ಚಿಕ್ಕಮಗಳೂರು ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಮದುವೆಗೆ ಮೊದಲೇ ಮೊಮ್ಮಗಳಿಗೆ ಹುಟ್ಟಿದ ಗಂಡು ಮಗುವನ್ನು ಜನಿಸಿದ ಒಂದೇ ನಿಮಿಷಕ್ಕೆ ಅಜ್ಜಿ ಕತ್ತು ಹಿಚುಕಿ ಸಾಯಿಸಿರುವ ಘಟನೆ ಬಹಿರಂಗಗೊಂಡಿದೆ. ಮದುವೆಯಾಗದ ಮೊಮ್ಮಗಳು ಮಗುವಿಗೆ ಜನ್ಮ ನೀಡಿರುವುದು ಹೊರಗೆ ತಿಳಿದರೆ ಕುಟುಂಬದ ಮರ್ಯಾದೆ ಹೋಗುವುದೆಂಬ ಭಯಕ್ಕೆ ಅಜ್ಜಿ ಈ ಕಋತ್ಯ ಎಸಗಿರುವುದಾಗಿ ಹೇಳಲಾಗಿದೆ.
ಮಗುವಿಗೆ ಜನ್ಮನೀಡಿದ ಯುವತಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದಳು, ಕುಟುಂಬದ ಗೌರವದ ದೃಷ್ಟಿಯಿಂದ ವಿಷಯ ಗುಟ್ಟಾಗಿಡಲಾಗಿತ್ತು. 15 ದಿನಗಳ ಹಿಂದೆ ಮನೆಯಲ್ಲೇ ಯುವತಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಹೋಗದೆ ತಂದೆ-ತಾಯಿ ಮತ್ತು ಅಜ್ಜಿಯ ಸಹಾಯದಿಂದ ಮನೆಯಲ್ಲೇ ಹೆರಿಗೆ ಮಾಡಿಸಿಕೊಂಡಿದ್ದಾಳೆ.
ಮಗು ಹುಟ್ಟಿದ ತಕ್ಷಣ ಮನೆಯವರೆಲ್ಲಾ ಸೇರಿ ಮಗುವನ್ನು ಸಾಯಿಸಲು ನಿಧರಿಸಿದ್ದು, ಅಜ್ಜಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಸತ್ತ ಮಗುವನ್ನು ಬ್ಯಾಗ್ನಲ್ಲಿ ತುಂಬಿಸಿಕೊಂಡು ಹೋಗಿ ತಿಪ್ಪೆಯ ಗುಂಡಿಯೊಂದರಲ್ಲಿ ಹೂತಿದ್ದಾರೆ. ಈ ಕೃತ್ಯ ನಡೆದು 15 ದಿನಗಳು ಕಳೆದಿದ್ದವು. ತಿಪ್ಪೆ ಗುಂಡಿಯ ಪಕ್ಕದ ಮನೆಯ ಯುವಕನಿಗೆ ಏನೋ ಹೂತು ಹಾಕಿರುವ ಬಗ್ಗೆ ಅನುಮಾನ ಮೂಡಿ, ಪೊಲೀಸರಿಗೆ ಮಾಹಿತಿ ನೀಡಿದ್ದ. ಲಕ್ಕವಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದಾಗ ಹೂತು ಹಾಕಿದ್ದ ಮಗುವಿನ ಮೃತದೇಹ ಪತ್ತೆಯಾಗಿದೆ.
ಲಕ್ಕವಳ್ಳಿ ಪೊಲೀಸರು ಮಗುವಿನ ತಾಯಿ, ಅಪ್ಪ, ಅಮ್ಮ ಮತ್ತು ಅಜ್ಜಿಯನ್ನು ವಶಕ್ಕೆ ಪಡೆದು, ವಿಚಾರಣೆ ಮುಂದುವರಿಸಿದ್ದಾರೆ. ಸ್ಟಾಪ್ ನರ್ಸ್ ಆಗಿದ್ದ ಯುವತಿ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಮದುವೆಗೆ ಮೊದಲೇ ಮಗು ಮಾಡಿಕೊಂಡಿದ್ದು, ಗರ್ಭಿಣಿ ಎಂಬುದನ್ನು ಗುಟ್ಟಾಗಿಟ್ಟುಕೊಂಡಿದ್ದು ಏಕೆ ಎಂಬ ಮಾತುಗಳು ಪರಿಸರದಲ್ಲಿ ಕೇಳಿ ಬರುತ್ತಿವೆ. ಪೊಲೀಸರ ತನಿಕೆಯಿಂದ ಹೆಚ್ಚಿನ ವಿವರಗಳು ಹೊರ ಬರಬೇಕಿದೆ.


