Saturday, January 10, 2026
Menu

ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ: ಸಿಎಂ ಸಿದ್ಧರಾಮಯ್ಯ

vijayapura news

ವಿಜಯಪುರ: ಜಿಲ್ಲೆಯ ಜನರ ಒತ್ತಾಸೆಯಂತೆ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಹಾಗೂ ವಿಜಯಪುರ ನಗರದಲ್ಲಿ 160 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದರು.

ವಿಜಯಪುರ ನಗರ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಪ್ರತಿಷ್ಠಾಪಿಸಲಾದ ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರತಿಮೆ ಅನಾವರಣ, ಬಸ್ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ ನಾಮಕರಣ, ಸೈಕ್ಲಿಂಗ್ ವೆಲೋಡ್ರೋಮ್ ಉದ್ಘಾಟನೆ, ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಅವರು ಮಾತನಾಡಿದರು.

ಈಗಾಗಲೇ ಘೋಷಿಸಿದಂತೆ ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕ್ರಮ ವಹಿಸಲಾಗುವುದು. ರಾಜ್ಯದಲ್ಲಿ 71 ವೈದ್ಯಕೀಯ ಕಾಲೇಜ್‍ಗಳಿವೆ. ಈ ಪೈಕಿ 22 ಸರ್ಕಾರಿ ವೈದ್ಯಕೀಯ ಕಾಲೇಜ್‍ಗಳಿವೆ. ಸರ್ಕಾರಿ ವೈದ್ಯಕೀಯ ಕಾಲೇಜ್‍ಗಳಲ್ಲದ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್‍ಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದು. ಇದರೊಂದಿಗೆ ಪ್ರತಿ ಜಿಲ್ಲೆಗಳಲ್ಲಿ ಟ್ರಾಮಾ ಸೆಂಟರ್, ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು ಎಂದು ಅವರು  ಹೇಳಿದರು.

ಜಿಲ್ಲೆಯಲ್ಲಿ 800 ಕ್ಕೂ ಹೆಚ್ಚು ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. 82 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ 730 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳ ಶಂಕುಸ್ಥಾಪನೆ ಮಾಡಲಾಗಿದೆ. ರಾಣಿ ಚನ್ನಮ್ಮ ಪ್ರತಿಮೆ ಲೋಕಾರ್ಪಣೆ ಸೇರಿದಂತೆ ಕಿತ್ತೂರು ರಾಣಿ ಚೆನ್ನಮ್ಮ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. ಈ ಭಾಗದಲ್ಲಿ ಸೈಕ್ಲಿಸ್ಟ್‍ಗಳಿಗಾಗಿ, ದಕ್ಷಿಣ ಭಾರತದಲ್ಲಿಯೇ ಮೊದಲ ವೆಲೊಡ್ರೋಮ್‍ನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ವಿಜಯಪುರ ಶಾಸಕರು ಅನೇಕ ಬೇಡಿಕೆಗಳನ್ನು ಇಟ್ಟಿದ್ದು, ಕನಕದಾಸ ವೃತ್ತದಿಂದ ಅಂಬೇಡ್ಕರ್ ಹಾಗೂ ಶಿವಾಜಿ ವೃತ್ತದವರೆಗೆ 160 ಕೋಟಿ ವೆಚ್ಚದ ಮೂರು ಕಿಮೀ ಮೇಲ್ಸೇತುವೆ ಮಾಡಬೇಕೆಂದು ಮನವಿ ಮಾಡಿದ್ದು ಅದನ್ನು ನೆರವೇರಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.

ಜನಾರ್ಶೀವಾದದಿಂದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆ ಸಾಧ್ಯ :

ಮುಖ್ಯಮಂತ್ರಿ ದೇವರಾಜ  ಅರಸು ಅವರ 7 ವರ್ಷ 239 ದಿನಗಳ ಸುದೀರ್ಘ ಅವಧಿಗೆ ಮುಖ್ಯಮಂತ್ರಿ ಆಗಿದ್ದ ದಾಖಲೆಯನ್ನು ಮುರಿದು ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆ ಮಾಡಲು ಜನರ ಆಶೀರ್ವಾದದಿಂದ ಸಾಧ್ಯವಾಗಿದೆ. ಅದಕ್ಕಾಗಿ ರಾಜ್ಯದ  ಜನತೆಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ಅವರು ಹೇಳಿದರು.

ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಮಾತನಾಡಿ, ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರತಿಮೆ ಅನಾವರಣ, ಬಸ್ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ ನಾಮಕರಣ ಮಾಡುವ ಮೂಲಕ ವೀರರಾಣಿ ಕಿತ್ತೂರಾಣಿ ಚೆನ್ನಮ್ಮ ಅವರನ್ನು ಗೌರವ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಹಿಂದಿನ ಅವಧಿಯಲ್ಲಿ ಕಿತ್ತೂರಾಣಿ ಚೆನ್ನಮ್ಮ ಮೂರ್ತಿ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿದ್ದರು. ಇಂದು ಅವರೇ ಮೂರ್ತಿ ಅನಾವರಣಗೊಳಿಸುತ್ತಿರುವುದು ಅತ್ಯಂತ ಸೌಭಾಗ್ಯವಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ 870.88 ಕೋಟಿ ರೂ. ವೆಚ್ಚದ ವಿವಿಧ 24 ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ, ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ್ದೇ ಅಭಿವೃದ್ದಿ ಪರ ಸರ್ಕಾರಕ್ಕೆ ಸಾಕ್ಷಿಯಾಗಿದೆ. ಜಿಲ್ಲೆಯ ಎರಡು ದಶಕಗಳ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ನಿರ್ಮಿಸಲಾದ ಸೈಕ್ಲಿಂಗ್ ವೆಲೋಡ್ರೋಮ್ ಉದ್ಘಾಟನೆ ನೆರವೇರಿಸಲಾಗಿದ್ದು, ಇದರಿಂದ ಸೈಕ್ಲಿಸ್ಟ್ ಕ್ರೀಡಾಪಟುಗಳು ರಾಷ್ಟ್ರ-ಅಂತರರಾಷ್ಟ್ರ ಮಟ್ಟದಲ್ಲಿ ಸಾಧನೆಗೈಯಲು ಅನುಕೂಲವಾಗಲಿದೆ. ಒಟ್ಟಾರೆ ಜಿಲ್ಲೆಯ ಅಭಿವೃದ್ದಿಗೆ 800 ಕೋಟಿ ರೂ.ಗೂ ಹೆಚ್ಚಿನ ಅನುದಾನ ಒದಗಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿಗೆ ಪಾತ್ರರಾದ ಸಾಮಾಜಿಕ ನ್ಯಾಯ ಹೊಂದಿದ ಬದ್ಧತೆಯ ನಾಯಕರಾದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಎಲ್ಲ ಸಮಾಜ-ವರ್ಗಕ್ಕೆ ಸಾಮಾಜಿಕವಾಗಿ ನ್ಯಾಯ ಒದಗಿಸುವ ಅಪರೂಪದ ಜನನಾಯಕ. 1983ರಲ್ಲಿ ಮೊದಲನೇ ಬಾರಿ ಶಾಸಕರಾದ ಇವರು 8 ಬಾರಿ ಆಯ್ಕೆಯಾಗಿದ್ದಾರೆ. 1996 ಹಾಗೂ 2004ರಲ್ಲಿ ಉಪಮುಖ್ಯಮಂತ್ರಿಗಳಾಗಿ, 16 ಬಾರಿ ಬಜೆಟ್ ಮಂಡಿಸುವ ಮೂಲಕ ರಾಜ್ಯ ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ಶ್ರಮಿಸಿದ ಮುಖ್ಯಮಂತ್ರಿಗಳು, ಬಸವಣ್ಣನವರನ್ನು ಸಾಂಸ್ಕøತಿಕ ನಾಯಕರೆಂದು ಘೋಷಣೆ ಮಾಡುವ ಮೂಲಕ ಶರಣ ಆಶಯದಂತೆ ನಡೆಯುತ್ತ, ನುಡಿದಂತೆ ನಡೆಯುವ ಮೂಲಕ ಅಭಿವೃದ್ದಿ ಹೊಂದಿದ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಹರಿಹರ ಪೀಠದ ವಚನಾನಂದ ಶ್ರೀಗಳು ಆಶೀರ್ವಚನ ನೀಡಿದರು. ಜಿಲ್ಲಾಧಿಕಾರಿ ಡಾ.ಆನಂದ ಕೆ. ಸ್ವಾಗತಿಸಿದರು. ನಗರ ಶಾಸಕರಾದ ಬಸನಗೌಡ ಆರ್. ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಚಿವ ರಾಮಲಿಂಗಾರೆಡ್ಡಿ, ಸಚಿವ ಡಾ. ಹೆಚ್. ಸಿ. ಮಹದೇವಪ್ಪ, ಸಚಿವ ಸುರೇಶ .ಬಿ.ಎಸ್, ಸಚಿವ ಡಾ. ಎಂ.ಸಿ. ಸುಧಾಕರ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ದೆಹಲಿಯ ವಿಶೇಷ ಪ್ರತಿನಿಧಿ-2 ಹಾಗೂ ಶಾಸದಕರಾದ ಪ್ರಕಾಶ ಬಿ. ಹುಕ್ಕೇರಿ, ಕರ್ನಾಟಕ ಸೋಪ್ಸ್ ಮತ್ತು ಡಿಟಜೆರ್ಂಟ್‍ನ ಅಧ್ಯಕ್ಷರೂ ಆದ ಶಾಸಕ ಅಪ್ಪಾಜಿ ಸಿ.ಎಸ್. ನಾಡಗೌಡ, ಶಾಸಕ ಯಶವಂತರಾಯಗೌಡ ವಿ ಪಾಟೀಲ, ಸುನೀಲಗೌಡ.ಬಿ. ಪಾಟೀಲ, ವಿಠ್ಠಲ ಕಟಕಧೋಂಡ, ಅಶೋಕ ಮನಗೂಳಿ, ಕೌಶಲ್ಯಾಭಿವೃದ್ಧಿ ನಿಗಮ ಅಧ್ಯಕ್ಷ ಕಾಂತಾ ನಾಯ್ಕ, ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕರ್ನಾಟಕ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ. ಎಸ್. ಕವಲಗಿ, ಮಹಾನಗರ ಪಾಲಿಕೆ ಮಹಾಪೌರ ಮಡಿವಾಳಪ್ಪ ಸಿದ್ಧರಾಮಪ್ಪ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕನಾನ್ ಮುಶ್ರೀಫ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣಿ, ಸಂಗನಬಸವ ಸ್ವಾಮಿ ಹಾಗೂ ಯೋಗೇಶ್ವರಿ ಮಾತಾಜಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *