ಬೆಳಗಾವಿ: ಸರ್ಕಾರವೇ ಸ್ವಯಂ ಪ್ರೇರಿತವಾಗಿ ರೈತರ ಮನೆ ಬಾಗಿಲಿಗೆ ಹೋಗಿ ಅಭಿಯಾನ ಮಾದರಿಯಲ್ಲಿ ದರ್ಖಾಸ್ತು ಪೋಡಿ ಮಾಡಿಕೊಡುತ್ತಿದ್ದು, ಕನಿಷ್ಟ ದಾಖಲೆ ಇದ್ದರೂ ಪೋಡಿ ಮಾಡಿಕೊಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನ ಪರಿಷತ್ನಲ್ಲಿ ಮಂಗಳವಾರ ಸದಸ್ಯರಾದ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ ಕಳೆದ 5 ವರ್ಷದ ಸರ್ಕಾರದ ಅವಧಿಯಲ್ಲಿ 8,500 ದರ್ಖಾಸ್ತಿ ಪೋಡಿ ಆಗಿತ್ತು. ಆದರೆ, ನಾವು ಜನವರಿಯಿಂದ ಈ ಅಭಿಯಾನ ಆರಂಭಿಸಿದ ಮೇಲೆ ಡಿಸೆಂಬರ್ ಒಳಗೆ 1,55,000 ಪೋಡಿ ಮಾಡಿಕೊಟ್ಟಿದ್ದೇವೆ. ನಿಯಮದಲ್ಲಿ ಬದಲಾವಣೆ ತಂದು ಸರಳೀಕರಣಗೊಳಿಸಿ ದಾಖಲಾತಿಗಳ ಅವಶ್ಯಕತೆಯನ್ನೇ ಕಡಿಮೆ ಮಾಡಿ ರೈತರಿಗೆ ಪೋಡಿ ಮಾಡಿಕೊಟ್ಟಿದ್ದೇವೆ” ಎಂದು ಮಾಹಿತಿ ನೀಡಿದರು.
“1,55,000 ಪ್ರಕರಣಗಳನ್ನು ಸರ್ವೇಗೆ ತೆಗೆದುಕೊಂಡಿದ್ದೇವೆ. ಇದಲ್ಲದೆ, 1,60,000 ಪ್ರಕರಣಗಳು ದಾಖಲಾತಿ ಕೊರತೆಯಿಂದಾಗಿ ಪೋಡಿ ಮಾಡಲು ಸಾಧ್ಯವಿಲ್ಲ ಎಂದು ಮಿಸ್ಸಿಂಗ್ ರೆಕಾರ್ಡ್ಸ್ ಕಮಿಟಿಗೆ ಕಳುಹಿಸಿದ್ದೇವೆ. ಅಲ್ಲೂ ಸಹ ಕೆಲವು ಸರಳೀಕೃತ ಮಾರ್ಗಸೂಚಿ ಹಾಕಿ ಕೊಟ್ಟಿದ್ದೇನೆ. ಯಾರ ಬಳಿ ಎರಡು ದಾಖಲೆಗಳು ಇವೆಯೋ ಅಂತವುಗಳನ್ನು ಕಮಿಟಿಯಲ್ಲಿ ಪಾಸ್ ಮಾಡಬೇಕು ಎಂದು ಹೇಳಿದ್ದೇನೆ. ಇದು ಸಾಧ್ಯವಾದರೆ ಕನಿಷ್ಟ ಶೇ.30 ರಷ್ಟು ಪ್ರಕರಣಗಳು ಅಂತ್ಯವಾಗುತ್ತವೆ. ಆ ಮೂಲಕ ಎರಡು ಲಕ್ಷ ಪ್ರಕರಣಗಳಲ್ಲಿ ರೈತರಿಗೆ ಪೋಡಿ ಮಾಡಿಕೊಟ್ಟಂತಾಗುತ್ತದೆ. ಉಳಿದಂತೆ ಬಾಕಿ ಇರುವ ಪ್ರಕರಣಗಳನ್ನು ತದನಂತರ ಕೈಗೆತ್ತಿಕೊಳ್ಳಲಾಗುವುದು” ಎಂದರು.
“ಪೋಡಿ ಅಭಿಯಾನದ ಅಡಿಯಲ್ಲಿ ಎಲ್ಲಾ ಪ್ರಕರಣಗಳನ್ನೂ ಹಂತಹಂತವಾಗಿ ಮುಗಿಸಲಾಗುತ್ತಿದೆ. ಆರಂಭದಲ್ಲಿ ದಾಖಲೆಗಳು ಪಕ್ಕಾ ಇದ್ದ ರೈತರಿಗೆ ಪೋಡಿ ಮಾಡಿಕೊಡಲಾಗಿತ್ತು. ತದನಂತರ ಕನಿಷ್ಟ ದಾಖಲೆ ಇರುವುದನ್ನು ಈಗ ಮಾಡಿದ್ಧೆವೆ. ಈ ಕೆಲಸ ಮುಗಿದ ಮೇಲೆ ಏನೂ ದಾಖಲೆ ಇಲ್ಲದ್ದ ಪ್ರಕರಣಗಳಿಗೂ ಸರಳ ಮಾರ್ಗ ಹುಡುಕಲಾಗುವುದು” ಎಂದು ಭರವಸೆ ನೀಡಿದರು.


