ಕೇಂದ್ರ ಸಚಿವ ಅಮಿತ್ ಶಾ ಅವರ ಆಪ್ತ ಎಂದು ಹೇಳಿಕೊಂಡು ವಂಚಿಸುತ್ತಿದ್ದ ಸುಜಯೇಂದ್ರ ಎಂಬಾತನ ವಿರುದ್ಧ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ಅವರು ನೀಡಿದ ದೂರಿನ ಅನ್ವಯ ವಿಧಾನಸೌಧ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪ್ರಕರಣದ ತನಿಖೆಯನ್ನು ವಿಧಾನಸೌಧ ಠಾಣೆಯಿಂದ ಕೇಸನ್ನು ವಿಜಯನಗರ ಠಾಣೆಗೆ ವರ್ಗಾಯಿಸಲಾಗಿದೆ.
ರಾಜ್ಯಪಾಲರ ನಕಲಿ ಸಹಿ ಮತ್ತು ಲೋಕಭವನದ ಅಧಿಕೃತ ಲೆಟರ್ ಹೆಡ್ ಬಳಸಿಕೊಂಡು ವಂಚನೆ ಎಸಗಿದ್ದಾನೆ ಎಂದು ಹೇಳಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಆತನಿಗೆ ನೋಟಿಸ್ ನೀಡಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆ ವರದಿ ಪ್ರಕಾರ, ಸುಜಯೇಂದ್ರನ ಮನೆಯಲ್ಲಿ ಪತ್ತೆಯಾಗಿರುವ ಪತ್ರಗಳು ಮತ್ತು ಆತನ ವಂಚನೆಯ ಜಾಲ ಗಮನಿಸಿದರೆ ಹಗರಣದ ವ್ಯಾಪ್ತಿ ದೊಡ್ಡದಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ರಾಜ್ಯಪಾಲರ ನಕಲಿ ಸಹಿ, ಲೋಕಭವನದ ನಕಲಿ ಲೆಟರ್ಹೆಡ್ ಬಳಸಿ ಕಾಲೇಜು ಸೀಟು ಕೊಡಿಸುವುದಾಗಿ ಹಲವರಿಗೆ ವಂಚಿಸಿದ್ದ. ಈ ಹಿಂದೆ 2.5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಬಂಧಿಯಾಗಿದ್ದ, ಜಾಮೀನಿನ ಮೇಲೆ ಹೊರಬಂದ ನಂತರ ಹಳೆಯ ಹಗರಣಗಳು ಬಯಲಾಗುತ್ತಿವೆ.
2025ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಪತ್ರ ಬರೆದಿದ್ದ ಸುಜಯೇಂದ್ರ, ರಾಜ್ಯಪಾಲರೇ ಶಿಫಾರಸು ಮಾಡಿದ್ದಾರೆ ಎಂದು ನಂಬಿಸಿ ವಿದ್ಯಾರ್ಥಿಗೆ ಸೀಟ್ ಮಂಜೂರು ಮಾಡುವಂತೆ ಸೂಚಿಸಿದ್ದ ಎಂದು ಹೇಳಲಾಗಿದೆ. ಜಮ್ಮು ಮತ್ತು ಕಾಶ್ಮೀರದ ವೈದ್ಯರೊಬ್ಬರಿಗೆ ತಾನು ಕೇಂದ್ರದಲ್ಲಿ ಪ್ರಭಾವಿ ವ್ಯಕ್ತಿ ಎಂದು ನಂಬಿಸಿ 2.5 ಕೋಟಿ ರೂಪಾಯಿ ವಂಚಿಸಿದ್ದ. ಈ ಪ್ರಕರಣದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಈತನ ಮನೆಯ ಮೇಲೆ ದಾಳಿ ನಡೆಸಿದಾಗ ಕೇಂದ್ರ ಗೃಹ ಸಚಿವಾಲಯ ಮತ್ತು ಲೋಕಭವನದ ಹೆಸರಿನ ಹಲವು ನಕಲಿ ಲೆಟರ್ ಹೆಡ್ ಗಳು ಮತ್ತು ನಕಲಿ ಸೀಲುಗಳು ಪತ್ತೆಯಾಗಿದ್ದವು.
ಸುಜಯೇಂದ್ರನ ಮನೆಯಲ್ಲಿವಿಟಿಯು ಮಾತ್ರವಲ್ಲದೆ, ಇತರ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಬರೆದಿದ್ದಾರೆ ಎನ್ನಲಾದ ಹಲವು ನಕಲಿ ಶಿಫಾರಸು ಪತ್ರಗಳು ಪತ್ತೆಯಾಗಿವೆ. ಮೆಡಿಕಲ್, ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕೋಟಾದಲ್ಲಿ ಸೀಟು ಕೊಡಿಸಲು ಇವುಗಳನ್ನು ಬಳಸಲಾಗಿದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಜಮ್ಮು-ಕಾಶ್ಮೀರದ ವೈದ್ಯರ ಪ್ರಕರಣ ಹೊರಬಂದ ಮೇಲೆ ಅನೇಕರು ದೂರು ನೀಡಲು ಮುಂದೆ ಬರುತ್ತಿದ್ದಾರೆ. ಕೇಂದ್ರ ಸಚಿವರ ಹೆಸರು ಬಳಸುತ್ತಿದ್ದರಿಂದ ಅನೇಕ ಪೋಷಕರು ನಂಬಿ ಲಕ್ಷ ಲಕ್ಷ ಹಣವನ್ನು ನೀಡಿದ್ದಾರೆ. ಯಾವುದೇ ಪತ್ರವಿಲ್ಲದೆ ಸೀಟು ಮಂಜೂರು ಮಾಡುವುದು ಸುಲಭವಲ್ಲ. ವಿಶ್ವವಿದ್ಯಾಲಯಗಳ ಅಥವಾ ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ಸಹಕರಿಸಿದ್ದಾರೆಯೇ, ನಕಲಿ ಪತ್ರಗಳನ್ನು ಪರಿಶೀಲಿಸದೆ ಸೀಟು ನೀಡಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಸುಜಯೇಂದ್ರ ಹೆಚ್.ಎನ್ ರಾಜ್ಯಪಾಲರ ಸಹಿಯನ್ನು ನಕಲಿ ಸಹಿ ಮಾಡಿ ರಾಜ್ಯಪಾಲರ ಕಾರ್ಯಾಲಯದ ಅಧಿಕೃತ ಪತ್ರದ ಆದೇಶವನ್ನು ಅನಧಿಕೃತವಾಗಿ ಜೂನ್ 2025 ರಲ್ಲಿ ವಿ.ಟಿ.ಯು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಪತ್ರ ನೀಡಿರುವುದು ಕಂಡುಬಂದಿದೆ. ಅಧಿಕೃತ ಲೆಟರ್ ಹೆಡ್ನ ದುರುಪಯೋಗ ಮತ್ತು ನಕಲಿ ಸಹಿಯು ಗಂಭೀರ ಅಪರಾಧವಾಗಿದ್ದು, ಇದರಿಂದ ಕಾರ್ಯಾಲ ಯಕ್ಕೆ ಆಡಳಿತಾತ್ಮಕವಾಗಿ ಮತ್ತು ಕಾನೂನು ಬದ್ಧ ಹಾಗೂ ಪ್ರತಿಷ್ಠೆಗೆ ಹಾನಿ ಉಂಟು ಮಾಡಿರುವ ವ್ಯಕ್ತಿಯ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ವಿವರಿಸಲಾಗಿದೆ.


