Menu

ಹುಲಿ ದಾಳಿಗೊಳಗಾದ ಮಹದೇವಗೌಡರಿಗೆ ಸರ್ಕಾರದಿಂದ ಚಿಕಿತ್ಸಾ ವೆಚ್ಚ, ಪೂರ್ಣ ಪ್ರಮಾಣದ ಪರಿಹಾರ

ಚಾಮರಾಜನಗರದ ಬಡಗಲಾಪುರದಲ್ಲಿ ಹುಲಿ ದಾಳಿಗೆ ತುತ್ತಾದ ಮಹದೇವಗೌಡ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಕುಟುಂಬಕ್ಕೆ ಸಂಪೂರ್ಣ ಪರಿಹಾರದ ಮೊತ್ತ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಸೂಚನೆ ನೀಡಿದರು.

ಅಪೊಲೋ  ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಚಿಕಿತ್ಸೆಗೆ ಒಳಗಾಗಿರುವ ಮಹದೇವಗೌಡ ಅವರ ಕುಟುಂಬದವರ ಜೊತೆ ಚರ್ಚಿಸಿದ ಬಳಿಕ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಂಪೂರ್ಣ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿದೆ. ಪರಿಹಾರದ ಮೊತ್ತವನ್ನು ಸಂಪೂರ್ಣವಾಗಿ ಬಿಡುಗಡೆಗೊಳಿಸಲಾಗುವುದು ಎಂದು  ಸಿಎಂ ತಿಳಿಸಿದರು.

ಎರಡು ಕಣ್ಣುಗಳ ದೃಷ್ಟಿ ಮತ್ತೆ ಬರುವ ಸಾಧ್ಯತೆ ಇಲ್ಲ ಎಂದು ವೈದ್ಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪರಿಹಾರವನ್ನು ಗಾಯಾಳು ಲೆಕ್ಕದಲ್ಲಿ ಕೊಡಬಾರದು. ಬದುಕು ಕಳೆದುಕೊಂಡ, ಕುಟುಂಬದ ಆಸರೆ ಕಳೆದುಕೊಂಡವರ ಲೆಕ್ಕದಲ್ಲಿ ಪೂರ್ತಿ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಹುಲಿ ಸೆರೆಗೆ ಬಡಗಲಪುರ ಗ್ರಾಮದಲ್ಲಿ ನಡೆಯುತ್ತಿದ್ದ ಕೂಂಬಿಂಗ್ ವೇಳೆ ಮಹದೇವಗೌಡ ಮೇಲೆ ಹುಲಿ ದಾಳಿ ನಡೆಸಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ನುಗು ವನ್ಯಜೀವಿ ವಲಯದ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡು ಜನರಲ್ಲಿ ಆತಂಕವುಂಟಾಗಿ ಗ್ರಾಮಸ್ಥರು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.

ಅರಣ್ಯ ಇಲಾಖೆ ನಾಲ್ಕೈದು ದಿನಗಳಿಂದ ಹುಲಿ ಸೆರೆಗೆ ಕೂಂಬಿಂಗ್ ನಡೆಸುತ್ತಿತ್ತು. ಹುಲಿಯು ಗ್ರಾಮದ ಬೋಳೆಗೌಡನಕಟ್ಟೆ ಕೆರೆ ಬಳಿ ಅವಿತು ಕುಳಿತಿತ್ತು. ಇದನ್ನು ಕಂಡ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಬಳಿ ಯಾರೂ ಹೋಗದಂತೆ ಎಚ್ಚರಿಕೆ ನೀಡಿದ್ದರು. ಹುಲಿ ಗಾಬರಿಗೊಂಡು ಕುಮಾರ್ ಎಂಬವರ ತೋಟದ ಕಡೆಗೆ ಓಡಿದ್ದು, ಅಲ್ಲಿಂದ ನುಗು ಅರಣ್ಯದ ಕಡೆಗೆ ಓಡಿ ಹೋಗಿ ಪೊದೆಯಲ್ಲಿ ಕುಳಿತಿತ್ತು.

ಹುಲಿ ಸೆರೆಗೆ ಅರಣ್ಯ ಇಲಾಖೆ ಸಾಕಾನೆಯನ್ನು ಪೊದೆಗೆ ಬಿಟ್ಟದ್ದರಿಂದ ಹೆದರಿದ ಹುಲಿ ಪೊದೆಯಿಂದ ಹೊರ ಬಂದು ಮತ್ತೆ ಕಾಡಿನತ್ತ ಓಡಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹದೇವ್ ಎಂಬುವರ ಮೇಲೆ ದಾಳಿ ಮಾಡಿದೆ, ಅವರ ಕಣ್ಣು, ಮುಖ, ಕೈ, ಕಾಲುಗಳಿಗೆ ಗಂಭೀರ ಗಾಯಗಳಾಗಿವೆ.

ಕಾರ್ಯಾಚರಣೆ ಮಾಡುತ್ತಿರುವ ಬಗ್ಗೆ ಜನರಿಗೆ ಎಚ್ಚರಿಕೆ ಸಂದೇಶ ನೀಡಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು. ಸಿಬ್ಬಂದಿಯನ್ನು ಜಮೀನು ಬಿಟ್ಟು ಹೋಗದಂತೆ ತಡೆದು ಇಲಾಖೆಯ ವಾಹನಗಳನ್ನು ಜಖಂಗೊಳಿಸಿದರು.

Related Posts

Leave a Reply

Your email address will not be published. Required fields are marked *