ಬಾಗಲಕೋಟೆ: ಮೂರು ದಿನಗಳ ಕಾಲ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯಲ್ಲಿ ನಡೆದ ಚಾಲುಕ್ಯರ ಗತವೈಭವ ಸಾರುವ ಐತಿಹಾಸಿಕ ಚಾಲುಕ್ಯ ಉತ್ಸವ ಬುಧವಾರ ತಡರಾತ್ರಿ ವೈಭವದಿಂದ ತೆರೆಕಂಡಿತು.
ಬಾದಾಮಿಯ ಇಮ್ಮಡಿ ಪುಲಕೇಶಿ ವೇದಿಕೆ, ಪಟ್ಟದಕಲ್ಲಿನ ವಿಕ್ರಮಾದಿತ್ಯ ವೇದಿಕೆ ಹಾಗೂ ಐಹೊಳೆಯ ಜಯಸಿಂಹ ವೇದಿಕೆ ಗತಕಾಲದ ಕಥೆಗಳನ್ನು ಹೇಳುವಂತಿದ್ದವು. ಇಂತಹ ಸ್ಮಾರಕಗಳ ನಡುವೆ ನಾಡಿನ ಖ್ಯಾತ ಕಲಾವಿದರು, ಸ್ಥಳೀಯ ಕಲಾವಿದರು ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದರು.
ಮೊದಲ ದಿನದ ಕಾರ್ಯಕ್ರಮವನ್ನು ಸಿಎಂ ಸಿದ್ಧರಾಮಯ್ಯ ಉದ್ಘಾಟಿಸಿದರು. ಜತೆಗೆ ಇಮ್ಮಡಿ ಪುಲಕೇಶಿ ಅವರ ಪುತ್ಥಳಿಗೆ ಶಿಲಾನ್ಯಾಸ ನೆರವೇರಿಸಿದರು. ಸಂಗೀತ ಸರಿಗಮಪ ಖ್ಯಾತಿಯ ಕಲಾವಿದರಾದ ಹನಮಂತ ಲಮಾಣಿ, ಬಾಳು ಬೆಳಗುಂದಿ, ಸೈಯದ್ ಅಲಿ, ಗಾಯಕ ಸಂಜೀತ್ ಹೆಗ್ಡೆ ಸೇರಿದ್ದ ಜನರಿಗೆ ಸಂಗೀತದ ರಸದೌತಣ ಉಣಬಡಿಸಿದರು.
ಎರಡನೇ ದಿನದ ಕಾರ್ಯಕ್ರಮ ಪಟ್ಟದಕಲ್ಲಿನಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವರನ್ನು ಬಿಟ್ಟು ಉಳಿದ ಯಾವುದೇ ಸಚಿವರು ಉತ್ಸವಕ್ಕೆ ಬರಲಿಲ್ಲ. ಗದಗದ ಅಂಧ ಬಾಲಕರ ನಾಟ್ಯಯೋಗದ ಪೀರಾಮಿಡ್ ಎಲ್ಲರನ್ನು ರೋಮಾಂಚನಗೊಳಿಸಿತು. ರಾತ್ರಿ ನಡೆದ ಶಿವರಾಜ ಕೆಆರ್ ಪೇಟೆ, ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಮತ್ತು ಅವರ ತಂಡ ಸಂಗೀತಕ್ಕೆ ಇಡೀ ಮೈದಾನವೇ ಹುಚ್ಚೆದ್ದು ಕುಣಿಯಿತು. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಜನ್ಯ ಜತೆಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಮೂರನೇ ದಿನ ಐಹೊಳೆಯ ಜಯಸಿಂಹ ವೇದಿಕೆ ನಡೆದ ಸಮಾರೋಪ ಸಮಾರಂಭಕ್ಕೂ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಯಾವೊಬ್ಬ ಸಚಿವರು ಬರಲಿಲ್ಲ. ಅಧಿವೇಶನದ ಹಿನ್ನಲೆಯಲ್ಲಿ ಬಂದಿಲ್ಲ ಎನ್ನುವ ಮಾತುಗಳು ಕೇಳಿಬಂದವು. ನಂತರ ನಡೆದ ಖ್ಯಾತ ಗಾಯಕ ರಘು ದೀಕ್ಷಿತ್ ಅವರ ಗಾಯನ, ಡಾಲಿ ಧನಂಜಯರ ಡೈಲಾಗ್ಗೆ ಎಲ್ಲರೂ ಶಿಳ್ಳೆ ಹಾಕಿ ಕುಣಿದು ಕುಪ್ಪಳಿಸಿದರು.
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು, ಚಾಲುಕ್ಯರ ಇತಿಹಾಸವನ್ನು ಇನ್ನಷ್ಟು ಶ್ರೀಮಂತಗೊಳಿಸುವ ಉದ್ದೇಶದಿಂದ ನಡೆದ ಮೂರು ದಿನಗಳ ಚಾಲುಕ್ಯ ಉತ್ಸವ ವೈಭವದಿಂದ ತೆರೆಕಂಡಿತು. ಆ ಮೂಲಕ ಮುಂದಿನ ಯುವ ಪೀಳಿಗೆಗೆ ಚಾಲುಕ್ಯರ ಗತವೈಭವ ತಿಳಿಸುವ ಕೆಲಸ ನಡೆಯಿತು.


