ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಯಾವುದೇ ಸರ್ಕಾರಿ ಅಥವಾ ಖಾಸಗಿ ಕಾರ್ಯಕ್ರಮಗಳಿಗೆ ಪ್ರೇಕ್ಷಕರಾಗಿ ಇನ್ನು ಮುಂದೆ ಬಳಸಿಕೊಳ್ಳುವಂತಿಲ್ಲ ಎಂದು ಶಿಕ್ಷಣ ಇಲಾಖೆ ಆದೇಶಿಸಿದೆ.
ದಾರ್ಶನಿಕರ ಜಯಂತಿಗಳು, ಸರ್ಕಾರಿ ಸಮಾರಂಭಗಳು ಹಾಗೂ ಜಾಗೃತಿ ಮೂಡಿಸುವ ಜಾಥಾಗಳಲ್ಲಿ ಶಾಲಾ ಮಕ್ಕಳನ್ನು ತೊಡಗಿಸಿಕೊಳ್ಳಲಾಗುತ್ತಿತ್ತು. ಇದರಿಂದ ಶಾಲೆಗಳಲ್ಲಿ ಪಠ್ಯ ಪ್ರವಚನ ಹಾಗೂ ಆ ಮಕ್ಕಳ ಶೈಕ್ಷಣಿಕ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಶಾಲೆಯ ಹೊರಗಡೆ ಕಾರ್ಯಕ್ರಮಗಳ ಪ್ರೇಕ್ಷಕರಾಗಿ ಭಾಗವಹಿಸಲು ನಿರ್ದೇಶಿಸಬಾರದು ಎಂದು ಶಿಕ್ಷಣ ಇಲಾಖೆ ಕಟ್ಟುನಿಟ್ಟಾಗಿ ಆದೇಶಿಸಿದೆ.
ಶಿಕ್ಷಕರನ್ನು/ಶಾಲಾ ಮುಖ್ಯೋಪಾಧ್ಯಾಯರನ್ನು ಯಾವುದೇ ತರಬೇತಿ ಕಾರ್ಯಕ್ರಮಗಳಿಗೆ, ಕಾರ್ಯಾಗಾರಗಳಿಗೆ, ಸಭೆಗಳಿಗೆ, ಇತರ ಚಟುವಟಿಕೆಗಳಿಗೆ ಶಾಲಾ ದಿನಗಳಲ್ಲಿ, ಶಾಲಾ ಸಮಯದಲ್ಲಿ ನಿಯೋಜನೆ/ಒಒಡಿ ಮೌಖಿಕ ಅಥವಾ ಲಿಖಿತ ಆದೇಶಗಳ ಮೂಲಕ ಕಳುಹಿಸಬಾರದು. ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇಂತಹ ನಿರ್ದೇಶನಗಳನ್ನು ನೀಡಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ.
ಶಾಲಾ ಸಮಯದಲ್ಲಿ ಶಾಲಾ ಶಿಕ್ಷಕರು ಮತ್ತು ಶಾಲಾ ಮುಖ್ಯೋಪಾಧ್ಯಾಯರ ಸಭೆಗಳನ್ನು ಕರೆಯಬಾರದು ಅಥವಾ ವೀಡಿಯೊ ಕಾನ್ಸರೆನ್ಸ್ ಮಾಡಬಾರದು. ಶಾಲಾ ದಿನಗಳಲ್ಲಿ ಯಾವುದೇ ಬಾಹ್ಯ ಪರೀಕ್ಷೆಗಳನ್ನು ಶಾಲೆಯ ಆವರಣದಲ್ಲಿ ನಡೆಸಬಾರದು. ಈ ನಿಬಂಧನೆಯನ್ನು ಉಲ್ಲಂಘಿಸಿದ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ ಪ್ರಾಂಶುಪಾಲರು, ಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಇಂತಹ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಬೇಕಾದರೆ ಅದು ಸಾರ್ವಜನಿಕ ರಜೆ ಅಥವಾ ಬೇಸಿಗೆ ರಜೆಯ ಸಮಯದಲ್ಲಿ ಮಾತ್ರ ನಿಯಮಗಳಂತೆ ನೀಡಬೇಕು.
ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ ಪ್ರಾಂಶುಪಾಲರು, ಶಾಲಾ ಮುಖ್ಯೋಪಾಧ್ಯಾಯರ ಇಲಾಖೆಯ ಯಾವುದೇ ಮಟ್ಟದ ಅಧಿಕಾರಿಗಳು ಖಾಸಗಿ ಸಂಸ್ಥೆಗಳ ಅಥವಾ ಯಾವುದೇ ಜ್ಞಾನ ಪಾಲುದಾರರು ಸಾಫ್ಟ್‌ವೇರ್‌ಗಳಲ್ಲಿ ಡೇಟಾ ಎಂಟ್ರಿ ಮಾಡುವಂತೆ ಶಿಕ್ಷಕರು ಅಥವಾ ಶಾಲಾ ಮುಖ್ಯೋಪಾಧ್ಯಾಯರಿಗೆ ಮೌಖಿಕ ಅಥವಾ ಲಿಖಿತ ಆದೇಶ ನೀಡಬಾರದು. ಇಂತಹ ಆದೇಶ ನೀಡುವ ಯಾವುದೇ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಸರ್ಕಾರಿ ಶಾಲೆಗಳಲ್ಲಿ ಶಾಲೆಯ ಸಮಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯಲ್ಲಿಯೇ ಹಾಜರಿದ್ದು ಶಿಕ್ಷಣದ ಹಕ್ಕು ಕಾಯಿದೆ ಅಡಿ ಪ್ರತಿದಿನ ಶಾಲೆಯ ಹಂತದಲ್ಲಿ ಭೋಧನೆ ಮತ್ತು ಕಲಿಕೆ ನಡೆಸಲು ಅನುವಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಕಲಿಕೆ ಫಲಿತಾಂಶಗಳನ್ನು ಸುಧಾರಿಸಲು ಮತ್ತು ಉತ್ತಮ ಬೋಧನೆ ನೀಡಲು ಶಿಕ್ಷಕರೂ ಹಾಗೂ ಶಾಲಾ ಮುಖ್ಯೋಪಾಧ್ಯಾಯರೂ ಸಂಪೂರ್ಣವಾಗಿ ಶಾಲೆಯಲ್ಲಿ ಹಾಜರಿರುವುದು ಅಗತ್ಯವಾಗಿದೆ. ಶಿಕ್ಷಣ ಇಲಾಖೆಯ ಎಲ್ಲಾ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ ಪ್ರಾಂಶುಪಾಲರು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ರಾಜ್ಯ ಹಾಗೂ ಜಿಲ್ಲೆಯಲ್ಲಿರುವ ಎಲ್ಲಾ ಅಧಿಕಾರಿಗಳು/ಸಿಬ್ಬಂದಿ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಆದೇಶದಲ್ಲಿ ನಿರ್ದೇಶನ ನೀಡಿದ್ದಾರೆ.