಡುವುದೆಬುದನ್ನು ಕೇಂದ್ರ ಮರೆಯವಂತಿಲ್ಲ .

ಕೇಂದ್ರದಿಂದ ರಾಜ್ಯಗಳಿಗೆ ಸಲ್ಲಬೇಕಿರುವ ಅನುದಾನ ಮತ್ತು ತೆರಿಗೆ ಹಂಚಿಕೆ ವಿಚಾರವು ಸುಪ್ರೀಂಕೋರ್ಟ್ ಆದೇಶಗಳ ಮೇಲೆ ತೀರ್ಮಾನವಾಗುವುದು ಸಂಸದೀಯ ಪ್ರಜಾತಂತ್ರದ ನೈಜ ಸಿದ್ದಾಂತ ಮತ್ತು ಮೌಲ್ಯಗಳನ್ನು ಧಿಕ್ಕರಿಸುವವಂತಹ ದುರದೃಷ್ಟಕರ ಸಂಗತಿ ಎನ್ನದೆ ವಿಧಿಯಿಲ್ಲ . ರಾಜ್ಯಗಳ ಜನಸಂಖ್ಯೆ ಪ್ರಮಾಣ ಮತ್ತು ರಾಜ್ಯಗಳ ಅತ್ಯಾವಶ್ಯಕ ಯೋಜನೆಗಳ ಅನುದಾನದ ಹಿನ್ನೆಲೆಯಲ್ಲಿ ಕೇಂದ್ರವಿಂದು ಜೀರೋ ಪಾಲಿಟಿಕ್ಸ್ ನೀತಿಯನ್ನು ಬಹಳ ಶಿಸ್ತಿನಿಂದ ಪಾಲಿಸಬೇಕಿದೆ. ದಶಕಗಳಿಂದಲೂ ಮೋಕ್ಷಗಾಣದ ಭದ್ರಾ ಮೇಲ್ದಂಡೆ ಯೋಜನೆ ಮತ್ತು ಮೇಕೆದಾಟು ಯೋಜನೆ ಗಳಿಗೆ ಕೇಂದ್ರ ಬಜೆಟ್ ಕಳಕಳಿ ಇಲ್ಲ ಎಂಬುದಾದರೆ ಇದನ್ನು ನ್ಯಾಯಸಮ್ಮತ ಎಂದು ಕರೆಯಲಾದೀತೇ? ಒಟ್ಟಿನಲ್ಲಿ ಬಜೆಟ್ ಅನುದಾನಕ್ಕಾಗಿ ಬಿಜೆಪಿಯೇತರ ರಾಜ್ಯಗಳು ಕೇಂದ್ರದ ಮುಂದೆ ಕೈ ಕಟ್ಟಿ ನಿಂತು ದೇಹಿ ಎನ್ನುವ ಅತಿ ಕೆಟ್ಟ ಪ್ರಜಾತಂತ್ರ ವಿರೋಧಿ ನೀತಿಗೆ ಕೇಂದ್ರ ಸರ್ಕಾರ ನೀರೆರೆಯಬಾರದು ಮತ್ತು ಇದಕ್ಕೆ ಕುಮ್ಮಕ್ಕು ನೀಡಲೂ ಬಾರದು.

Related Posts

Leave a Reply

Your email address will not be published. Required fields are marked *