Wednesday, February 25, 2026
Menu

ಹಗರಣ ರಹಿತ ಹುದ್ದೆ ಭರ್ತಿಗೆ ಸರಕಾರ ಕ್ರಮ: ಡಿಕೆ ಶಿವಕುಮಾರ್

“ಕಾಂಗ್ರೆಸ್‌ ಸರ್ಕಾರ ಹಗರಣ ರಹಿತವಾಗಿ ಖಾಲಿ ಹುದ್ದೆಗಳನ್ನು ತುಂಬಬೇಕು ಎಂದು ಕೆಲಸ ಮಾಡುತ್ತಿದೆ. ಯುವಕರು ಧೈರ್ಯವಾಗಿರಿ. ನಾವು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ಶೀಘ್ರದಲ್ಲೇ ನಿಮಗೆ ಸಂದೇಶವನ್ನು ನೀಡುತ್ತೇವೆ. ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ, ಮಾಡುತ್ತೇವೆ, ಇದಕ್ಕೆ ಬದ್ಧವಾಗಿದ್ದೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಅಭಯ ನೀಡಿದರು.

ಬೆಂಗಳೂರು  ನೆಹರೂ ತಾರಾಲಯದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಧಾರವಾಡದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿಗೆ ಯುವಕರ ಪ್ರತಿಭಟನೆ ಬಗ್ಗೆ ಕೇಳಿದಾಗ, “ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆಗಲಿಲ್ಲ. ಅವರ ಸಮಯದಲ್ಲಿ ಬಹಳಷ್ಟು ಹಗರಣಗಳಾದವು. ನಮಗೆ ಯುವಕರ ನೋವು ಅರ್ಥವಾಗುತ್ತದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಇದು ನಮ್ಮ ಆದ್ಯತೆ” ಎಂದು ಹೇಳಿದರು.

“ಹುದ್ದೆಗಳ ಭರ್ತಿ ಕುರಿತು ಯೋಜನೆ ತಯಾರಿಸಿದ್ದೇವೆ. ಕೆಪಿಎಸ್‌ ಸಿ ಸೇರಿದಂತೆ ಬೇರೆ ಸಂಸ್ಥೆಗಳಿಗೆ ಹುದ್ದೆ ಭರ್ತಿಗೆ ಜವಾಬ್ದಾರಿ ನೀಡಿದ್ದೇವೆ. ಶಿಕ್ಷಕರ ಹುದ್ದೆ, ಆರೋಗ್ಯ ಇಲಾಖೆಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಒಳಮೀಸಲಾತಿ ವಿಚಾರಕ್ಕೆ ಒಂದಷ್ಟು ಅಡಚಣೆಗಳು ಬರುತ್ತಿದೆ. ನಿರುದ್ಯೋಗಿ ಯುವಕರಿಗೆ ಶಕ್ತಿ ಬರಲಿ ಎಂದೇ ಯುವನಿಧಿ ಯೋಜನೆ ಜಾರಿಗೆ ತಂದಿದ್ದೇವೆ” ಎಂದು ತಿಳಿಸಿದರು.

ಮೆಟ್ರೋ ಜಾಲವನ್ನು 2027ರ ಹೊತ್ತಿಗೆ 175 ಕಿಲೋ ಮೀಟರ್‌ ಗೆ ವಿಸ್ತರಿಸಲು ಬಿಎಂಆರ್‌ಸಿಎಲ್‌ ಗೆ ಡೆಡ್‌ ಲೈನ್‌ ನೀಡಿರುವ ಬಗ್ಗೆ ಕೇಳಿದಾಗ, “ಈ ಬಗ್ಗೆ ಸರ್ವೇ ಮಾಡಿಸುತ್ತಿದ್ದೇವೆ. ಮೆಟ್ರೋ ವಿಚಾರವಾಗಿ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ. ಡಬಲ್‌ ಡೆಕ್ಕರ್‌ ವಿಚಾರದಲ್ಲಿ ಸಣ್ಣ ಸ್ಪಷ್ಟನೆ ಕೇಳುತ್ತಿರುವ ಕಾರಣಕ್ಕೆ ಸಧ್ಯದಲ್ಲೇ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇನೆ. ಮೆಟ್ರೋ ವಿಸ್ತರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದಕ್ಕೆ ನಾವು ಬದ್ಧವಾಗಿದ್ದೇವೆ. ಇದು ನಮ್ಮ ಸರ್ಕಾರದ ಉದ್ದೇಶ” ಎಂದು ಉತ್ತರಿಸಿದರು.

ಎಲ್ಲಾ ಇಲಾಖೆಗಳಲ್ಲೂ ಬಿಲ್‌ ಬಾಕಿ ಇರುವ ಬಗ್ಗೆ ಕೇಳಿದಾಗ, “ಯಡಿಯೂರಪ್ಪ ಹಾಗೂ ಬೊಮ್ಮಾಯಿ ರ್ಕಾರದ ವೇಳೆ ಯಾವುದೇ ಆರ್ಥಿಕ ಸ್ಥಿತಿಗತಿಯನ್ನು ನೋಡದೆ ಹೆಚ್ಚಿನ ಕಾಮಗಾರಿಗಳಿಗೆ ಅನುಮತಿ ನೀಡಲಾಯಿತು. ಈ ಕಾರಣಕ್ಕೆ ಈಗ ಸಮಸ್ಯೆ ಉಂಟಾಗಿದೆ. ನಾವು ಅನೇಕ ಗುತ್ತಿಗೆದಾರರಿಗೆ ಹಣ ಲಭ್ಯತೆ ಇಲ್ಲದೇ ಇರುವ ಕಾರಣಕ್ಕೆ ಕಾಮಗಾರಿಗಳನ್ನು ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದರೂ, ಒಂದಷ್ಟು ಜನ ಕಾಮಗಾರಿಗಳನ್ನು ತೆಗೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ” ಎಂದು ಹೇಳಿದರು.  ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ ಮಾಡುವ ಬಗ್ಗೆ ಕೇಳಿದಾಗ, “ಈ ಬಗ್ಗೆ ಅವರ ಜೊತೆ ಚರ್ಚೆ ಮಾಡುತ್ತೇನೆ” ಎಂದರು.

Related Posts

Leave a Reply

Your email address will not be published. Required fields are marked *