Menu

ಟಿಬೆಟ್‌ ಬೌದ್ಧ ಧರ್ಮಗುರು ದಲೈ ಲಾಮಾಗೆ ಗ್ರ್ಯಾಮಿ ಪ್ರಶಸ್ತಿ

ಜಾಗತಿಕ ಶಾಂತಿ ದೂತ ಎಂದು ಹೆಸರಾಗಿರುವ ಟಿಬೆಟ್‌ನ ಬೌದ್ಧ ಧರ್ಮಗುರು ದಲೈ ಲಾಮಾ ಅವರು 90ನೇ ವಯಸ್ಸಿನಲ್ಲಿ ಜಗತ್ತಿನ ಅತ್ಯಂತ ಪ್ರತಿಷ್ಠಿತ ಸಂಗೀತ ಪ್ರಶಸ್ತಿಗಳಲ್ಲಿ ಒಂದಾದ ಗ್ರ್ಯಾಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ‘ದಿ ರೆಕಾರ್ಡಿಂಗ್ ಅಕಾಡೆಮಿ’ ಆಯೋಜಿಸಿದ್ದ 68ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ದಲೈ ಲಾಮಾ ಅವರಿಗೆ ‘ಬೆಸ್ಟ್ ಆಡಿಯೋ ಬುಕ್ ನರೇಷನ್ ಅಂಡ್ ಸ್ಟೋರಿಟೆಲ್ಲಿಂಗ್ ರೆಕಾರ್ಡಿಂಗ್’ ವಿಭಾಗದಲ್ಲಿ ಈ ಪ್ರಶಸ್ತಿಯ ಗೌರವ ಲಭಿಸಿದೆ. ಈ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ವ್ಯಕ್ತಿ ಅವರಾಗಿದ್ದಾರೆ.

‘Meditations: The Reflections of His Holiness The Dalai Lama’ಆಲ್ಬಂನಲ್ಲಿ ದಲೈ ಲಾಮಾ ನೀಡಿರುವ ಆಧ್ಯಾತ್ಮಿಕ ಸಂದೇಶಗಳು ಸೇರಿವೆ. ಧ್ಯಾನ, ಅಂತರಂಗದ ಶಾಂತಿ, ಕರುಣೆ, ಆತ್ಮಾವಲೋಕನ ಮತ್ತು ಮಾನವೀಯ ಮೌಲ್ಯಗಳ ಕುರಿತ ಆಳವಾದ ಚಿಂತನೆಗಳು ಇದರಲ್ಲಿವೆ.

ವೇಗದ ಜೀವನಶೈಲಿ, ಒತ್ತಡ, ಆತಂಕ ಮತ್ತು ಮಾನಸಿಕ ಅಶಾಂತಿಯಲ್ಲಿ ನರಳುತ್ತಿರುವ ಜನರಿಗೆ ಈ ಆಡಿಯೋ ಆಲ್ಬಂ ಒಂದು ಮಾರ್ಗದರ್ಶಕದಂತಿದೆ. ಮನಸ್ಸನ್ನು ಹೇಗೆ ಶಾಂತಗೊಳಿಸಿ ಕೊಳ್ಳಬೇಕು, ಕರುಣೆಯ ಮಹತ್ವವೇನು, ಸ್ವಯಂ ಅರಿವು ಹೇಗೆ ಸಾಧ್ಯ ಎಂಬ ಪ್ರಶ್ನೆಗಳಿಗೆ ದಲೈ ಲಾಮಾ ಸರಳ, ಸ್ಪಷ್ಟ ಮತ್ತು ಶಾಂತವಾಗಿ ಉತ್ತರಿಸಿದ್ದಾರೆ.

ಆಡಿಯೋ ಪ್ರಾಜೆಕ್ಟ್‌ಗೆ ಭಾರತದಸರೋದ್ ವಾದಕ ಉಸ್ತಾದ್ ಅಮ್ಮದ್ ಅಲಿ ಖಾನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಅವರ ಧ್ಯಾನಾತ್ಮಕ ಸ್ವರಗಳು, ದಲೈ ಲಾಮಾ ಅವರ ವಾಣಿ ಮತ್ತು ಸಂದೇಶಗಳಿಗೆ ಇನ್ನಷ್ಟು ಗಂಭೀರತೆ, ಭಾವ ಮತ್ತು ಸೌಂದರ್ಯವನ್ನು ನೀಡಿವೆ.

ಭಾರತೀಯ ಶಾಸ್ತ್ರೀಯ ಸಂಗೀತದ ಈ ಸ್ಪರ್ಶ ಜಾಗತಿಕ ಶ್ರೋತೃಗಳ ಗಮನ ಸೆಳೆದಿದ್ದು, ಸಂಗೀತ ವಿಮರ್ಶಕರು ಈ ಸಂಯೋಜನೆಯನ್ನು ಆಧ್ಯಾತ್ಮಿಕ ಮತ್ತು ಸಂಗೀತಾತ್ಮಕ ಸೌಂದರ್ಯದ ಅಪರೂಪದ ಮಿಶ್ರಣ ಎಂದು ಬಣ್ಣಿಸಿದ್ದಾರೆ.

ದಲೈ ಲಾಮಾ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿರುವುದಕ್ಕೆ ದೇಶ, ದೇಶಗಳ ನಾಯಕರು, ಧಾರ್ಮಿಕ ಮುಖಂಡರು, ಕಲಾವಿದರು ಮತ್ತು ಜನ ಸಾಮಾನ್ಯರು ಅಭಿನಂದನೆ ಸಲ್ಲಿಸಿದ್ದಾರೆ.

Related Posts

Leave a Reply

Your email address will not be published. Required fields are marked *