Wednesday, December 10, 2025
Menu

ಹೆಲಿಕಾಪ್ಟರ್, ಸ್ಪೆಷಲ್ ಫ್ಲೈಟ್ ಸರ್ಕಾರ ಖರೀದಿ ಮಾಡಲ್ಲ, ಬಾಡಿಗೆಗೆ ಪಡೆಯಲು ತೀರ್ಮಾನ: ಡಿಸಿಎಂ 

ರಾಜ್ಯ ಸರಕಾರದ ಅತಿ ಗಣ್ಯ ವ್ಯಕ್ತಿಗಳು ತುರ್ತು ಹಾಗೂ ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಸಲು ಅತ್ಯುತ್ತಮ ಗುಣಮಟ್ಟದ ಹೆಲಿಕ್ಯಾಪ್ಟರ್, ವಿಶೇಷ ವಿಮಾನದ ಸೇವೆಯನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ತೀರ್ಮಾನಿಸಲಾಗಿದೆ. ಹೆಲಿಕಾಪ್ಟರ್, ವಿಶೇಷ ವಿಮಾನ ಖರೀದಿ ಮಾಡಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಹೆಲಿಕಾಪ್ಟರ್, ವಿಶೇಷ ವಿಮಾನ ಸೇವೆ ಸಂಬಂಧ  ಡಿಕೆ ಶಿವಕುಮಾರ್ ನೇತೃತ್ವದ ಸಮಿತಿಯು ಬೆಳಗಾವಿ ಸುವರ್ಣಸೌಧದಲ್ಲಿ ಸಭೆ ಸೇರಿ ಸಮಾಲೋಚನೆ ನಡೆಸಿದ ಬಳಿಕ  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. “ಹೆಲಿಕಾಪ್ಟರ್ ಸೇವೆ ಒದಗಿಸು ವಂತೆ ನಾವು ಹೆಚ್ಎಎಲ್ ಗೆ ಕೇಳಿದ್ದೆವು. ಅವರು ಇನ್ನೂ ತಡವಾಗುತ್ತದೆ ಎಂದು ಹೇಳಿದರು. ಹೆಚ್ ಎ ಎಲ್ ನಲ್ಲೇ ಹೆಲಿಕಾಪ್ಟರ್ ತಯಾರು ಮಾಡಲಾಗುತ್ತಿದೆ. ಏರ್ ಶೋ ವೇಳೆ ನಾನು, ಕೇಂದ್ರ ಸಚಿವ ರಾಜನಾಥ್ ಸಿಂಗ್  ನೋಡಿದ್ದೆವು. ಅಲ್ಲಿನ ಹೆಲಿಕಾಪ್ಟರ್ ಚೆನ್ನಾಗಿತ್ತು. ಅವರೇ ನಿರ್ವಹಣೆ ಮಾಡುತ್ತಾರೆ. ಹೀಗಾಗಿ ಅವರ ಸೇವೆಗೆ ಮನವಿ ಮಾಡಿದ್ದೆವು. ಸೇವೆ ಒದಗಿಸುವುದು ತಡವಾಗುವ ಕಾರಣ ಅವರೇ ಒಂದು ಸಂಸ್ಥೆಯನ್ನು ಶಿಫಾರಸ್ಸು ಮಾಡಿದ್ದಾರೆ” ಎಂದು ಮಾಹಿತಿ ನೀಡಿದರು.

“ಇದಕ್ಕೆ ಟೆಂಡರ್ ಕರೆಯಲಾಗಿದ್ದು, ಕೆಲವರು ಭಾಗಿಯಾಗಿದ್ದಾರೆ. ಹೀಗಾಗಿ ಸಂಪುಟ ಉಪಸಮಿತಿ ಸದಸ್ಯರಾದ ಸಚಿವರಾದ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್ ಹಾಗೂ ಅಧಿಕಾರಿಗಳು ಸಭೆ ನಡೆಸಿ ಚರ್ಚೆ ಮಾಡಿದ್ದೇವೆ. ಮುಂದಿನ ಸೋಮವಾರ ಅಥವಾ ಮಂಗಳವಾರ ಮತ್ತೊಂದು ಸಭೆ ಮಾಡುತ್ತೇವೆ. ಇದಕ್ಕೆ ತಾಂತ್ರಿಕವಾಗಿ ಪರಿಣಿತಿ ಹೊಂದಿರುವವರು ಬೇಕು. ಬೇರೆ ಸರ್ಕಾರಗಳಿಗೆ ಉತ್ತಮ ಸೇವೆ ನೀಡಿರುವಂತಹವರನ್ನು ನಾವು ಪರಿಗಣಿಸುತ್ತೇವೆ. ನಮಗೆ ಸುರಕ್ಷತೆ ಹಾಗೂ ಸರ್ಕಾರದ ಹಣ ಎರಡೂ ಮುಖ್ಯ” ಎಂದು ತಿಳಿಸಿದರು.

“ಸಭೆಯಲ್ಲಿ ಸಚಿವರು ತಮ್ಮ ಅನುಭವಗಳ ಆಧಾರದ ಮೇಲೆ ಸಲಹೆ ನೀಡಿದ್ದಾರೆ. ಹೀಗಾಗಿ ಖರೀದಿ ಮಾಡದಿರಲು ತೀರ್ಮಾನಿಸಲಾಗಿದ್ದು, ಗಂಟೆಗಳ ಲೆಕ್ಕದಲ್ಲಿ ಬಾಡಿಗೆಗೆ ಪಡೆಯಲಾಗುವುದು” ಎಂದರು.

Related Posts

Leave a Reply

Your email address will not be published. Required fields are marked *