Menu

ಅರಮನೆ ಮೈದಾನದ ಭೂಭಾಗಕ್ಕೆ ಟಿಡಿಆರ್‌ ನಿರಾಕರಣೆ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ

governer thawar chand gehlot

ಬೆಂಗಳೂರು:ಅರಮನೆ ಮೈದಾನದ ಭೂಭಾಗಕ್ಕೆ ಟಿಡಿಆರ್‌ ನೀಡಲು ನಿರಾಕರಿಸುವ ಸಂಬಂಧಪಟ್ಟಂತೆ ರೂಪಿಸಲಾಗಿರುವ ವಿಧೇಯಕಕ್ಕೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಸಹಿ ಹಾಕಿದ್ದಾರೆ.

ರಾಜ್ಯಪಾಲರ ಸಹಿಯ ಬೆನ್ನಲ್ಲೇ ರಾಜ್ಯಸರ್ಕಾರ ಶೀಘ್ರದಲ್ಲೇ ಈ ಬಗ್ಗೆ ಅಧಿಸೂಚನೆ ಹೊರಡಿಸಲಿದ್ದು, ನಂತರ ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಮಾಡಲು ತಯಾರಿ ನಡೆಸಿದೆ.

ಬೆಂಗಳೂರು ಅರಮನೆ ಮೈದಾನದಲ್ಲಿರುವ 472 ಎಕರೆ 16 ಗುಂಟೆ ಭೂ ಪ್ರದೇಶದ ಪೈಕಿ 15 ಎಕರೆ 29 ಗುಂಟೆಯನ್ನು ರಸ್ತೆ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲು ರಾಜ್ಯಸರ್ಕಾರ ಮುಂದಾಗಿತ್ತು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜಮನೆತನದ ವಾರಸುದಾರರು ಪರಿಹಾರ ರೂಪದಲ್ಲಿ ಟಿಡಿಆರ್‌ ನೀಡುವಂತೆ ಆಗ್ರಹಿಸಿದರು.ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ರಸ್ತೆ ಅಭಿವೃದ್ಧಿಗೆ ಭೂ ಸ್ವಾಧೀನ ಪಡಿಸಿಕೊಳ್ಳುವ ಜಾಗಕ್ಕೆ 3 ಸಾವಿರ ಕೋಟಿ ರೂ. ಮೌಲ್ಯದ ಟಿಡಿಆರ್‌ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು.

ಕೋರ್ಟ್‌ ನಿರ್ದೇಶನದ ಪ್ರಕಾರ ರಾಜ್ಯಸರ್ಕಾರ ಈಗಾಗಲೇ ಟಿಡಿಆರ್‌ ಪತ್ರವನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ನಡುವೆ ಟಿಡಿಆರ್‌ಗಾಗಿ ನಿಗದಿಯಾಗಿರುವ ಮೌಲ್ಯ ದುಬಾರಿ ಎಂಬ ಕಾರಣಕ್ಕೆ ರಾಜ್ಯಸರ್ಕಾರ ಬೆಂಗಳೂರು ಅರಮನೆ ಭೂ ಬಳಕೆ ಮತ್ತು ನಿಯಂತ್ರಣ ವಿಧೇಯಕ 2025ನ್ನು ರೂಪಿಸಿ ವಿಧಾನಮಂಡಲದ ಉಭಯಸದನದಲ್ಲಿ ಅಂಗೀಕಾರ ಪಡೆದುಕೊಂಡಿದೆ.

1966 ರಲ್ಲೇ ಆಗಿನ ಸರ್ಕಾರ ಬೆಂಗಳೂರು ಅರಮನೆ ಅರ್ಜನೆ ಮತ್ತು ವರ್ಗಾವಣೆ ಅಧಿನಿಯಮವನ್ನು ರೂಪಿಸಿ ಸುಮಾರು 11 ಕೋಟಿ ರೂ. ಪರಿಹಾರ ಠೇವಣಿ ಮಾಡುವ ಮೂಲಕ ಅರಮನೆ ಮೈದಾನವನ್ನು ಸ್ವಾಧೀನಪಡಿಸಿಕೊಂಡಿದೆ.

ಈ ವಿಧೇಯಕವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಸುಪ್ರೀಂಕೋರ್ಟ್‌ ಕೂಡ ವಿಧೇಯಕಕ್ಕೆ ತಡೆಯಾಜ್ಞೆ ನೀಡಿಲ್ಲ ಎಂದು ಸಚಿವ ಎಚ್‌.ಕೆ.ಪಾಟೀಲ್‌ ವಿಧಾನಸಭೆ, ವಿಧಾನಪರಿಷತ್‌ಗೆ ವಿವರಣೆ ನೀಡಿದ್ದರು.ಈ ಮಸೂದೆ ಪ್ರಕಾರ ಅರಮನೆಯ ಮೈದಾನದ ಮಾಲೀಕತ್ವ ರಾಜ್ಯಸರ್ಕಾರಕ್ಕಾಗಿದೆ ಎಂಬುದು ಪಾಟೀಲರ ವಾದವಾಗಿತ್ತು.

ಇತ್ತೀಚೆಗೆ ರಸ್ತೆ ನಿರ್ಮಾಣಕ್ಕೆ 15.29 ಎಕರೆಯನ್ನು ಬಳಸಿಕೊಳ್ಳಲು ಮುಂದಾದಾಗ ರಾಜಮನೆತನದ ವಾರಸುದಾರರು ತಗಾದೆ ತೆಗೆದಿದ್ದಾರೆ. ಮಾಲೀಕತ್ವದ ವಿವಾದ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥವಾಗದ ಹೊರತು ಈ ಜಾಗ ತಮದಾಗಿದೆ ಎಂಬುದು ಅವರ ವಾದವಾಗಿತ್ತು. ನ್ಯಾಯಾಲಯ ಕೂಡ ಟಿಡಿಆರ್‌ ನೀಡಲು ನಿರ್ದೇಶಿಸಿದ್ದರಿಂದಾಗಿ ರಾಜ್ಯಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು.

ಒಂದು ವೇಳೆ ನ್ಯಾಯಾಲಯದ ನಿರ್ದೇಶನದ ಮೇರೆಗೆ 3 ಸಾವಿರ ಕೋಟಿ ರೂ.ಗಳ ಟಿಡಿಆರ್‌ ಪಾವತಿ ಮಾಡಿದರೆ ಭೂಸ್ವಾಧೀನ ಹಾಗೂ ನಿರ್ಮಾಣದ ವೆಚ್ಚ ಸೇರಿ ಜಗತ್ತಿನಲ್ಲೇ ದುಬಾರಿ ವೆಚ್ಚದ ರಸ್ತೆ ಎಂಬ ವ್ಯಾಖ್ಯಾನಕ್ಕೆ ಬಳ್ಳಾರಿ ರಸ್ತೆ ಒಳಗಾಗಲಿದೆ. ಹೀಗಾಗಿ ನ್ಯಾಯಾಲಯದ ಪ್ರಕರಣ ಇತ್ಯರ್ಥವಾಗದೇ ಇರುವವರೆಗೂ 15.29 ಎಕರೆಯನ್ನು ಬಳಕೆ ಮಾಡಿಕೊಳ್ಳುವುದಿಲ್ಲ. ಕಂಟೋನೆಂಟ್‌ ಸಮೀಪದ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕಾಗಿ ಈಗಾಗಲೇ ಬಳಕೆ ಮಾಡಿಕೊಂಡಿರುವ 12.17 ಚ.ಮೀ. ಜಾಗಕ್ಕೆ 49 ಕೋಟಿ ರೂ. ಮೌಲ್ಯದ ಟಿಡಿಆರ್‌ ಪಾವತಿಸಲಾಗಿದೆ.

ಉಳಿದಂತೆ 15 ಎಕರೆಯಲ್ಲಿ ರಸ್ತೆ ನಿರ್ಮಿಸದೇ ಇರುವುದರಿಂದ ಈಗಾಗಲೇ ವಿತರಿಸಲಾಗಿರುವ ಟಿಡಿಆರ್‌ ಸರ್ಟಿಫಿಕೇಟ್‌ಗಳನ್ನು ರಾಜಮನೆತನಕ್ಕೆ ನೀಡಬಾರದು ಎಂದು ಸುಪ್ರೀಂಕೋರ್ಟ್‌ಗೆ ರಾಜ್ಯಸರ್ಕಾರ ಮನವಿ ಮಾಡಿಕೊಳ್ಳಲಿದೆ.

ಒಂದು ವೇಳೆ ಟಿಡಿಆರ್‌ ಸರ್ಟಿಫಿಕೇಟ್‌ಗಳನ್ನು ರಾಜಮನೆತನಕ್ಕೆ ಕೊಟ್ಟರೆ ಅವರು ಅದನ್ನು ಬೇರೆಯವರಿಗೆ ಪರಭಾರೆ ಮಾಡುತ್ತಾರೆ. ಈ ರೀತಿ ವಿಲೇವಾರಿಯಾದ ಟಿಡಿಆರ್‌ನ್ನು ಮತ್ತೆ ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂದು ರಾಜ್ಯಸರ್ಕಾರ ಆತಂಕ ವ್ಯಕ್ತಪಡಿಸಿದೆ.
ವಿಧಾನಮಂಡಲದಲ್ಲಿ ನಡೆದ ಚರ್ಚೆಯಲ್ಲಿ ಸಚಿವ ಎಚ್‌.ಕೆ.ಪಾಟೀಲ್‌, ರಸ್ತೆ ನಿರ್ಮಾಣಕ್ಕೆ ಗುರುತಿಸಲಾಗಿದ್ದ 15.29 ಎಕರೆಗೆ 3 ಸಾವಿರ ಕೋಟಿ ರೂ.ಗಳ ಟಿಡಿಆರ್‌ ನೀಡಿದರೆ, ಪ್ರತಿ ಎಕರೆಗೆ 200 ಕೋಟಿ ರೂ.ಗಳಷ್ಟು ಮೌಲ್ಯವಾಗುತ್ತದೆ. ಇಷ್ಟು ಹಣ ಖರ್ಚು ಮಾಡಿ ರಸ್ತೆ ನಿರ್ಮಿಸುವುದು ರಾಜ್ಯದ ಬೊಕ್ಕಸಕ್ಕೆ ಆರೋಗ್ಯಕರವಲ್ಲ ಎಂದು ಹೇಳಿದರು.ಬೆಂಗಳೂರು ಅರಮನೆ ಭೂಬಳಕೆ ಮತ್ತು ನಿಯಂತ್ರಣ ವಿಧೇಯಕವನ್ನು ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಅಂಗೀಕರಿಸಲಾಗಿದೆ.

ರಾಜ್ಯಪಾಲರ ಅಂಕಿತವೂ ದೊರೆತಿರುವುದರಿಂದ ಈ ಕಾಯ್ದೆಯನ್ನು ಮುಂದಿಟ್ಟು ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುವ ಮೂಲಕ ನ್ಯಾಯಾಂಗ ನಿಂದನೆಯ ಕತ್ತಿಯಿಂದ ರಾಜ್ಯಸರ್ಕಾರ ಪಾರಾಗುವ ಪ್ರಯತ್ನ ನಡೆಸಿದೆ.

Related Posts

Leave a Reply

Your email address will not be published. Required fields are marked *