Saturday, February 22, 2025
Menu

ನೀರಾವರಿ ವಿಚಾರದಲ್ಲಿ ಮಾಜಿ ಪ್ರಧಾನಿ ಹೆಚ್‌ಡಿಡಿಗೆ ಸರ್ಕಾರ ಸಂಪೂರ್ಣ ಬೆಂಬಲ: ಸಿಎಂ

ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪಕ್ಷಾತೀತವಾಗಿ ಹೋರಾಡಲು ಸಿದ್ಧ ಎಂಬ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೇಳಿಕೆಯನ್ನು ಸ್ವಾಗತಿಸುತ್ತೇನೆ.  ನೆಲ-ಜಲ-ಭಾಷೆ ವಿಚಾರದಲ್ಲಿ ನಾನು ಸದಾ ಕನ್ನಡಿಗನಾಗಿ ನಡೆದುಕೊಂಡಿದ್ದೇನೆಯೇ ಹೊರತು ರಾಜಕಾರಣಿಯಾಗಿ ಅಲ್ಲ ಎನ್ನುವುದನ್ನು ಹಿರಿಯರಾದ ದೇವೇಗೌಡರ ಗಮನಕ್ಕೆ ತರಬಯಸುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆಯ ಪೂರ್ಣ ವಿವರ ಹೀಗಿದೆ, ಹತ್ತು ದಿನಗಳ ಅವಧಿಯಲ್ಲಿ 15,000 ಕ್ಯುಸೆಕ್ಸ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು 2016ರ ಸೆಪ್ಟೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದಾಗ ಉದ್ಭವವಾದ ಬಿಕ್ಕಟ್ಟಿನ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ನಾನು ನಿಮ್ಮ ಮನೆಗೆ ಬಂದು ಕೈಹಿಡಿದು ಕರೆದುಕೊಂಡು ಬಂದು ಸರ್ವಪಕ್ಷಗಳ ಸಭೆ ನಡೆಸಿದ್ದು ನಿಮಗೆ ನೆನಪಿರಬಹುದೆಂದು ಭಾವಿಸಿದ್ದೇನೆ.

ಹಿಂದೆಲ್ಲ ರಾಜ್ಯದ ಹಿತಾಸಕ್ತಿಯ ರಕ್ಷಣೆಯ ಪ್ರಶ್ನೆ ಎದುರಾದಾಗ  ಹೆಮ್ಮೆಯ ಕನ್ನಡಿಗನಾಗಿ ರಾಜ್ಯಕ್ಕೆ ನ್ಯಾಯ ಕೊಡಲು ನೀವು ಹೋರಾಟ ನಡೆಸಿದ್ದನ್ನು ರಾಜ್ಯದ ಜನರು ಗಮನಿಸಿದ್ದಾರೆ. ಆದರೆ  ಇತ್ತೀಚೆಗೆ ನೀವು ಮತ್ತು ನಿಮ್ಮ ಪಕ್ಷ ಕೇಂದ್ರ ಸರ್ಕಾರದ ವಕ್ತಾರರಂತೆ ಪಕ್ಷಪಾತಿಯಾಗಿ ವರ್ತಿಸುತ್ತಿರುವುದನ್ನು ಕೂಡಾ ನನ್ನನ್ನೂ ಸೇರಿದಂತೆ ಏಳುಕೋಟಿ ಕನ್ನಡಿಗರು ಗಮನಿಸುತ್ತಿದ್ದಾರೆ. ಕೇಂದ್ರ ಸಂಪುಟದಲ್ಲಿ ಮಗನನ್ನು ಸಚಿವನನ್ನಾಗಿ ಮಾಡಲು ಗೌಡರು ಇಷ್ಟೊಂದು ರಾಜಿ ಮಾಡಿಕೊಳ್ಳುವ ಅಗತ್ಯ ಇತ್ತಾ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಮಹದಾಯಿ ಜಲಾನಯನ ಪ್ರದೇಶದ ಕಳಸಾ ನಾಲೆ ಯೋಜನೆಯ ರೂ.995.30 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿ (ಡಿಪಿಆರ್ )ಗೆ 2023ರ ಮಾರ್ಚ್ ನಲ್ಲಿಯೇ ಅನುಮೋದನೆ ನೀಡಲಾಗಿದೆ.  ಅಗತ್ಯವಿರುವ ಭೂಮಿಯಲ್ಲಿ 26,925 ಹೆಕ್ಟೇರ್  ಅರಣ್ಯಪ್ರದೇಶದ ಸ್ವಾಧೀನ ಪ್ರಕ್ರಿಯೆ ಗೋವಾದ ಆಕ್ಷೇಪದ ಕಾರಣ ಕುಂಟುತ್ತಾ ಸಾಗಿದೆ.  ಯೋಜನೆ ರಾಷ್ಟ್ರೀಯ ವನ್ಯಜೀವಿ ಮಂಡಳಿ (ಎನ್ ಬಿಡಬ್ಯುಎಲ್ ) ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ ಟಿಸಿಎ)ದ ಪರಿಶೀಲನೆಯಲ್ಲಿದೆ. ಯೋಜನೆಗೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಅನುಮೋದನೆ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟೀಕರಣ ನೀಡಿರುವ ಕಾರಣ ಶೀಘ್ರವಾಗಿ ಈ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕಾಗಿದೆ.

ಬಂಡೂರಿ ನಾಲೆ ತಿರುವು ಯೋಜನೆಗೆ ಅಗತ್ಯವಿರುವ 28 ಹೆಕ್ಟೇರ್ ಅರಣ‍್ಯ ಪ್ರದೇಶದ ಸ್ವಾಧೀನಕ್ಕಾಗಿ 2024ರ ಆಗಸ್ಟ್ ನಲ್ಲಿಯೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಬೇಡಿಕೆಗೆ ಸಂಬಂಧಿಸಿದ ಇತರ ಪ್ರಕ್ರಿಯೆಗಳನ್ನು ರಾಜ್ಯ ಸರ್ಕಾರ ಸಂಪೂರ್ಣಗೊಳಿಸಲಾಗಿದ್ದು ಈ ನದಿ ತಿರುವು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡುವುದಷ್ಟೇ ಬಾಕಿ ಉಳಿದಿದೆ.

ಕೃಷ್ಣಾ ಜಲವಿವಾದ ನ್ಯಾಯಮಂಡಳಿ ಕರ್ನಾಟಕಕ್ಕೆ 173 ಟಿಎಂಸಿ ನೀರಿನ ಪಾಲನ್ನು ನೀಡಿ 2010ರಲ್ಲಿಯೇ ಐತೀರ್ಪು ನೀಡಿದೆ. ಈ ನೀರಿನ ಪಾಲಿನಲ್ಲಿ 130 ಟಿಎಂಸಿಯನ್ನು ಬಳಸಿಕೊಂಡು ಉತ್ತರ ಕರ್ನಾಟಕದ ಏಳು ಜಿಲ್ಲೆಗಳಿಗೆ ನೀರುಣಿಸುವ ರೂ.51,148 ಸಾವಿರ ವೆಚ್ಚದ ಮೂರನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಸಿದ್ಧವಾಗಿದೆ. ಆದರೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯಲ್ಲಿರುವ ಪ್ರತಿವಾದಿ ರಾಜ್ಯಗಳ ಆಕ್ಷೇಪಣಾ ಅರ್ಜಿಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರ ನ್ಯಾಯಮಂಡಳಿಯ ಐತೀರ್ಪನ್ನು ಗೆಜೆಟ್ ನಲ್ಲಿ ಪ್ರಕಟಿಸಲು ನಿರಾಕರಿಸುತ್ತಾ ಬಂದಿದೆ. ಈ ಯೋಜನೆಯ ಅನಿವಾರ್ಯತೆಯನ್ನು ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟು ಶೀಘ್ರವಾಗಿ ಐತೀರ್ಪನ್ನು ಗೆಜೆಟ್ ನಲ್ಲಿ ಪ್ರಕಟಿಸಿದರೆ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕೆಂಬ ಪ್ರಸ್ತಾವವನ್ನು ಸಲ್ಲಿಸಲು ಅನುಕೂಲವಾಗುತ್ತದೆ.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದರೆ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆಯ ಬರಪೀಡಿತ ಪ್ರದೇಶಗಳಿಗೆ ವರದಾನವಾಗಲಿದೆ. ಆದರೆ ಕೇಂದ್ರ ಸರ್ಕಾರ ಮೀನಮೇಷ ಎಣಿಸುತ್ತಾ ಕೂತಿದೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಮತ್ತು 400 ಮೆಗಾವಾಟ್ ವಿದ್ಯುತ್ ಉತ್ಪಾದನೆಗಾಗಿಯೇ  ಮೇಕೆದಾಟು ಯೋಜನೆಯನ್ನು ರೂಪಿಸಲಾಗಿದೆ.  ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ದೊರಕಿಸಿಕೊಟ್ಟರೆ ಬೆಂಗಳೂರು ನಿವಾಸಿಗಳು ಸದಾ ನಿಮಗೆ ಋಣಿಯಾಗಿರುತ್ತಾರೆ.

ಕೃಷ್ಣಾ ಮತ್ತು ಕಾವೇರಿ ನದಿಗಳ ಜೋಡಣೆಯ ನೀರಾವರಿ ಯೋಜನೆ ವಿಷಯದಲ್ಲಿ ನೀವು ನಡೆಸುವ ಹೋರಾಟಕ್ಕೆ ನಾನು ಮತ್ತು ಡಿ.ಕೆ.ಶಿವಕುಮಾರ್ ಮಾತ್ರವಲ್ಲ ಸಮಸ್ತ ಕರ್ನಾಟಕ ನಿಮ್ಮ ಜೊತೆ ಇರುತ್ತದೆ.  ಹೊಸ ನೀರಾವರಿ ಯೋಜನೆಗಳನ್ನು ಪ್ರಾರಂಭಿಸುವ ಮೊದಲು ಅಪೂರ್ಣ ಸ್ಥಿತಿಯಲ್ಲಿರುವ  ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಹಕಾರ ಇರಲಿ ಎಂದು ಮನವಿ ಮಾಡಿಕೊಳ‍್ಳುತ್ತಿದ್ದೇನೆ.

ನೀರಾವರಿ ಮಾತ್ರವಲ್ಲದೆ  ತೆರಿಗೆ ಹಂಚಿಕೆ, ಪ್ರಕೃತಿ ವಿಕೋಪ ಪರಿಹಾರ, ಕುಡಿಯುವ ನೀರು ಪೂರೈಕೆ, ರೈಲ್ವೆ ಯೋಜನೆಗಳ ವಿಚಾರದಲ್ಲಿಯೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕರ್ನಾಟಕವನ್ನು ಶತ್ರು ರಾಜ್ಯದಂತೆ ನಡೆಸಿಕೊಳ್ಳುತ್ತಿದೆ. ಈ ವಿಚಾರಗಳು  ನಿಮಗೆ ಗೊತ್ತಿರುವುದರಿಂದ ಸಂಸತ್ ನಲ್ಲಿ ಈ ಬಗ್ಗೆ ನೀವು ದನಿ ಎತ್ತುತ್ತೀರಿ ಎಂದು ರಾಜ್ಯದ ಜನರು ನಿರೀಕ್ಷಿಸಿದ್ದರು. ಕೇಂದ್ರದಲ್ಲಿ ಯಾವ ಪಕ್ಷದ ಸರ್ಕಾರ ಇದ್ದರೂ ಕರ್ನಾಟಕದ ಹಿತಾಸಕ್ತಿಯ ರಕ್ಷಣೆಯ ಪ್ರಶ್ನೆ ಎದುರಾದಾಗ ದನಿ ಎತ್ತುತ್ತಾ ಬಂದ ದೇವೇಗೌಡರನ್ನು ಕಾಣಲು ಕನ್ನಡಿಗರು ಬಯಸುತ್ತಿದ್ದಾರೆ. ಈಗಿನ ದೇವೇಗೌಡರು ಬಿಜೆಪಿ ಮತ್ತು ನರೇಂದ್ರ ಮೋದಿಯವರ ಚಿಯರ್ ಲೀಡರ್ ರೀತಿ ವರ್ತಿಸುತ್ತಿದ್ದಾರೆ ಎಂದು ವಿಷಾದದಿಂದ ಹೇಳಬೇಕಾಗಿದೆ.

ದೈಹಿಕವಾಗಿ ಸ್ವಲ್ಪ ಕುಗ್ಗಿದಂತೆ ಕಂಡರೂ ಮಾನಸಿಕವಾಗಿ ನೀವಿನ್ನೂ ದೃಡವಾಗಿದ್ದೀರಿ. ದಯವಿಟ್ಟು ಈಗಲಾದರೂ ಪಕ್ಷ ರಾಜಕಾರಣವನ್ನು ಮೀರಿ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆಗೆ ಮುಂದಾಗಬೇಕೆಂದು  ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ನಿಟ್ಟಿನಲ್ಲಿ ನೀವು ಮಾಡುವ ಪ್ರಯತ್ನಕ್ಕೆ ನಮ್ಮ ಸರ್ಕಾರದ ಸಂಪೂರ್ಣ ಬೆಂಬಲ ಇದೆ. ಏಳು ಕೋಟಿ ಕನ್ನಡಿಗರೂ ನಿಮ್ಮ ಜೊತೆಯಲ್ಲಿ ಇರುತ್ತಾರೆ ಎಂಬ ಭರವಸೆಯೂ ನನಗಿದೆ.

Related Posts

Leave a Reply

Your email address will not be published. Required fields are marked *