ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪಾರ್ಲಿ ಎಂಬಲ್ಲಿ ಫಾಸ್ಟ್ ಗಮ್ ರಾಸಾಯನಿಕದ ವಾಸನೆಯನ್ನು ಉಸಿರಿನೊಂದಿಗೆ ಎಳೆದುಕೊಳ್ಳುವ ಚಟಕ್ಕೆ ದಾಸನಾಗಿರುವ ವ್ಯಕ್ತಿ ಚಾಕುವಿನಿಂದ ತನ್ನ ಅಜ್ಜಿ ಹಾಗೂ ಪೋಷಕರ ಮೇಲೆ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಅಜ್ಜಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಅಪ್ಪ ಮತ್ತು ಅಮ್ಮನ ಸ್ಥಿತಿ ಗಂಭೀರವಾಗಿದೆ.
ವ್ಯಸನಕ್ಕೆ ಹಣ ನೀಡಲು ಮನೆಯವರು ನಿರಾಕರಿಸಿದ್ದಕ್ಕೆ ಕ್ರೋಧಗೊಂಡ ಯುವಕ ಪೋಷಕರ ಮೇಲೆ ಹಲ್ಲೆ ಮಾಡಿದ್ದಾನೆ. ಪೋಷಕರ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಅರ್ಬಾಜ್ ರಂಜಾನ್ ಖುರೇಷಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅಜ್ಜಿ ಜುಬೇದಾ ಖುರೇಶಿ ಸ್ಥಳದಲ್ಲೇ ಅಸು ನೀಗಿದ್ದಾರೆ. ಗಾಯಗೊಂಡಿರುವ ಪೋಷಕರನ್ನು ಅಂಬಾಜೋಗೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಆರೋಪಿ ಅರ್ಬಾಜ್ ಕುಟುಂಬ ಸದಸ್ಯರಲ್ಲಿ ಹಣ ಕೇಳಿದ್ದಾನೆ, ನಿರಾಕರಿಸಿದ್ದಕ್ಕೆ ಕ್ರೋಧಗೊಂಡು ಪೋಷಕರು ಹಾಗೂ ಅಜ್ಜಿಗೆ ಇರಿದಿದ್ದಾನೆ. ಆತನನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಈ ಫಾಸ್ಟ್ ಗಮ್ ವಾಸನೆಯನ್ನು ಉಸಿರಿನೊಂದಿಗೆ ಎಳೆದು ಕೊಳ್ಳುವ ಚಟ ಯುವ ಸಮುದಾಯದಲ್ಲಿ ಹೆಚ್ಚುತ್ತಿದೆ. ಪೇಂಟ್ ತಿನ್ನರ್ಗಳು ಹಾಗೂ ಫಾಸ್ಟ್ಗಮ್ನಲ್ಲಿ ಕಂಡು ಬರುವ ಟೌಲೀನ್ ಎಂಬ ವಿಷಕಾರಿ ರಾಸಾಯನಿಕಕ್ಕೆ ಆಕರ್ಷಿತರಾಗುತ್ತಾರೆ. ಇದು ಮೆದುಳಿನ ಕೋಶಗಳಲ್ಲಿ ಕರಗಿ ಭ್ರಮೆಯ ಸ್ಥಿತಿ ರೂಪಿಸುತ್ತದೆ. ಕಿವುಡುತನ, ಮೂತ್ರಪಿಂಡ ಮತ್ತು ಯಕೃತ್ತಿನ ಹಾನಿ ಸೇರಿದಂತೆ ಹಲವು ರೀತಿಯ ನರವೈಜ್ಞಾನಿಕ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತಿದೆ.