Thursday, January 29, 2026
Menu

ಚಿತ್ರೋದ್ಯಮದ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ದ: ಸಿಎಂ ಸಿದ್ದರಾಮಯ್ಯ

film festval

ಬೆಂಗಳೂರು: ಸಿನಿಮಾಗಳು ಮನರಂಜನೆಗೆ ಸೀಮಿತವಾಗದೆ ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ “17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ”ವನ್ನು ಉದ್ಘಾಟಿಸಿ ಮಾತನಾಡಿದರು.

ಸಿನಿಮಾ ಮನರಂಜನೆ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಾಧನವಾಗಲಿ ಎಂದು ಕರೆ ನೀಡಿದರು.

ಸಮಾಜದಲ್ಲಿ ಅಸಮಾನತೆ ಇದೆ. ಅಸಮಾನತೆಗೆ ತುತ್ತಾಗಿರುವ ಮಹಿಳೆಯರು, ಹಿಂದುಳಿದವರು, ರೈತ, ದಲಿತ ಸಮುದಾಯಗಳಿವೆ. ಈ ಸಮುದಾಯಗಳ ಬೆಳವಣಿಗೆ ಮತ್ತು ಬದಲಾವಣೆಗೆ ಆತ್ಮವಿಶ್ವಾಸ ತುಂಬುವ ರೀತಿಯಲ್ಲಿ ಶ್ರಮಿಸಿದಾಗ ಸಿನಿಮಾ ಮಾಧ್ಯಮದ ಆಶಯ ಮತ್ತು ಉದ್ದೇಶ ಈಡೇರಿದಂತಾಗುತ್ತದೆ. ಡಾ.ರಾಜ್ ಕುಮಾರ್ ಅವರ ಸಿನಿಮಾಗಳಲ್ಲಿ ಈ ಸಾಮಾಜಿಕ‌ ಜವಾಬ್ದಾರಿಯನ್ನು ಕಾಣಲು ಸಾಧ್ಯವಿತ್ತು ಎಂದು ಸ್ಮರಿಸಿದರು.

ವಿಶ್ವದ ಇತರೆ ಸಮಾಜಗಳು ಹಾಗೂ ಇತರೆ ದೇಶಗಳ ಜನ ಜೀವನ ಮತ್ತು ಸಂಸ್ಕೃತಿ, ಸಮಾನತೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಸಮಾಜದಲ್ಲಿ ಬದಲಾವಣೆ ತರಲು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನೆರವಾಗಲಿ ಎಂದರು.

ನಾವು ಪ್ರಥಮವಾಗಿ, ಅಂತಿಮವಾಗಿ ಮನುಷ್ಯರು. ನಾವು ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣುವ ಮೂಲಕ ಸಮ ಸಮಾಜ ಕಟ್ಟುವ ಕೆಲಸ ಮಾಡಬೇಕು. ಇದಕ್ಕೆ ಚಲನಚಿತ್ರ ಮಾಧ್ಯಮ‌ ನೆರವಾಗಬೇಕು ಎಂದರು.

ಇತರೆ ದೇಶಗಳಲ್ಲಿ‌ನ‌ ಮಾನವೀಯ ಸಂಬಂಧಗಳು, ಇತರೆ ದೇಶಗಳಲ್ಲಿ ಆಚರಣೆಯಲ್ಲಿರುವ ಸಮ ಸಮಾಜದ ಆಚರಣೆಗಳು ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ ಎಂದರು.

ಸಮಾಜಮುಖಿ ಸಿನಿಮಾ ಮಾಡುವವರಿಗೆ- ಚಿತ್ರೋದ್ಯಮದ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಸಿದ್ದವಿದೆ. ಅಗತ್ಯವಿರುವ ಎಲ್ಲಾ ನೆರವುಗಳನ್ನು ನೀಡಲು ಸರ್ಕಾರ ಬದ್ದವಾಗಿದೆ ಎಂದರು.

ಪ್ರಕಾಶ್ ರಾಜ್ ಸಿನಿಮಾಗೆ ಸೀಮಿತವಾಗಿಲ್ಲ

ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಸಿನಿಮಾಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಶೋಷಿತ, ರೈತ, ದಲಿತ, ಹಿಂದುಳಿದವರು ಮತ್ತು ಸಂವಿಧಾನದ ಆಶಯಗಳ‌ ಪರವಾಗಿ ಹೋರಾಡುತ್ತಿದ್ದಾರೆ. ಇವರ ಈ ಸಾಮಾಜಿಕ ಬದ್ದತೆ ಅಭಿನಂದನೀಯ ಎಂದರು.

ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧು ಕೋಕಿಲ, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಮುರಳಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಬಹುಭಾಷಾ ನಟ ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್, ಖ್ಯಾತ ನಟಿ ರುಕ್ಮಿಣಿ ವಸಂತ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು, ವಿಧಾನ‌ ಪರಿಷತ್ ಸದಸ್ಯೆ ನಟಿ ಉಮಾಶ್ರೀ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಚಲನಚಿತ್ರ ಅಕಾಡೆಮಿ ಸದಸ್ಯರಾದ ಚಿದಾನಂದ ಪಟೇಲ್ ಸೇರಿ ಹಲವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *