“ಪ್ರಸ್ತುತ ಪರಿಸ್ಥಿತಿಯಲ್ಲಿ ಚಲನಚಿತ್ರ ರಂಗ ಹಲವು ಸವಾಲು ಎದುರಿಸುತ್ತಿದೆ. ಈ ವಿಚಾರವಾಗಿ ಅಧ್ಯಯನ ಮಾಡಿ ವರದಿ ನೀಡಿ, ಉದ್ಯಮದ ಉತ್ತೇಜನಕ್ಕೆ ಸರ್ಕಾರ ಅಗತ್ಯ ನೆರವು ನೀಡಲಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಸಭಾಂಗಣದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ನಟ ಅನಂತನಾಗ್ ಹಾಗೂ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಸಿನಿಮಾ ಸಾಹಸ ನಿರ್ದೇಶಕ ಹಾಸನ್ ರಘು ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
“ರಾಜಕೀಯಕ್ಕೂ ಸಿನಿಮಾಗೂ ಬಹಳ ನಂಟಿದೆ. ನೀವು ಬಣ್ಣ ಹಚ್ಚಿ ನಾಟಕ ಮಾಡಿದರೆ ನಾವು ರಾಜಕಾರಣಿಗಳು ಬಣ್ಣ ಹಾಕದೇ ನಾಟಕ ಆಡುತ್ತಿದ್ದೇವೆ. ಇದೇ ನಮಗೂ ನಿಮಗೂ ಇರುವ ವ್ಯತ್ಯಾಸ. ಚಿತ್ರರಂಗದ ಅನೇಕರು ನನ್ನನ್ನು ಭೇಟಿ ಮಾಡುತ್ತಲೇ ಇರುತ್ತಾರೆ. ಕಳೆದ ಕೆಲವು ವರ್ಷಗಳಿಂದ ಸ್ಯಾಂಡಲ್ ವುಡ್ ಬಾಲಿವುಡ್ ಅನ್ನು ಮೀರಿಸುವಂತೆ ಆಗಿದೆ ಎಂದು ಚರ್ಚೆ ಆಗುತ್ತಿದೆ. ಇದನ್ನು ಉಳಿಸಿಕೊಳ್ಳಬೇಕು. ಚಿತ್ರಮಂದಿರಗಳ ಸಂಖ್ಯೆ ಕಡಿಮೆ, ಮನೆಗಳಿಗೆ ಓಟಿಟಿ ತಲುಪಿರುವುದು ಸೇರಿದಂತೆ ಅನೇಕ ಸಮಸ್ಯೆಗಳಿವೆ, ಈ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಿ” ಎಂದು ಹೇಳಿದರು.
“ಇತ್ತೀಚಿಗೆ ಸಿನಿಮಾ ವಿತರಕರು, ಪ್ರದರ್ಶಕರು ಭೇಟಿ ಮಾಡಿ ಅನೇಕ ವಿಚಾರ ಚರ್ಚೆ ಮಾಡಿದರು. ಸಿನಿಮಾ ರಂಗ ಬೆಳೆಯುತ್ತಿದೆ. ನಟರು, ನಿರ್ಮಾಪಕರು ಐವತ್ತು ಜನ ಇದ್ದರೂ ಆ ಸಿನಿಮಾದಲ್ಲಿ ಸಾವಿರಾರು ಮಂದಿ ಕೆಲಸ ಮಾಡುತ್ತಿರುತ್ತಾರೆ. ಕಲೆ ಯಾರಪ್ಪನ ಮನೆ ಆಸ್ತಿಯಲ್ಲ.ನಾವು ಇದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು” ಎಂದು ತಿಳಿಸಿದರು.
“ಇತ್ತೀಚಿಗೆ ಬಿಗ್ ಬಾಸ್ ವಿಚಾರವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟೀಸ್ ವಿಚಾರದಲ್ಲಿ ನಾನು ಮಧ್ಯಪ್ರವೇಶ ಮಾಡಬೇಕಾಯ್ತು. ಅವರು ಯಾವ ಕಾರಣಕ್ಕೆ ಕೊಟ್ಟರೋ ಗೊತ್ತಿಲ್ಲ. ಆದರೆ ಸಾವಿರಾರು ಜನ ಕೆಲಸ ಮಾಡುತ್ತಿರುತ್ತಾರೆ, ಸಾರ್ವಜನಿಕರ ಗಮನ ಇರುತ್ತದೆ ಎಂಬ ಅರಿವು ನಮಗಿದೆ. ಹೀಗಾಗಿ ಅಧಿಕಾರಿಗಳಿಗೆ ಹೇಳಿ ಮತ್ತೇ ಅವಕಾಶ ಮಾಡಿಕೊಟ್ಟೆ. ಅದೇನೇ ಇದ್ದರು ಈ ಉದ್ಯಮ ನಡೆಯುತ್ತಿದೆ, ಸ್ಪರ್ಧೆ ಹೆಚ್ಚಾಗಿದೆ. ತಂತ್ರಜ್ಞಾನ ಬೆಳೆಯುತ್ತಿದೆ” ಎಂದರು.
ಅನಂತನಾಗ್ ಅವರು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅನಂತ್ ನಾಗ್ ಅವರು ರಾಜಕೀಯ ಪ್ರವೇಶಿಸಿ ಅವರು ನಗರಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರು ಯಾವುದೇ ವಿವಾದಕ್ಕೆ ಸಿಲುಕಲಿಲ್ಲ. ಅನಂತ್ ನಾಗ್ ಅವರು ನನಗಿಂತ ದೊಡ್ಡವರು. ಆದರೆ ನನಗಿಂತ ಚಿಕ್ಕವರಂತೆ ಕಾಣುತ್ತಿದ್ದಾರೆ. ಅನಂತನಾಗ್ ಅವರನ್ನು ಅಭಿನಂದಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಅವರು ಸಣ್ಣ ವಯಸ್ಸಿನಿಂದ 7 ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ ಎಂದರು.
“ಹತ್ತು ಸಿನಿಮಾ ಮಾಡಿದರೆ ಒಂದೋ ಎರಡೂ ಯಶಸ್ವಿಯಾಗುತ್ತವೆ. ಈಗ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಚಿತ್ರರಂಗಕ್ಕೆ ಬಂದರು. ಪ್ರಯತ್ನ ಮಾಡಿ ಹೋದರು. ಈ ಉದ್ಯಮದಲ್ಲಿ ಬಡ್ಡಿ ವ್ಯವಹಾರ ನೋಡಿದರೆ ನನಗೆ ಭಯವಾಗುತ್ತೆ. ಆದರೂ ನೀವು ರಿಸ್ಕ್ ತಗೋತೀರಿ. ಮಾಧ್ಯಮಗಳು ಕೆಲವು ಸಂದರ್ಭದಲ್ಲಿ ಮೇಲಕ್ಕೆ ಹತ್ತಿಸುತ್ತಾರೆ, ಮತ್ತೇ ಕೆಲವೊಮ್ಮೆ ಅಲ್ಲಿಂದ ಕೆಳಗೆ ಬೀಳಿಸುತ್ತವೆ. ಜೀರೊ ಹೀರೊ ಆಗುತ್ತಾನೆ. ಹೀರೊ ಜೀರೊ ಆಗುತ್ತಾನೆ” ಎಂದು ಹೇಳಿದರು.
“ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ | ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮಿದಂ ಶರೀರಂ. ಅಂದರೆ ನದಿ ನೀರು, ಮರದ ಹಣ್ಣು, ಹಸುವಿನ ಹಾಲು ಹೇಗೆ ಬೇರೆಯವರ ಉಪಕಾರಕ್ಕೆ ಇದೆಯೋ ಅದೇರೀತಿ ನಮ್ಮ ದೇಹ ಕೂಡ ಪರೋಪಕಾರಕ್ಕೆ ಇರಬೇಕು. ಸಮಾಜಕ್ಕೆ ಉಪಯೋಗವಾಗಬೇಕು. ಅದೇ ರೀತಿ ಸಿನಿಮಾರಂಗದವರು ಸಮಾಜಕ್ಕೆ ಉತ್ತಮ ಸೇವೆ ಮಾಡುತ್ತಿದ್ದಾರೆ. ಅನಂತ ನಾಗ್ ಅವರಿಗೆ ಬಂದಿರುವ ಪ್ರಶಸ್ತಿ ಕೂಡ ಅವರೊಬ್ಬರಿಗೆ ಮಾತ್ರವಲ್ಲ. ಅದು ಇಡೀ ಚಿತ್ರರಂಗಕ್ಕೆ ಸಿಕ್ಕ ಗೌರವ” ಎಂದು ತಿಳಿಸಿದರು.
“ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಅದೇ ರೀತಿ ಅನಂತ ನಾಗ್ ಅವರು ತಮ್ಮ ಬದುಕಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಅವರಿಗೆ, ಅವರ ಕುಟುಂಬ, ಅಭಿಮಾನಿಗಳಿಗೆ ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದರು.