ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (MGNREGA) ಸಮಗ್ರ ಬದಲಾವಣೆ ಮೂಲಕ ಹೊಸದಾಗಿ ಗ್ರಾಮೀಣ ಉದ್ಯೋಗ ಯೋಜನೆ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಯೋಜನೆಯ ಹೆಸರನ್ನು ದಿ ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಎಂದು ಮರು ನಾಮಕರಣ ಮಾಡಲು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಮುಂದಾಗಿದ್ದು, ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲೇ ಮಸೂದೆ ಮಂಡನೆ ಆಗುವ ಸಾಧ್ಯತೆ ಇದೆ.
ದಿ ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಸಂಕ್ಷಿಪ್ತವಾಗಿ VB G RAM G ಎಂದು ಕರೆಯಲಾಗುತ್ತದೆ. ಹೊಸ ಮಸೂದೆಯು ವಿಕ್ಷಿತ್ ಭಾರತ್ 2047 (Viksit Bharat 2047) ದೃಷ್ಟಿಕೋನವನ್ನು ಪೂರೈಸುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಹೇಳಿಕೊಂಡಿದೆ.
2005ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಖಾತರಿಪಡಿಸುವ MGNREGA ಯೋಜನೆಯನ್ನು ಜಾರಿಗೊಳಿಸಿದ್ದು,ಈ ಯೋಜನೆಯ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 100 ದಿನಗಳ ಕೆಲಸವನ್ನು ಖಾತರಿಪಡಿಸುತ್ತದೆ. ಹೊಸ ಮಸೂದೆಯಲ್ಲಿ 100 ದಿನಗಳ ಖಾತರಿಯನ್ನು 125ಕ್ಕೆ ಹೆಚ್ಚಿಸಲಾಗಿದೆ. ಕೆಲಸ ಪೂರ್ಣಗೊಂಡ ಒಂದು ವಾರ ಅಥವಾ 15 ದಿನಗಳಲ್ಲಿ ಪಾವತಿಗಳನ್ನು ಮಾಡಲಾಗುತ್ತದೆ. ಗಡುವಿನೊಳಗೆ ಪಾವತಿಗಳನ್ನು ಮಾಡದಿದ್ದರೆ, ನಿರುದ್ಯೋಗ ಭತ್ಯೆಗೆ ಅವಕಾಶವೂ ಇದೆ.
ಹೊಸ ಮಸೂದೆಯು ಯೋಜನೆಯಡಿಯಲ್ಲಿ ಕೆಲಸವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸುತ್ತದೆ – ನೀರಿನ ಭದ್ರತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಮೂಲಸೌಕರ್ಯ ಮತ್ತು ವಿಪತ್ತು ಎಂದು ವಿಂಗಡಿಸಲಾಗಿದೆ.
ಗ್ರಾಮೀಣ ಪ್ರದೇಶದ ನಿವಾಸಿಗಳು ಕೃಷಿ ಋತುವಿನಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯೋಮೆಟ್ರಿಕ್ಸ್ ಮತ್ತು ಜಿಯೋಟ್ಯಾಗಿಂಗ್ ಅನ್ನು ಬಳಸಲಾಗುತ್ತದೆ.
ಜಿ ರಾಮ್ ಜಿ ಯೋಜನೆಯಡಿಯಲ್ಲಿ, ಕೇಂದ್ರ ಮತ್ತು ಹೆಚ್ಚಿನ ರಾಜ್ಯಗಳು 60:40 ಅನುಪಾತದಲ್ಲಿ ವೆಚ್ಚಗಳನ್ನು ಹಂಚಿಕೊಳ್ಳುತ್ತವೆ. ಈ ಅನುಪಾತವು ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳಿಗೆ 90:10 ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 100 ಪ್ರತಿಶತ ಇರುತ್ತದೆ. ವಾರ್ಷಿಕವಾಗಿ 1.51 ಲಕ್ಷ ಕೋಟಿ ರೂ.ಗಳ ಪ್ರಸ್ತಾವಿತ ವೆಚ್ಚದಲ್ಲಿ ಕೇಂದ್ರವು 95,692 ಕೋಟಿ ರೂ.ಗಳನ್ನು ಒದಗಿಸುತ್ತದೆ.


