ಬೆಂಗಳೂರು: ಅಭಿವೃದ್ಧಿ ಶೂನ್ಯ ಆಡಳಿತ, ಸಾಲು ಸಾಲು ಭ್ರಷ್ಟಾಚಾರ ಹಗರಣಗಳು ಹಾಗೂ ಆಡಳಿತಾತ್ಮಕ ವೈಫಲ್ಯವನ್ನು ಮರೆಮಾಚಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವ ರಾಜ್ಯಪಾಲರ ಭಾಷಣವನ್ನು ರಾಜಕೀಯ ಅಸ್ತ್ರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, “ರಾಜ್ಯಪಾಲರು ಕಾಂಗ್ರೆಸ್ ಸರ್ಕಾರದ ವಕ್ತಾರರಲ್ಲ; ಅವರು ಸಂವಿಧಾನದ ರಕ್ಷಕರು. ಅವರ ಘನತೆಗೆ ಧಕ್ಕೆ ತರುವ ಮೂಲಕ ಕಾಂಗ್ರೆಸ್ ಸರ್ಕಾರ ಸಂವಿಧಾನ ಮತ್ತು ಫೆಡರಲ್ ವ್ಯವಸ್ಥೆಯ ಮೇಲೆ ನೇರ ದಾಳಿ ನಡೆಸುತ್ತಿದೆ” ಎಂದು ಹೇಳಿದರು.
ಸರ್ಕಾರದ ಪಠ್ಯಕ್ಕೆ ರಾಜ್ಯಪಾಲರು ಯಾಂತ್ರಿಕವಾಗಿ ಬದ್ಧರಾಗಬೇಕಿಲ್ಲ
“ಭಾರತದ ಸಂವಿಧಾನದ ವಿಧಿ 175 ಮತ್ತು 176ರ ಅಡಿಯಲ್ಲಿ ರಾಜ್ಯಪಾಲರಿಗೆ ವಿಧಾನಸಭೆ ಮತ್ತು ವಿಧಾನಪರಿಷತ್ತನ್ನು ಉದ್ದೇಶಿಸಿ ಭಾಷಣ ಮಾಡುವ ಸ್ಪಷ್ಟ ಅಧಿಕಾರವಿದೆ. ಆದರೆ ಸರ್ಕಾರ ತಯಾರಿಸಿದ ಪಠ್ಯದಲ್ಲಿರುವ ಪ್ರತಿಯೊಂದು ಪದವನ್ನೂ ರಾಜ್ಯಪಾಲರು ಕಡ್ಡಾಯವಾಗಿ ಓದಲೇಬೇಕು ಎಂಬ ನಿಯಮ ಸಂವಿಧಾನದಲ್ಲಿಯೂ ಇಲ್ಲ, ವಿಧಾನಸಭೆ ಅಥವಾ ವಿಧಾನಪರಿಷತ್ತಿನ ನಿಯಮಗಳಲ್ಲಿಯೂ ಇಲ್ಲ” ಎಂದು ಅಶೋಕ್ ಸ್ಪಷ್ಟಪಡಿಸಿದರು.
ಸಂವಿಧಾನದ ವಿಧಿ 163ರ ಪ್ರಕಾರ ರಾಜ್ಯಪಾಲರು ಸಾಮಾನ್ಯವಾಗಿ ಸಚಿವ ಸಂಪುಟದ ಸಲಹೆಯಂತೆ ಕಾರ್ಯನಿರ್ವಹಿಸಬೇಕಾದರೂ, ಅವರಿಗೆ ನಿರ್ದಿಷ್ಟ ವಿವೇಚನಾಧಿಕಾರವನ್ನೂ ಸಂವಿಧಾನವೇ ನೀಡಿದೆ. ಸರ್ಕಾರ ತಯಾರಿಸಿದ ಭಾಷಣದಲ್ಲಿ ಅಸಹ್ಯಕರ, ದ್ವೇಷಪೂರಿತ ಅಥವಾ ಸಂವಿಧಾನ ವಿರೋಧಿ ಅಂಶಗಳಿದ್ದರೆ, ಅವನ್ನು ಓದದೇ ಬಿಡುವುದು ರಾಜ್ಯಪಾಲರ ಸಂವಿಧಾನಾತ್ಮಕ ಹಕ್ಕು ಎಂದು ಅವರು ಹೇಳಿದರು.
“ಸರ್ಕಾರದ ಸುಳ್ಳಿನ ಕಂತೆಗೆ ರಾಜ್ಯಪಾಲರು ಧ್ವನಿಯಾಗಬೇಕು ಎಂಬ ಕಡ್ಡಾಯ ನಿಯಮವನ್ನು ಕಾಂಗ್ರೆಸ್ ತನ್ನದೇ ಸಂವಿಧಾನದಲ್ಲಿ ಬರೆದುಕೊಂಡಿದ್ದರೆ ಬೇರೆ ಮಾತು. ಆದರೆ ಭಾರತದ ಸಂವಿಧಾನದಲ್ಲಿ ಅಂತಹ ಯಾವುದೇ ವಿಧಿಯಿಲ್ಲ” ಎಂದು ಕಿಡಿಕಾರಿದರು.
ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕಾಂಗ್ರೆಸ್ ರಾಜಕೀಯ
ರಾಜ್ಯಪಾಲರು ಕೇಂದ್ರ ಮತ್ತು ರಾಜ್ಯಗಳ ನಡುವಿನ ಮಹತ್ವದ ಸಂವಿಧಾನಾತ್ಮಕ ಸೇತುವೆ ಎಂದು ಹೇಳಿದ ಅಶೋಕ್, ಕಾಂಗ್ರೆಸ್ ಸರ್ಕಾರವು ಉದ್ದೇಶಪೂರ್ವಕವಾಗಿ ಆ ಸೇತುವೆಯನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ನೀತಿ ಆಯೋಗದ ಸಭೆಗಳಿಗೆ ಗೈರು, ಜಿಎಸ್‌ಟಿ ಕೌನ್ಸಿಲ್ ಸಭೆಗಳಿಂದ ದೂರ ಉಳಿಯುವಿಕೆ, ಹಣಕಾಸು ಆಯೋಗದ ಮುಂದೆ ರಾಜ್ಯದ ಹಿತಾಸಕ್ತಿಯನ್ನು ಸಮರ್ಥವಾಗಿ ಮಂಡಿಸದಿರುವುದು, ಈ ಮೂಲಕ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ತಾವೇ ತಡೆದು, ನಂತರ ಕೇಂದ್ರದ ಮೇಲೆ ಆರೋಪ ಮಾಡುವುದೇ ಕಾಂಗ್ರೆಸ್‌ನ ರಾಜಕೀಯ ತಂತ್ರ ಎಂದು ಹೇಳಿದರು.
ಎಟಿಎಂ ಸರ್ಕಾರಕ್ಕೆ ಅಭಿವೃದ್ಧಿಗಿಂತ ರಾಜಕೀಯವೇ ಮುಖ್ಯ
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಆಡಳಿತಕ್ಕಿಂತ ರಾಜಕೀಯ ಸಂಘರ್ಷವನ್ನೇ ಸಾಧನೆಯೆಂದು ಬಿಂಬಿಸುತ್ತಿದೆ ಎಂದು ಅಶೋಕ್ ಆರೋಪಿಸಿದರು.
*ಅಭಿವೃದ್ಧಿ ಕುಂಠಿತ:*ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಗುತ್ತಿಗೆದಾರರಿಗೆ ಪಾವತಿ ಮಾಡಲು ಸರ್ಕಾರದ ಬಳಿ ಹಣವಿಲ್ಲ.
ಭ್ರಷ್ಟಾಚಾರದ ಸರಮಾಲೆ: ಮುಡಾ ಹಗರಣ, ವಾಲ್ಮೀಕಿ ನಿಗಮದ ಹಣ ವರ್ಗಾವಣೆ, 40% ಕಮಿಷನ್ ಆರೋಪಗಳು ಸರ್ಕಾರವನ್ನು ಜನರ ಮುಂದೆ ನಗ್ನಗೊಳಿಸಿವೆ.
ಗಮನ ಬೇರೆಡೆ ಸೆಳೆಯುವ ಯತ್ನ: ಈ ಹಗರಣಗಳಿಂದ ಜನರ ಗಮನ ತಪ್ಪಿಸಲು ರಾಜ್ಯಪಾಲರ ಭಾಷಣವನ್ನು ವಿವಾದಕ್ಕೆ ಎಳೆದು ತರುತ್ತಿದ್ದಾರೆ.
“ಚುನಾಯಿತ ಸರ್ಕಾರಕ್ಕೆ ಜನರ ಸೇವೆ ಮಾಡುವ ಮ್ಯಾಂಡೇಟ್ ಇದೆಯೇ ಹೊರತು, ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸುವ ಅಧಿಕಾರವಿಲ್ಲ” ಎಂದು ಅಶೋಕ್ ಕಿಡಿಕಾರಿದರು.
ಎನ್‌ಇಪಿ ರದ್ಧತಿ, ತೆರಿಗೆ ಹಂಚಿಕೆ, ಅನುದಾನ ವಿಚಾರಗಳಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣದ ಪಠ್ಯದಲ್ಲಿ ಹಸಿ ಸುಳ್ಳುಗಳನ್ನು ಸೇರಿಸಿದೆ. ಸುಳ್ಳು ಹೇಳದಿರುವುದು ರಾಜ್ಯಪಾಲರ ಪರಮಾಧಿಕಾರ. ಅದನ್ನು ಅವರು ಬಳಸಿದಾಗ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸುವುದು ಅವರ ರಾಜಕೀಯ ಹತಾಶೆಯನ್ನು ತೋರಿಸುತ್ತದೆ ಎಂದು ಹೇಳಿದರು.
“ಈ ಸರ್ಕಾರ ಇಂದು ದಿವಾಳಿಯ ಅಂಚಿನಲ್ಲಿ ನಿಂತಿದೆ. ಜನರ ಮುಂದೆ ಹೋಗಲು ಮುಖವಿಲ್ಲದೆ, ರಾಜ್ಯಪಾಲರ ಉನ್ನತ ಹಾಗೂ ಗೌರವಾನ್ವಿತ ಹುದ್ದೆಯನ್ನು ರಾಜಕೀಯ ಜಿದ್ದಾಜಿದ್ದಿಗೆ ಎಳೆದು ತರುತ್ತಿರುವುದು ಸಂವಿಧಾನಕ್ಕೆ ಮಾಡುತ್ತಿರುವ ಅವಮಾನ” ಎಂದು ಆರ್. ಅಶೋಕ್ ಎಚ್ಚರಿಸಿದರು.
ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ಬಳಸಿರುವುದು ಸಂಪೂರ್ಣವಾಗಿ ಸಂವಿಧಾನಸಮ್ಮತ. ಇದನ್ನು ಪ್ರಶ್ನಿಸುವ ಕಾಂಗ್ರೆಸ್ ಸರ್ಕಾರ ಮೊದಲು ಸಂವಿಧಾನ ಓದಲಿ, ಅರ್ಥಮಾಡಿಕೊಳ್ಳಲಿ ಎಂದು ಅವರು ತೀವ್ರವಾಗಿ ಹೇಳಿದರು.


