ನಿಷ್ಕ್ರಿಯವಾಗಿರುವ ಅಬಕಾರಿ ಲೈಸೆನ್ಸ್‌ಗಳನ್ನು ಹರಾಜು ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ರಾಜ್ಯದ ಬೊಕ್ಕಸಕ್ಕೆ 500 ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ರ ಬಜೆಟ್‌ನಲ್ಲಿ ಈ ಹರಾಜು ಯೋಜನೆ ಘೋಷಿಸಿದ್ದು, ಎಲೆಕ್ಟ್ರಾನಿಕ್ ಹರಾಜಿನ ಮೂಲಕ ಪಾರದರ್ಶಕವಾಗಿ ಪರವಾನಗಿಗಳನ್ನು ಹಂಚಿಕೆ ಮಾಡುವ ಭರವಸೆ ನೀಡಿದ್ದಾರೆ.
ಸರ್ಕಾರವು CL-2 (ಚಿಲ್ಲರೆ ಮದ್ಯದ ಅಂಗಡಿ) ಮತ್ತು CL-9 (ಬಾರ್ ಮತ್ತು ರೆಸ್ಟೋರೆಂಟ್) ಪರವಾನಗಿಗಳನ್ನು ಜೊತೆಗೆ M SIL ಮೂಲಕ ನಡೆಯುವ ಚಿಲ್ಲರೆ ಮದ್ಯ ಮಾರಾಟದ CL-11(C) ಪರವಾನಗಿಗಳನ್ನು ಹರಾಜಿಗೆ ನೀಡಲು ಮುಂದಾಗಿದೆ.
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಕಚೇರಿಯ ಮೂಲದ ಪ್ರಕಾರ, ಒಟ್ಟು 579 ನಿಷ್ಕ್ರಿಯ ಪರವಾನಗಿಗಳನ್ನು ಹರಾಜು ಹಾಕಲಾಗುವುದು. 1992ರಿಂದ ರಾಜ್ಯದಲ್ಲಿ ಹೊಸ CL-2 ಮತ್ತು CL-9 ಪರವಾನಗಿ ನೀಡಿಲ್ಲ. 3,995 CL-2 ಮತ್ತು 3,637 CL-9 ಪರವಾನಗಿಗಳಿವೆ, ಇವುಗಳನ್ನು ವಾರ್ಷಿಕವಾಗಿ ನವೀಕರಿಸಲಾಗುತ್ತದೆ. ಹೊಸ ಪರವಾನಗಿ ಸಿಗದ ಕಾರಣ ಹಳೆಯ ಪರವಾನಗಿಗಳಿಗೆ ಬೇಡಿಕೆ ಇದೆ.
ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳುವಂತೆ, ಬೆಂಗಳೂರಿನಲ್ಲಿ ಒಂದು ಪರವಾನಗಿಗೆ 3.8 ಕೋಟಿ ರೂ.ವರೆಗೆ ಬೆಲೆ ಬರಬಹುದು. ಹರಾಜಿನಲ್ಲಿ ಪ್ರತಿ ಪರವಾನಗಿಗೆ ಸರಾಸರಿ 3 ಕೋಟಿ ರೂ. ಸಿಗಬಹುದು. ಬೆಂಗಳೂರಿನ ಹೊರಗೆ ಒಂದು ಪರವಾನಗಿಗೆ 1 ಕೋಟಿ ರೂ. ಸಿಗಬಹುದಾಗಿದೆ. ಒಟ್ಟಾರೆ ರಾಜ್ಯದ ಬೊಕ್ಕಸಕ್ಕೆ 500 ಕೋಟಿ ರೂ. ಆದಾಯ ಸಂಗ್ರಹವಾಗುವ ಅವಕಾಶವಿದೆ.
ಹರಾಜಿನ ಪರವಾನಗಿಗಳಿಗೆ CL-2A ಮತ್ತು CL-9A ಎಂಬ ಎರಡು ಹೊಸ ವಿಭಾಗ ರಚಿಸಲಾಗುವುದು. ಪರವಾನಗಿದಾರರ ಮರಣದ ಸಂದರ್ಭದಲ್ಲಿ ಅವರ ವಾರಸುದಾರರಿಗೆ ಪರವಾನಗಿಯನ್ನು ವರ್ಗಾಯಿಸಲು ಅವಕಾಶ ಇರಲಿದೆ. ರಾಜ್ಯದ ಅಬಕಾರಿ ಆದಾಯವು 2024-25ರಲ್ಲಿ 35,783 ಕೋಟಿ ರೂ.ಆಗಿದ್ದು, ಈ ಹಣಕಾಸು ವರ್ಷದಲ್ಲಿ 40,000 ಕೋಟಿ ರೂ. ಗುರಿಯನ್ನು ಸರ್ಕಾರ ಹೊಂದಿದೆ. ಆಗಸ್ಟ್ 2025ರ ವರೆಗೆ 16,358 ಕೋಟಿ ರೂ. ಆದಾಯ ಸಂಗ್ರಹವಾಗಿದೆ.