Menu

ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಟ್‌ ಕೋಚಿಂಗ್‌

ರಾಜ್ಯದ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ನೆರವಾಗುವಂತೆ ಗುಣಮಟ್ಟದ ನೀಟ್‌ ಕೋಚಿಂಗ್‌ ನೀಡಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ವಿಧಾನ ಪರಿಷತ್ತಿನಲ್ಲಿ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್‌ನ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ನೀಟ್ ಪದ್ಧತಿಯು ಗ್ರಾಮೀಣ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣದಿಂದ ವಂಚಿಸುತ್ತಿದೆ. ಮೂರು ಲಕ್ಷ ರೂಪಾಯಿ ಸಹಾಯಧನದಿಂದ ಬಡ ವಿದ್ಯಾರ್ಥಿಗಳು ಕೋಚಿಂಗ್ ಪಡೆಯಲು ಸಾಧ್ಯವೇ ಎಂದು ಐವನ್ ಡಿಸೋಜಾ ಕೇಳಿದಾಗ ಸಚಿವರು ಹೀಗೆ ಉತ್ತರಿಸಿದರು.

ನೀಟ್ ವ್ಯವಸ್ಥೆಯಿಂದ ರಾಜ್ಯದ ವೈದ್ಯಕೀಯ ಸೀಟುಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ನಾವು ನೀಟ್ ಪದ್ಧತಿಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೆವು. ಆದರೆ ಸುಪ್ರೀಂ ಕೋರ್ಟ್ ಈ ಪದ್ಧತಿಯ ಪರವಾಗಿ ತೀರ್ಪು ನೀಡಿದೆ. ಆದ್ದರಿಂದ ರಾಜ್ಯದ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರವು ಹಂತ ಹಂತವಾಗಿ ಪರಿಣಾಮಕಾರಿ ಕೋಚಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಿದೆ ಎಂದು ಸಚಿವರು ಭರವಸೆ ನೀಡಿದರು.

ವೈದ್ಯಕೀಯ ಶಿಕ್ಷಣ ಪಡೆಯಲು ನೀಟ್ ಪರೀಕ್ಷೆ ಕಡ್ಡಾಯವಾದಾಗಿನಿಂದ, ಕರ್ನಾಟಕದ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ದೊಡ್ಡ ಸವಾಲು ಎದುರಾಗಿದೆ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಸರಿಯಾದ ಮಾರ್ಗದರ್ಶನ ಇಲ್ಲದೆ ವೈದ್ಯಕೀಯ ಸೀಟು ಪಡೆಯಲು ಪರದಾಡುತ್ತಿದ್ದಾರೆ. ಈ ಪರೀಕ್ಷೆಯನ್ನು ಎದುರಿಸುವುದೊಂದೇ ವಿದ್ಯಾರ್ಥಿಗಳ ಮುಂದಿರುವ ದಾರಿಯಾಗಿದೆ. ಹೀಗಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಿದರು.

ಪದವಿಪೂರ್ವ ಕಾಲೇಜುಗಳಲ್ಲಿಯೇ ವಿಶೇಷ ತರಬೇತಿ ಮತ್ತು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಗಳನ್ನು ಸರ್ಕಾರ ರೂಪಿಸುತ್ತಿದೆ. ನೀಟ್‌ ಉಚಿತ ತರಬೇತಿ ಭರವಸೆಯು ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು ಹೆಚ್ಚಿಸಿದೆ.

Related Posts

Leave a Reply

Your email address will not be published. Required fields are marked *