Menu

ಸರ್ಕಾರ ಪ್ರತಿ ಟನ್‌ ಕಬ್ಬಿಗೆ 500 ರೂ. ಸಹಾಯಧನ ನೀಡಲಿ: ಆರ್‌. ಅಶೋಕ

ಕಬ್ಬು ಬೆಳೆಗಾರರ ಬದುಕಿನ ಜತೆ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿದೆ, ಇದೇ ವರ್ತನೆ ಮುಂದುವರಿದರೆ ರೈತರ ಹೋರಾಟದ ಕಿಚ್ಚು ಸರ್ಕಾರವನ್ನೇ ಆಹುತಿ ತೆಗೆದುಕೊಳ್ಳದೇ ಬಿಡುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಎಂಟು ದಿನಗಳಿಂದ ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟ ಹಾಗೂ ಇತರೆ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ನ್ಯಾಯಯುತ ಬೆಲೆಗೆ ಆಗ್ರಹಿಸಿ ಅಹೋರಾತ್ರಿ  ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಚಳವಳಿ ಇತರೆ ಜಿಲ್ಲೆಗಳಿಗೂ ಹರಡುತ್ತಿದೆ. ಅನೇಕ ಮಠಗಳ ಧರ್ಮಗುರುಗಳು ಬೆಂಬಲ ನೀಡಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಆದರೂ  ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಇಲ್ಲದಿರುವುದು ದುರದೃಷ್ಟಕರ ಎಂದು ಪತ್ರಿಕಾ ಹೇಳಿಕೆಯಲ್ಲಿ ಹರಿಹಾಯ್ದಿದ್ದಾರೆ.
ರೈತರನ್ನು ಬೀದಿಯಲ್ಲಿ ಕೂರಿಸಿರುವ ಸರ್ಕಾರ, ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಮಾತುಕತೆ ನಡೆಸಬೇಕು ಎಂಬ ನಾಟಕ ಆಡುತ್ತಿದೆ. ಮುಂಚಿತವಾಗಿ ಬೆಳೆಗಾರರು ಮತ್ತು ಕಾರ್ಖಾನೆ ಮಾಲೀಕರ ಜತೆ ಸಮಾಲೋಚಿಸಿ ಬೆಲೆ ನಿಗದಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು? ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳು ಆಗ ಏನು ಮಾಡುತ್ತಿದ್ದರು? ರಾಜ್ಯ ಸರ್ಕಾರ ಉದಾರವಾಗಿ ನಡೆದುಕೊಂಡು ಬೊಕ್ಕಸದಿಂದ ನೆರವು ನೀಡಲು ಇರುವ ತೊಂದರೆ ಏನು? ಪ್ರತಿ ಟನ್ ಗೆ 500 ರೂ. ಸಹಾಯಧನ ನೀಡಲಿ ಎಂದು ಆಗ್ರಹಿಸಿದ್ದಾರೆ.
 ಕಬ್ಬು ಮತ್ತು ಉಪ ಉತ್ಪನ್ನಗಳ ವಹಿವಾಟು, ವಿದ್ಯುತ್‌ ಉತ್ಪಾದನೆಯಿಂದ ರಾಜ್ಯದ ಬೊಕ್ಕಸಕ್ಕೆ ಬಹು ದೊಡ್ಡ ಆದಾಯ ಬರುತ್ತಿದೆ. ಆದರೆ ಅದನ್ನು ಮರೆ ಮಾಚಿದ ಸಿಎಂ ಸಿದ್ದರಾಮಯ್ಯ, ಕೇಂದ್ರದ ವಿರುದ್ಧ ಆರೋಪ ಮಾಡುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಎಫ್‌ಆರ್‌ಪಿ ನಿಗದಿ, ರಿಕವರಿ ಆಧರಿತ ದರ, ಸಾಗಾಟ ಮತ್ತು ಕಟಾವು ವೆಚ್ಚ ಇತ್ಯಾದಿ ವಿವರಣೆ ನೀಡಿ ಸುದ್ದಿಗೋಷ್ಠಿಯಲ್ಲಿ ತಿಪ್ಪೇ ಸಾರಿಸುವ ಕೆಲಸ ಮಾಡಿದ್ದಾರೆ. ಪ್ರಧಾನಿಯವರ ಭೇಟಿಗೆ ಸಮಯ ಕೇಳಿ ಪತ್ರ ಬರೆಯುವೆ ಎಂದು ಗೊಸುಂಬೆ ನಾಟಕ ಆಡಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಅಧಿಕಾರಕ್ಕೆ ಬಂದ ದಿನದಿಂದಲೂ ಸಿದ್ದರಾಮಯ್ಯ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸಿಕೊಂಡು ಬಂದಿದೆ. ಇದರಿಂದ ಎರಡೂವರೆ ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಾವಿನ ಸಮಾಧಿ ಮೇಲೆ ಇವರು ಅಧಿಕಾರದ ಮೋಜು ಮಸ್ತಿ ನಡೆಸಿದ್ದಾರೆ. ಇಂತಹ ದರಿದ್ರ, ಜನವಿರೋಧಿ, ರೈತ ವಿರೋಧಿ ಸರ್ಕಾರವನ್ನು ಕರ್ನಾಟಕದ ಜನತೆ ಹಿಂದೆಂದೂ ಕಂಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕಾರ್ಖಾನೆ ಆಡಳಿತ ಮಂಡಳಿಗಳು  ಪ್ರತಿ ಟನ್‌ ಕಬ್ಬಿಗೆ 3,500 ರೂ. ದರ ನಿಗದಿ ಮಾಡಿ ತಕ್ಷಣವೇ ಹಣ ಪಾವತಿ ಮಾಡುತ್ತಿವೆ. ಅಲ್ಲಿ ನೀಡಲು ಸಾಧ್ಯ ಇರುವಾಗ ರಾಜ್ಯದಲ್ಲಿ ಏಕೆ ಸಾಧ್ಯವಿಲ್ಲ? ಈ ಸರ್ಕಾರಕ್ಕೆ ರೈತರ ಪರ ಕಾಳಜಿ ಇದಿದ್ದರೆ ಬೆಳೆಗಾರರು ಬೀದಿಗೆ ಇಳಿಯುವ ಮುಂಚೆ ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು. ಈ ಸರ್ಕಾರಕ್ಕೆ ರೈತರು ಕಾಲ ಕಸದಂತೆ ಆಗಿದ್ದಾರೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ಷುಗರ್‌ ಹಿಯರ್‌ ಆರಂಭಕ್ಕೆ ಮೊದಲು ಎಫ್‌ಆರ್‌ಪಿ ದರ ನಿಗದಿ ಮಾಡುತ್ತದೆ.  ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ನುಣುಚಿಕೊಳ್ಳುವ ತಂತ್ರ ಅನುಸರಿಸಿದ್ದಾರೆ. ಆದರೆ, ಕಾರ್ಖಾನೆಗಳು ಉತ್ಪಾದಿಸುವ ಉಪ ಉತ್ಪನ್ನಗಳ ವಹಿವಾಟಿನಲ್ಲೂ ರೈತರಿಗೆ ಪಾಲು ಕೊಡಿಸಲು ಕಾನೂನಿನ ಪ್ರಕಾರವೇ ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಆದರೆ ಸತ್ಯವನ್ನು ಮರೆಮಾಚಿ ಎಲ್ಲ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದು ಎಂಬಂತೆ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ನಾಟಕ ಆಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಹಿಂದೆ ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಸರ್ಕಾರಗಳಿದ್ದಾಗ ಬಿಜೆಪಿ ಬೆಳೆಗಾರರಿಗೆ ನ್ಯಾಯಯುತ ದರ ಕೊಡಿಸುವ ಕೆಲಸ ಮಾಡಿದೆ. ಈಗಲೂ ಕಾಲ ಮಿಂಚಿಲ್ಲ, ತಮ್ಮದು ರೈತ ಪರ ಸರ್ಕಾರ ಎಂದು ಮೊಸಳೆ ಕಣ್ಣೀರು ಸುರಿಸುವ ಸಿದ್ದರಾಮಯ್ಯ ರೈತ ಪರವಾದ ಆದೇಶ ಹೊರಡಿಸಲಿ. ಕಾರ್ಖಾನೆಗಳ ಪಾಲಿನ ಹಣದ ಜತೆಗೆ ಸರ್ಕಾರವು ಕೊಂಚ ಹಣ ನೀಡಲಿ, ಸಂಕಷ್ಟದಲ್ಲಿರುವ ರೈತರ ನೆರವಿಗೆ ಮುಂದಾಗಲಿ ಎಂದು ಆಗ್ರಹಿಸಿದ್ದಾರೆ.
ಕಬ್ಬು ಮತ್ತು ಉತ್ಪನ್ನಗಳ ವಹಿವಾಟಿನಲ್ಲಿ ಸರ್ಕಾರಕ್ಕೆ ದೊಡ್ಡ ಪ್ರಮಾಣದ ಆದಾಯ ಬರುತ್ತಿದೆ. ಅದರಲ್ಲಿ ಒಂದಷ್ಟು ಹಣವನ್ನು ಬೆಳೆಗಾರರಿಗೆ ವರ್ಗಾಯಿಸುವ ಕೆಲಸ ಮಾಡಲಿ. ಆ ಮೂಲಕ ಪ್ರತಿ ಟನ್‌ ಕಬ್ಬಿಗೆ 3,500 ರೂ. ಕೊಡಿಸಲಿ. ತೂಕದಲ್ಲಿ ಮೋಸ ಆಗುವುದನ್ನು ತಪ್ಪಿಸಿ, ಕಬ್ಬು ನುರಿಸಿದ ತಕ್ಷಣ ಪೇಮೆಂಟ್‌ ಮಾಡಲು ಕಾರ್ಖಾನೆಗಳಿಗೆ ಸೂಚನೆ ಕೊಡಲಿ. ಅದನ್ನು ಬಿಟ್ಟು 11 ಕಡೆ ತೂಕದ ಯಂತ್ರ ಅಳವಡಿಕೆಗೆ ನಿರ್ಧರಿಸಲಾಗಿದೆ ಎಂಬ ಹೇಳಿಕೆ ನೀಡುವ ಬದಲು ಮೊದಲು ತೂಕದ ಯಂತ್ರ ಸ್ಥಾಪಿಸಿ ಎಂದು ಒತ್ತಾಯಿಸಿದರು.
ರೈತರ ಬೆಳೆಯುವ ಬೆಳೆಗಳ ಬೆಲೆ ಕುಸಿತ ಆದಾಗ ಮಾರುಕಟ್ಟೆ ಮಧ್ಯ ಪ್ರವೇಶಿಸಿ ನ್ಯಾಯಯುತ ಬೆಲೆ ದೊರಕಿಸಲು 500 ಕೋಟಿ ಆವರ್ತ ನಿಧಿ ಸ್ಥಾಪಿಸುವುದಾಗಿ ಚುನಾವಣೆಗೆ ಮೊದಲು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಆ ಭರವಸೆ ಏನಾಯಿತು? ಈಗ ಆ ಬದ್ಧತೆ ತೋರಿಸಲು ಅವಕಾಶ ಇತ್ತು. ಆದರೆ ಪಲಾಯನ ಮಾಡುತ್ತಿದೆ. ನುಡಿದಂತೆ ನಡೆದಿದ್ದೇವೆ? ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್‌ ನಾಯಕರು ಈಗ ರೈತರ ಬೇಡಿಕೆ ಈಡೇರಿಸಲಿ ಎಂದು ಸವಾಲು ಹಾಕಿದರು.
ಮುಂಗಾರಿನಲ್ಲಿ ಅನೇಕ ಜಿಲ್ಲೆಗಳಲ್ಲಿನೆರೆ ಹಾವಳಿಯಿಂದ ಕೋಟ್ಯಂತರ ಮೌಲ್ಯದ ಬೆಳೆ ನಾಶವಾಗಿದೆ. ತಿಂಗಳುಗಳೇ ಕಳೆದರೂ, ಇವರ ಯೋಗ್ಯತೆಗೆ ಪರಿಹಾರ ನೀಡಿಲ್ಲ. ಮೊದಲ ವರ್ಷ ಬರಗಾಲ ಬಂದಾಗಲೂ ಇದೇ ತಂತ್ರ ಅನುಸರಿಸಿ ರೈತರಿಗೆ ಪರಿಹಾರ ಸಿಗದಂತೆ ಮಾಡಿದರು. ಪ್ರತಿ ವಿಷಯಕ್ಕೂ ಕೇಂದ್ರದತ್ತ ಬೊಟ್ಟು ಮಾಡಿ ಪಲಾಯನ ತಂತ್ರ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.

Related Posts

Leave a Reply

Your email address will not be published. Required fields are marked *